ಶಿವಮೊಗ್ಗ : ತುಂಬಿದ ತುಂಗಾ ಜಲಾಶಯಕ್ಕೆ ಸಂಸದ ಬಿ.ವೈ. ರಾಘವೇಂದ್ರ ಇಂದು ಬಿಜೆಪಿ ಪ್ರಮುಖರೊಂದಿಗೆ ತೆರಳಿ ಬಾಗಿನ ಅರ್ಪಣೆ ಮಾಡಿದರು.
ಶಿವಮೊಗ್ಗ ತಾಲೂಕಿನ ಗಾಜನೂರು ಗ್ರಾಮದಲ್ಲಿರುವ ತುಂಗಾ ಜಲಾಶಯ ಬಾಗಿನ ಅರ್ಪಿಸಿದ ಸಂಸದ ಬಿ.ವೈ. ರಾಘವೇಂದ್ರ, ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಹಾವೇರಿ, ದಾವಣಗೆರೆ ಮತ್ತು ಅಪ್ಪರ್ ತುಂಗ ಭಾಗದ ಜನರಿಗೆ ಜೀವ ನದಿಯಾದ ತುಂಗೆಗೆ ಬಾಗಿನ ಅರ್ಪಿಸಿದ್ದೇವೆ. ಕಳೆದ ಬಾರಿ ರೈತರ ಕಣ್ಣಿನಲ್ಲಿ ಬರಗಾಲ
ಆವರಿಸಿ ಕಣ್ಣೀರು ಬಂದಿತ್ತು. 70-80 ಸಾವಿರ ಹೆಕ್ಟೆರ್ ಗೆ ನೀರುಣಿಸುವ ತುಂಗೆ ಈ ಬಾರಿ ಭರ್ತಿಯಾಗಿದೆ. ತುಂಗಾ ಜಲಾಶಯ ಭರ್ತಿಯಾದ ಪರಿಣಾಮ ಬಾಗಿನ ಅರ್ಪಿಸಿದ್ದೇವೆ ಎಂದರು.
ಬರಗಾಲದಲ್ಲಿ ಜೂನ್ ವರೆಗೂ ನೀರುಣಿಸುವ ಕಾರ್ಯ ತುಂಗಾ ಜಲಾಶಯದಿಂದ ಆಗಿತ್ತು. ಈಗ ತುಂಗಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ರೈತರು ಎಚ್ಚರಿಕೆಯಿಂದ ನೀರನ್ನ ಬಳಸಿಕೊಳ್ಳಬೇಕು ಎಂದರು.
ಎನ್ ಡಿಎ ಸರ್ಕಾರ ಜುಲೈ 23 ಕ್ಕೆ ಕೇಂದ್ರ ಬಜೆಟ್ ಮಂಡಿಸುತ್ತಿದೆ. ಐತಿಹಾಸಿಕ ಬಜೆಟ್ ಇದಾಗಲಿದೆ. ರಾಷ್ಟ್ರದ ಸರ್ವಾಂಗೀಣ ಬಜೆಟ್ ಆಗಲಿದೆ. ಶಿವಮೊಗ್ಗದ ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಮತ್ತು ಪ್ರವಾಸೋದ್ಯಕ್ಕೆ ಒತ್ತು ನೀಡುವಂತೆ ಮನವಿ ಮಾಡಲಾಗಿದೆ. ಬೀರೂರು ಶಿವಮೊಗ್ಗದ 1600 ಕೋಟಿ ವೆಚ್ಚದಲ್ಲಿ ರೈಲ್ವೆ ಡಬ್ಲಿಂಗ್ ಮಾಡಲು ಡಿಪಿಆರ್ ರೆಡಿ ಮಾಡಲಾಗಿದೆ. ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಎಲ್ಲರು ಸೇರಿ ಶ್ರಮಿಸಲಾಗಿದೆ ಎಂದರು.
ಕೆಲ ಅಭಿವೃದ್ಧಿಗೆ ರಾಜ್ಯದ ಪಾಲುದಾರಿಕೆ ಇದೆ. ಇದನ್ನು ಆಯಾ ಶಾಸಕರು ರಾಜ್ಯ ಸರ್ಕಾರದ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಆಗುಂಬೆ 12 ಕಿ.ಮೀ. ಟನಲ್, ರೈಲ್ವೆ ಡಬ್ಬಲಿಂಗ್ ನಿರೀಕ್ಷೆ ಇದೆ. ಕೇಂದ್ರದಿಂದ ಈ ವರ್ಷ 8 ರಿಂದ 10 ಸಾವಿರ ಕೋಟಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಬರುವ ನಿರೀಕ್ಷೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಗೃಹ ಸಚಿವರು ಶಾಸಕರಾದ ಆರಗ ಜ್ಞಾನೇಂದ್ರ, ರಾಜ್ಯ ಬಿಜೆಪಿ ಕಾರ್ಯದರ್ಶಿ, ವಿಧಾನಪರಿಷತ್ ಶಾಸಕರಾದ ಡಿ.ಎಸ್.ಅರುಣ್, ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಹರಿಕೃಷ್ಣ, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು, ಮೋರ್ಚಾದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.