ಶಿವಮೊಗ್ಗ : ಕಾಂಗ್ರೆಸ್ ನವರು ನೀನು ಕಳ್ಳ ಎಂದರೆ ನೀನೇ ಕಳ್ಳ ಎಂಬ ರೀತಿ ಆಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಙಾನೇಂದ್ರ ಹೇಳಿದರು.
ಗಾಜನೂರಿನ ತುಂಗಾ ಜಲಾಶಯಕ್ಕೆ ಬಾಗಿಲು ಅರ್ಪಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಬರೆದಿಟ್ಟಿದ್ದ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಉಲ್ಲೇಖ ಆಗಿದೆ. ಮೃತ ಚಂದ್ರಶೇಖರನ್ ಪತ್ನಿಯಿಂದ ಮೂರು ಬಾರಿ ಹೇಳಿಕೆ ಪಡೆದಿದ್ದಾರೆ. ಎಸ್ಐಟಿ ಯಲ್ಲಿ ಆರೋಪಿಗಳ ಹೆಸರು ಇದೆ. ಆದರೆ ಪ್ರಕರಣ ಮುಚ್ಚುವ ಕೆಲಸ ಆಗಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಹಗರಣದ ಹಣದಲ್ಲಿ ತೆಲಂಗಾಣದ ಚುನಾವಣೆ ನಡೆದಿದೆ. ಇದನ್ನ ಇಡಿ ಉಲ್ಲೇಖ ಮಾಡಿದೆ. ವಿಧಾನಸಭೆಯಲ್ಲಿ ಡೆತ್ ನೋಟನ್ನು ಸಿಎಂ ಸಂಪೂರ್ಣ ಓದಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸಮಯದಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಆಡಳಿತ ಪಕ್ಷ ಆರೋಪಿಸಿದೆ. ನಾವು ಭ್ರಷ್ಠಾಚಾರ ನಡೆಸಿದ್ದರೆ ತನಿಖೆ ನಡೆಸಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ತೀರ್ಥಹಳ್ಳಿ ಹೆದ್ದಾರಿಯಲ್ಲಿ ತಡೆಗೋಡೆ ಕುಸಿತ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ತಡೆಗೋಡೆ ಕಟ್ಟಿದ್ದು ಮಣ್ಣು ರಸ್ತೆಗೆ ಬರಬಾರದು ಎಂದು. ಆದರೆ ಗುಡ್ಡ ಕುಸಿದರೆ ಯಾವುದನ್ನು ತಡೆಯಲು ಸಾಧ್ಯ ಇಲ್ಲ ಎಂದರು.
ಇನ್ನು ತೀರ್ಥಹಳ್ಳಿ ಹೊಸ ಕಟ್ಟಡ ಎಲ್ಲಾ ಸುರಕ್ಷಿತವಾಗಿದೆ. ತಾಪಂ ಕಟ್ಟಡ ಲೀಕೇಜ್ ಆಗಿದೆ. ಗುತ್ತಿಗೆದಾರರು ಇನ್ನೂ ಹ್ಯಾಂಡ್ ಓವರ್ ಮಾಡಿಲ್ಲ. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಲಾಗುತ್ತದೆ. ಮುಖ್ಯವಾಗಿ ನಾನು ಕಂಟ್ರಾಕ್ಟರ್ ಅಲ್ಲಾ. ನಾನು ನಿಂತು ಕೆಲಸ ಮಾಡಲು ಸಾಧ್ಯವಿಲ್ಲ. ನನ್ನ ಮೇಲೆ ಆರೋಪ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿರುಗೇಟು ನೀಡಿದರು.
ಈ ಬಾರಿ ಜಿಲ್ಲೆಯಾದ್ಯಂತ ಮುಂಗಾರು ಉತ್ತಮವಾಗಿ ಆಗಿದೆ. ತುಂಗಾ ನದಿ ಕೂಡ ತುಂಬಿ ಹರಿಯುತ್ತಿರುವುದು ಸಂತೋಷವನ್ನುಂಟು ಮಾಡಿದೆ. ರೈತರ ಮುಖದಲ್ಲಿ ಸಂತೋಷ ತಂದಿದೆ. ನನ್ನ ಕ್ಷೇತ್ರದ ತುಂಗಾ ತಾಯಿಗೆ ಬಾಗಿನ ಅರ್ಪಿಸಿದ್ದೇವೆ. ಜೀವನದಿ ಹೀಗೆ ಹರಿಯಲಿ, ನಾಡು ಸಮೃದ್ದಿಯಾಗಲಿ ಎಂದು ಆಶಿಸಿದರು.
ತೀರ್ಥಹಳ್ಳಿಯಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಆಗಿದೆ. ಮಳೆ ಇನ್ನು ಬರಬೇಕಿದೆ. ತುಂಗಾ ಜಲಾಶಯದಲ್ಲಿ ಹೂಳು ತುಂಬಿದೆ. ಮೂರು ಇಲಾಖೆ ಸೇರಿ ಹೂಳು ಎತ್ತಬೇಕು. ಸರ್ಕಾರ ಯೋಚಿಸಿ ಈ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಬೇಕಿದೆ ಎಂದರು.