ಶಿವಮೊಗ್ಗ: ತಾಂತ್ರಿಕತೆಯ ಹಲವು ಪ್ರಶ್ನೆ ಗೊಂದಲಗಳಿಗೆ ಉತ್ತರದಾಯಕವಾಗಿ ಹಾಗೂ ನಾವೀನ್ಯಯುತ ಕಲಿಕೆಗೆ ತಾಂತ್ರಿಕ ಪುಸ್ತಕಗಳು ಪ್ರೇರಕ ಶಕ್ತಿಯಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು 

ನಗರದ ಎಸ್.ಆರ್.ನಾಗಪ್ಪ ಶ್ರೇಷ್ಟಿ ಸ್ಮಾರಕ ರಾಷ್ಟ್ರೀಯ ಅನ್ವಯಿಕ ವಿಜ್ಞಾನ ಕಾಲೇಜಿನ ಬಿಸಿಎ ವಿಭಾಗದ ವತಿಯಿಂದ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಹ ಪ್ರಾಧ್ಯಾಪಕ ಪ್ರದೀಪ್.ಜಿ.ಎಸ್ ರಚಿಸಿದ ‘ಪೈಥಾನ್ ಪ್ರೊಗ್ರಾಮಿಂಗ್’ ತಾಂತ್ರಿಕ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇಂದಿನ ತಂತ್ರಜ್ಞಾನ ನಾಳೆಗೆ ಹಳೆಯದಾಗುವ ಮಟ್ಟಿಗೆ ತಾಂತ್ರಿಕ ಯುಗವು ಬದಲಾಗುತ್ತಿದೆ. ಜಗತ್ತು ಸದಾ ನಾವೀನ್ಯ ಸಂಶೋಧನೆಗಳ ಅನುಷ್ಟಾನದಲ್ಲಿ ನಿರತವಾಗಿದೆ. ಅಂತಹ ಬದಲಾವಣೆಗಳ ಅರಿವು ತಾಂತ್ರಿಕ ವಿದ್ಯಾರ್ಥಿಗಳಿಗೆ ಅತ್ಯವಶ್ಯಕ. 

ಪೈಥಾನ್ ಎಂಬ ಆಂಗ್ಲ ಹಾಸ್ಯ ಧಾರಾವಾಹಿಯ ಹೆಸರು ಪ್ರೊಂಗ್ರಾಮಿಂಗ್‌ ಭಾಷೆಯೊಂದರ ಹೆಸರಾಗಿ ನಾಮಕರಣಗೊಳ್ಳಲು ಪ್ರೇರಣೆಯಾಯಿತು.‌ ಇಂತಹ ಪ್ರೊಗ್ರಾಮಿಂಗ್ ಭಾಷೆಯ ಇತಿಹಾಸದಿಂದ ಪ್ರಸ್ತುತ ಅನ್ವೇಷಣೆಯವರೆಗಿನ ಹಲವು ವಿಚಾರಗಳನ್ನು ಪುಸ್ತಕದ ಮೂಲಕ ಅಧ್ಯಯನ ನಡೆಸಿ. ಈ ಮೂಲಕ ವಾಸ್ತವತೆಯ ಜ್ಞಾನದೊಂದಿಗೆ ಕಲಿಕೆ ಎಂಬ ನಿರಂತರ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಪುಸ್ತಕದ ಲೇಖಕ ಜಿ.ಎಸ್.ಪ್ರದೀಪ್ ಮಾತನಾಡಿ, ನವೀನ ವಿಚಾರ ಮತ್ತು ಪರಿಕರಗಳೊಂದಿಗೆ ಪೈಥಾನ್ ಪ್ರೊಗ್ರಾಮಿಂಗ್ ಭಾಷೆಯು ಪ್ರಸ್ತುತತೆಯ ಅದ್ಭುತ ಕಲಿಕಾ ಸಾಧನವಾಗಿದೆ. ಈ ಹಿನ್ನಲೆಯಲ್ಲಿಯೇ ಪೈಥಾನ್ ಕುರಿತ ಪುಸ್ತಕ ಬರೆಯಲು ಪ್ರೇರಣೆ ನೀಡಿತು.

ವೆಬ್ ಡೆವಲೋಪ್ಮೆಂಟ್, ಕೃತಕ ಬುದ್ಧಿಮತ್ತೆಯ ಕಾರ್ಯನಿರ್ವಹಣೆ ಸೇರಿದಂತೆ ಇಂದಿನ ಪ್ರತಿಯೊಂದು ತಾಂತ್ರಿಕ ಪ್ರಯೋಗಗಳಲ್ಲಿ ಪೈಥಾನ್ ಭಾಷೆ ಮೇಲುಗೈ ಸಾಧಿಸಿದೆ. ಮುಂದಿನ ದಿನಗಳಲ್ಲಿ ಪಿ.ಎಲ್ ಎಸ್ ಕ್ಯೂಎಲ್ ತಂತ್ರಜ್ಞಾನದ ಕುರಿತಾಗಿ ಪುಸ್ತಕ ಬರೆಯುವ ತಯಾರಿಯಲ್ಲಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಎಲ್.ಅರವಿಂದ ಅಧ್ಯಕ್ಷತೆ ವಹಿಸಿದ್ದರು. ಬಿಸಿಎ ವಿಭಾಗದ ಮುಖ್ಯಸ್ಥರಾದ ಹೆಚ್.ಎಸ್.ದತ್ತಾತ್ರಿ, ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಹೆಚ್.ಕೆ.ಪ್ರದೀಪ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಅರ್ಪಿತ ಸ್ವಾಗತಿಸಿ, ವಸುಧಾ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!