ಶಿವಮೊಗ್ಗ: ಸದೃಢ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ರಕ್ತದಾನ ಮಹತ್ತರ ಪಾತ್ರ ವಹಿಸುತ್ತದೆ. ಆರೋಗ್ಯವಂತ ಯುವಜನರು ರಕ್ತದಾನ ಮಾಡಲು ಮುಂದಾಗಬೇಕು ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಸ್.ನಟರಾಜ್ ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಒಮ್ಮೆ ರಕ್ತದಾನ ಮಾಡುವುದರಿಂದ ಮೂರ್ನಾಲ್ಕು ಜೀವ ಉಳಿಸಲು ಸಾಧ್ಯವಿದೆ ಎಂದು ತಿಳಿಸಿದರು
.
ರಕ್ತದ ಕೊರತೆಯು ಎಲ್ಲ ಕಡೆಗಳಲ್ಲಿ ಕಂಡು ಬಂದಿದ್ದು, ಹೆಚ್ಚು ರಕ್ತದಾನದ ಕ್ಯಾಂಪ್ಗಳನ್ನು ಆಯೋಜಿಸುವುದರಿಂದ ರಕ್ತದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನಿವಾರಿಸಬಹುದು. ಕೆಲ ಸಂದರ್ಭಗಳಲ್ಲಿ ರಕ್ತ ಸಿಗದೇ ಜೀವ ಉಳಿಸಲು ಕಷ್ಟದ ಸನ್ನಿವೇಶ ಎದುರಾಗುತ್ತವೆ. ರಕ್ತದ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ರಕ್ತದಾನ ಮಾಡುವ ಬಗ್ಗೆ ಭಯ ಪಡುವ ಅಗತ್ಯವಿಲ್ಲ, ತಪ್ಪು ಕಲ್ಪನೆ ಹೊಂದಬಾರದು. ಆರೋಗ್ಯವಂತ ಯುವಜನರು ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ರಕ್ತದಾನ ಮಾಡುವುದರಿಂದ ಸದೃಢ ಆರೋಗ್ಯ ಕಾಪಾಡಿಕೊಳ್ಳಬಹುದು. ಹೃದಯಾಘಾತ ಶೇ. 80 ಕಡಿಮೆ ಆಗುತ್ತದೆ. ಆರೋಗ್ಯವಂತ ವಿದ್ಯಾರ್ಥಿಗಳು ಕಾಲೇಜು ಹಂತದಿಂದಲೇ ರಕ್ತದಾನ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು. ಜೀವನದ ಅವಧಿಯಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಡಿವಿಎಸ್ ಕಾಲೇಜಿನಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3.30ರವರೆಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ರಕ್ತದಾನ ಮಾಡಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಮೆಗ್ಗಾನ್ ರಕ್ತನಿಧಿ ಕೇಂದ್ರ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಯು.ಗೀತಾಲಕ್ಷ್ಮೀ, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಕಾರ್ಯದರ್ಶಿ ಮಂಜುನಾಥ್ ಅಪ್ಪಾಜಿ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ನ್ಯಾಕ್ ಸಲಹೆಗಾರ ಪ್ರೊ. ಎಚ್.ಎಸ್.ಸುಧಾಕರ್, ರೆಡ್ಕ್ರಾಸ್ ಘಟಕ ಸಂಯೋಜಕ ಶ್ರೀನಿವಾಸ್ ಲಮಾಣಿ ಮತ್ತಿತರರು ಉಪಸ್ಥಿತರಿದ್ದರು.