ಸಾಗರ(ಶಿವಮೊಗ್ಗ),ಜುಲೈ.೦೫:ವಿಶ್ವವಿಖ್ಯಾತ ಜೋಗ ಅಭಿವೃದ್ಧಿಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ೭೨ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಗೋಪಾಲಕೃಷ್ಣಬೇಳೂರು ಹೇಳಿದರು.
ಅವರು ಸಾಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯ ಸಂದರ್ಭದಲ್ಲಿ ಜೋಗಾ ಅಭಿವೃದ್ಧಿಯ ಕುರಿತು ಪತ್ರಕರ್ತರೊಂದಿಗೆ ಪ್ರತಿಕ್ರಿಯಿಸಿ ಬಿಜೆಪಿ ಸರ್ಕಾರ ಜೋಗ ಅಬಿವೃದ್ಧಿಗೆ ಬಿಡಿಕಾಸನ್ನು ಬಿಡುಗಡೆ ಮಾಡದೇ ಕೇವಲ ೧೮೦ ಕೋಟಿ ರೂಗಳ ಯೋಜನೆ ಹೆಸರಿನಲ್ಲಿ ಬೊಗಳೆಬಿಟ್ಟಿದೆ ಎಂದು ದೂರಿದರು.
ಜೋಗ ಅಬಿವೃದ್ಧಿಗೆ ಮಾಜಿಮುಖ್ಯಮಂತ್ರಿ ಯಡಿಯೂರಪ್ಪನವರು ಮತ್ತು ಸಂಸದರಾದ ಬಿ.ವೈ.ರಾಘವೇಂದ್ರ ಹಾಗೂ ಮಾಜಿ ಶಾಸಕ ಹಾಲಪ್ಪನವರು ನಯಾಪೈಸೆ ಅನುದಾನ ಬಿಡುಗಡೆ ಮಾಡಿಸಲಿಲ್ಲ ಎಂದು ಆರೋಪಿಸಿದರು.
ಬದಲಾಗಿ ಬಿಜೆಪಿ ಆಡಳಿತಾವಧಿಯಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ ಕಮಲದ ಚಿತ್ರದಂತೆ ನಿರ್ಮಿಸಿರುವ ಮಾದರಿಯಲ್ಲಿ ಜೋಗಾದ ಸ್ವಾಗತ ಕಮಾನನ್ನು ಕಮಲ ಚಿತ್ರದ ವಿನ್ಯಾಸ ಮಾಡಲು ಹೊರಟಿದ್ದರು.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹ ನಿಲುವುಗಳನ್ನು ಬದಲಾಯಿಸಿ ಗೋಪುರದ ಮಾದರಿಯಲ್ಲಿ ಹೊಸ ವಿನ್ಯಾಸಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಸರ್ಕಾರ ಜೋಗದಲ್ಲಿ ಹೈಟೆಕ್ ಸೌಲತ್ತುಗಳ ಕಲ್ಪಿಸುವ ದಿಕ್ಕಿನಲ್ಲಿ ಅನುದಾನ ಬಿಡುಗಡೆಮಾಡಿದೆ.೩೬೫ ದಿನವೂ ಪ್ರವಾಸಿಗರನ್ನು ಸೆಳೆಯುವಂತಹ ಯೋಜನೆ ರೂಪಿಸಲಾಗಿದ್ದು,ಕ್ಯೂಬಾಡೈಯಿಂಗ್ ಮತ್ತು ರೈನ್‌ಡ್ಯಾನ್ಸ್ ಆರಂಬಿಸಲು ಚಿಂತಿಸಲಾಗಿದೆ.ಆದ್ದರಿಂದ ಹೈದ್ರಾಬಾದ್‌ನ ರಾಮೋಜಿ ಫಿಲ್ಮ ಸ್ಟುಡಿಯೋಗೆ ಭೇಟಿ ನೀಡಿ ಅಲ್ಲಿನ ರೈನ್‌ಡ್ಯಾನ್ಸ್ ಯೋಜನೆ ವೀಕ್ಷಿಸಿ ಮಾಹಿತಿ ಪಡೆದುಕೊಂಡು ಬರುತ್ತೇನೆ ಎಂದು ಬೇಳೂರು ಹೇಳಿದರು.
ಜೋಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿದ್ದೇವೆ.ವಾಹನ ಪಾರ್ಕಿಂಗ್ ವ್ಯವಸ್ಥೆಯನ್ನು ಸುಗಮಗೊಳಿಸಲಾಗುತ್ತಿದೆ.ಯಾತ್ರಿ ನಿವಾಸವನ್ನು ತೆರವುಗೊಳಿಸಿ ವಾಹನ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಜೋಗ ಅಂತರಾಷ್ಟ್ರೀಯ ಪ್ರವಾಸಿತಾನವಾಗಿರುವ ಕಾರಣ ಅತ್ಯಂತ ಮಾದರಿಯಾಗಿ ಸಮಗ್ರ ಮೂಲಭೂತ ಹೈಟೆಕ್ ಸೌಲಭ್ಯಗಳ ಕಲ್ಪಿಸುವ ಮೂಲಕ ಆಕರ್ಷಣೀಯಗೊಳಿಸಲಾಗುವುದು.ಸ್ವಚ್ಚ-ಸುಂದರ ಜೋಗ ಎಂಬ ಖ್ಯಾತಿಗೆ ಪಾತ್ರವಾಗುವಂತಹ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದರು.
ಜೋಗದ ಕೀರ್ತಿಗೆ ತಕ್ಕಂತಹ ಹೊಸತನದ ಸ್ಪರ್ಶ ನೀಡಲು ಸುಮಾರು ೧೨೦ ಕೋಟಿಗೂ ಅಧಿಕ ಮೊತ್ತದಲ್ಲಿ ಜೋಗ ವೀಕ್ಷಿಸಲು ಪ್ರವಾಸಿಗರುಗಳಿಗೆ ಮುದನೀಡುವಂತಹ ರೋಪ್‌ವೇ ನಿರ್ಮಿಸುವ ಯೋಜನೆ ಜಾರಿಗೊಳಿಸಲು ಸರ್ಕಾರದ ಹಂತದಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದರು.
ಜೋಗದಲ್ಲಿ ಪ್ರವಾಸಿಗರುಗಳಿಗೆ ಅಗತ್ಯವಾಗಿ ಬೇಕಾಗಿರುವಂತಹ ದೇಶ-ವಿದೇಶಿ ಪ್ರವಾಸಿಗರುಗಳಿಗೆ ಪೂರಕವಾದಂತಹ ಸ್ಟಾರ್ ಹೊಟೇಲ್ ಸ್ಥಾಪಿಸುವ ಯೋಜನೆಯಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ೨೦೬ ರಿಂದ ಜೋಗಕ್ಕೆ ಬೇಟಿ ನೀಡುವ ಪ್ರವಾಸಿಗರುಗಳಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪಾರ್ಕಿಂಗ್ ವ್ಯವಸ್ಥೆ ವಿಸ್ತಾರಗೊಳಿಸುವ ಜೊತೆಗೆ ಚೂರಿಕಟ್ಟೆಯಿಂದ ಕಾರ್ಗಲ್ ಜೋಗ ಸೇರುವ ರಾಜ್ಯ ಹೆದ್ದಾರಿಯನ್ನು ಅಬಿವೃದ್ಧಿಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೊಳಿಯಪ್ಪ ಮನೆಘಟ್ಟ, ಕಾಂಗ್ರೆಸ್ ಅಧ್ಯಕ್ಷ ಚಂದ್ರಪ್ಪ ಕಲ್ಸೆ,ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್‌ಬಾಬು,ನಗರ ಯೋಜನಾ ಪ್ರಾಧಿಕಾರದ ಸದಸ್ಯ ಸೋಮಶೇಖರ ಲ್ಯಾವಗೆರೆ,ನಗರಸಭೆ ಸದಸ್ಯ ರವಿಲಿಂಗಿನಮಕ್ಕಿ,ಸಹಕಾರಿ ಭೀಮನೇರಿ ಆನಂದ ,ತಾg ಮೂರ್ತಿ,ಗಣಪತಿ ಮಂಡಗಳಲೆ,ಸುರೇಶ್, ಗಿರೀಶ್‌ಕೋವಿ ,ರಮೇಶ್ ಟಿ.ಪಿ.ರವಿಲಿಂಗಿನಮಕ್ಕಿ ,ಬಸವರಾಜ್ ಕುಗ್ವೆ ಮೊದಲಾದವರು ಉಪಸ್ಥಿತರಿದ್ದರು.