ಶಿವಮೊಗ್ಗ : ಮನೆಯ ಸ್ತ್ರೀ ಆರೋಗ್ಯವಾಗಿದ್ದರೆ ಆ ಕುಟುಂಬವೇ ಜೀವಕಳೆಯಿಂದ ತುಂಬಿರುತ್ತದೆ. ಆರೋಗ್ಯವಂತ ಮಹಿಳೆ ಮನೆಯ ಭದ್ರ ಬುನಾದಿಯಾಗಿರುತ್ತಾಳೆ ಎಂದು ಸರ್ಜಿ ಪುಷ್ಯ ಮೆಟರ್ನಿಟಿ ಸೆಂಟರ್ ನ ಸ್ತ್ರೀರೋಗ, ಬಂಜೆತನ ನಿವಾರಣೆ ಹಾಗೂ ಲ್ಯಾಪರೋಸ್ಕೋಪಿಕ್ ತಜ್ಞ ವೈದ್ಯೆ ಡಾ. ಚಂದುಶ್ರೀ.ಬಿ.ಪಿ ಅಭಿಪ್ರಾಯಪಟ್ಟರು.
ರೋಟರಿ ಸಂಸ್ಥೆಯು ವಿಶ್ವದಾದ್ಯಂತ ಜುಲೈ ತಿಂಗಳನ್ನು ತಾಯಂದಿರ ಆರೋಗ್ಯ ಹಾಗೂ ಮಕ್ಕಳ ಕಾಳಜಿಗೆಂದೇ ಮೀಸಲಿಟ್ಟಿದೆ. ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ತನ್ನ ಸಾಪ್ತಾಹಿಕ ಸಭೆಯಲ್ಲಿ ಕ್ಲಬ್ ನ ಸದಸ್ಯರ ಕುಟುಂಬದವರಿಗಾಗಿ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಗರ್ಭಿಣಿ ಸ್ತ್ರೀಯರ ಆರೋಗ್ಯ ಹಾಗೂ ಮಕ್ಕಳ ಆರೋಗ್ಯ ಕಾಳಜಿ ಕುರಿತಾಗಿ ಮಹತ್ವದ ವಿಷಯಗಳನ್ನು ತಿಳಿಸಿಕೊಟ್ಟ
ಅವರು, “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂಬ ಮಾತಿನಂತೆ ನಾರಿಯನ್ನು ಪೂಜಿಸುವುದೆಂದರೆ ಕೇವಲ ಆಕೆಯನ್ನು ಗೌರವಿಸುವುದಷ್ಟೆ ಅಲ್ಲ, ಆಕೆಯ ಆರೋಗ್ಯದ ಕಾಳಜಿ ಮಾಡುವುದನ್ನೂ ಒಳಗೊಂಡಿದೆ. ಗರ್ಭಿಣಿಯರಲ್ಲಿ ಹಾಗೂ ಮಕ್ಕಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದ ಉಂಟಾಗುವ ದುಷ್ಪರಿಣಾಮಗಳು, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗುತ್ತಿರುವ ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳು, ಗರ್ಭಕೋಶ ಕಂಠದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮುಂತಾದ ಸಮಸ್ಯೆಗಳಿಗೆ ಕಾರಣಗಳು ಹಾಗೂ ಅವುಗಳನ್ನು ತಡೆಗಟ್ಟಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಅತ್ಯುಪಯುಕ್ತ ಮಾಹಿತಿ ನೀಡಿದರು.
ಉಪನ್ಯಾಸದ ನಂತರ ವೈದ್ಯರೊಡನೆ ನಡೆದ ಸಂವಾದದಲ್ಲಿ ಸಭೆಯಲ್ಲಿದ್ದ ಮಹಿಳೆಯರು ತಮ್ಮ ಅನೇಕ ಸಂಶಯಗಳಿಗೆ ಸೂಕ್ತ ಉತ್ತರ ಪಡೆದುಕೊಂಡರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೊ. ಮುಶ್ತಾಕ್ ಮಾತನಾಡಿ, 2024-25 ನೇ ಸಾಲಿಗೆ ಕ್ಲಬ್ ನ ಅಧ್ಯಕ್ಷರಾಗಿ ತಾವು ಪದಸ್ವೀಕಾರ ಮಾಡಿದ ಬಳಿಕ ಹಮ್ಮಿಕೊಂಡ ಮೊದಲ ಕಾರ್ಯಕ್ರಮ ಇದಾಗಿದ್ದು, ಎಲ್ಲಾ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದಕ್ಕಾಗಿ ಸಂತಸ ವ್ಯಕ್ತ ಪಡಿಸಿದರು.
ಆರೋಗ್ಯ ರಕ್ಷಣೆ ಹಾಗೂ ಜಾಗೃತಿ ಕುರಿತಂತೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಿದ್ದು, ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನದ ಕುರಿತು ಜಾಗೃತಿಗಾಗಿ ಈಗಾಗಲೇ ಕಾರ್ಯಾರಂಭಿಸಲಾದ ನೂತನ ಯುಟ್ಯೂಬ್ ಚಾನೆಲ್ ‘ನವ್ಯಸಂಕಲ್ಪ’ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ನವಜಾತ ಶಿಶುವಿಗೆ ಹಾಗೂ ತಾಯಿಗೆ ಅವಶ್ಯಕವಾದ ಕಿಟ್ ಸಹ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ಚಂದುಶ್ರೀ ಅವರನ್ನು ಉಪಸ್ಥಿರಿದ್ದವರೆಲ್ಲರೂ ಸೇರಿ ಗೌರವಿಸಿ ಅಭಿನಂದಿಸಿದ್ದು ವಿಶೇಷವಾಗಿತ್ತು.
ಕಳೆದ ಸಾಲಿನ ಅಧ್ಯಕ್ಷರಾದ ರೊ. ರಾಜು.ಸಿ, ಕ್ಲಬ್ ನ ಕಲಿಕಾ ಮಾರ್ಗದರ್ಶಕರಾದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರೊ. ಹೆಚ್.ಎಲ್.ರವಿ, ಕ್ಲಬ್ ನ ಇತರ ಸದಸ್ಯರು, ಆನ್ಸ್ ಹಾಗೂ ಆನೆಟ್ಸ್ ಉಪಸ್ಥಿತರಿದ್ದರು. ಉಪನ್ಯಾಸ ನೀಡಿದ ಡಾ. ಚಂದುಶ್ರೀ ಅವರನ್ನು ಪರಿಚಯಿಸಿದ ವಲಯ ಸೇನಾನಿ ರೊ. ಮಂಜುಳಾ ರಾಜು ಕಾರ್ಯಕ್ರಮವನ್ನು ನಿರೂಪಿಸಿ, ಕ್ಲಬ್ ನ ಉಪಾಧ್ಯಕ್ಷೆ ರೊ. ಅಲೇಖಾ ಸ್ವಾಗತಿಸಿ, ಸಹ ಕಾರ್ಯದರ್ಶಿ ರೊ. ಡಾ. ಸಿದ್ಧಲಿಂಗ ಮೂರ್ತಿ ಎಲ್ಲರನ್ನೂ ವಂದಿಸಿದರು.