ಶಿವಮೊಗ್ಗ ಜು.05 ಹೊಸನಗರ ತಾಲ್ಲೂಕು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೈಸೆ ಗ್ರಾಮದ ಚಿಕಳಿ ನಿವಾಸಿ ಶಶಿಕಲಾ ಎಂಬ ಮಹಿಳೆಯು ಅಡಿಕೆ ದಬ್ಬೆಯಲ್ಲಿ ನಿರ್ಮಾಣ ಮಾಡಿರುವ ಕಾಲುಸಂಕವನ್ನು ದಾಟುವಾಗ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿರುವ ವಿಷಯ ತಿಳಿದು ತುಂಬಾ ನೋವಾಗಿದ್ದು, ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಆರ್.ಎಂ. ಮಂಜುನಾಥ ಗೌಡ ಅವರು ತಿಳಿಸಿದ್ದಾರೆ.
ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಮಲೆನಾಡು ಜಿಲ್ಲೆಗಳಲ್ಲಿ ಶಾಸಕರುಗಳು ಸೂಚಿಸುವ ಕಾಲುಸಂಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಮಂಡಳಿಯ 2024-25 ನೇ ಸಾಲಿನ ಯೋಜನೆಯಲ್ಲಿ ಹೆಚ್ಚಿನದಾಗಿ ಕಾಲುಸಂಕಗಳಿಗೆ ಪ್ರಾಮುಖ್ಯತೆ ನೀಡಿ
ಕಾಮಗಾರಿಗಳನ್ನು ನೀಡುವಂತೆ ಶಾಸಕರುಗಳಿಗೆ ತಿಳಿಸಲಾಗಿರುತ್ತದೆ. ಮತ್ತು ಜುಲೈ ಅಂತ್ಯದೊಳಗೆ ಮಂಡಳಿಯ ಸರ್ವ ಸದಸ್ಯರ ಸಭೆಯನ್ನು ನಡೆಸಿ ಸದರಿ ವಿಷಯದ ಬಗ್ಗೆ ವಿವರವಾಗಿ ಚರ್ಚಿಸಿ ಅಗತ್ಯ ತಿರ್ಮಾನ ಕೈಗೊಳ್ಳಲಾಗುವುದು.
ಈಗಾಗಲೇ ಘಟನೆ ಸಂಭವಿಸಿದ ಸ್ಥಳದಲ್ಲಿ ಕಾಲುಸಂಕ ನಿರ್ಮಿಸುವ ಬಗ್ಗೆ ಎಲ್ಲ ಮಾಹಿತಿ ಪಡೆದಿದ್ದು ಮಂಡಳಿಯ ಅನುದಾನದಲ್ಲಿ ಕೊಡಲೇ ಕಾಲುಸಂಕ ನಿರ್ಮಿಸಲು ಕ್ರಮ ವಹಿಸಲಾಗುವುದು.
ಮಳೆಗಾಲದಲ್ಲಿ ಮಲೆನಾಡು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬೀಳುವುದರಿಂದ ಸಂಬಂಧಿಸಿದ ಶಾಸಕರುಗಳು ತಮ್ಮ ಅನುದಾನದಲ್ಲಿ ಕಾಮಗಾರಿಗಳುನ್ನು ಪ್ರಸ್ತಾಪಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ಕಾಲುಸಂಕಗಳ ಕಾಮಗಾರಿಗಳನ್ನು ಕೈಗೊಳ್ಳಲು ವಿನಂತಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.