ಶಿವಮೊಗ್ಗ :- ನಾವು ಪ್ರೌಢಶಾಲಾ ಹಂತಕ್ಕೆ ಬಂದಿದ್ದರೂ ನಮ್ಮ ಮಕ್ಕಳಿಗೆ ಓದುವ, ಬರೆಯುವ, ಅರಿಯುವ ಸಾಮರ್ಥ್ಯದ ಕೊರತೆ ಕಾಣುತ್ತಿದ್ದೇವೆ. ಒಂಬತ್ತನೇ ತರಗತಿಯ ವಿದ್ಯಾರ್ಥಿಗೆ ಮೂರನೆಯ ತರಗತಿಯ ಕನ್ನಡ ಪಠ್ಯ ಓದಲು ಬರುತ್ತಿಲ್ಲ ಎನ್ನುವ ಸತ್ಯ ಕಹಿಯಾದರೂ ವಾಸ್ತವಾಗಿದ್ದು, ಕನ್ನಡ ಭಾಷೆಯ ಕಲಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮ ಈ ರೀತಿಯ ದುಸ್ಥಿತಿಗೆ ಕಾರಣವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಮಂಜುನಾಥ ಅಭಿಪ್ರಾಯಪಟ್ಟಿದ್ದಾರೆ.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಕಸಾಪ ಹೊಳೆಹೊನ್ನೂರು ಘಟಕದ ಸಹಯೋಗದಲ್ಲಿ ಬುಧವಾರ ಭದ್ರಾವತಿಯ ದಾಸರಕಲ್ಲಹಳ್ಳಿಯ ಮಂಜುನಾಥ ಪ್ರೌಢಶಾಲಾ ಆವರಣದಲ್ಲಿ ಶಾಲಾ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿಗಳಿಗಾಗಿ ಕಥೆ, ಕವನ, ಪ್ರಬಂಧ, ಪ್ರವಾಸ ಸಾಹಿತ್ಯ ಓದು, ಅರಿವು, ಬರಹ ಕಮ್ಮಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡಿ, ಕನ್ನಡದ ಬಗ್ಗೆ ಅರಿವು ಮೂಡಿಸುವ ಹೊಸ ಚೈತನ್ಯ ನೀಡುವ ಉಪಯುಕ್ತ ಕಾರ್ಯಕ್ರಮ. ಪಠ್ಯ ಪುಸ್ತಕದ ಮೂಲಕ ಸಾಹಿತ್ಯ ಅಭಿರುಚಿ ಬೆಳಸಿಕೊಳ್ಳುವ ಅವಕಾಶ. ಭಾಷಾ ಕೌಶಲ್ಯ ಕಲಿಸಲು ಕನ್ನಡ ಮೇಷ್ಟ್ರು ಮಾತ್ರ ಜವಾಬ್ದಾರಿಯಲ್ಲ. ಶಾಲೆಯ ಇತರೆ ಶಿಕ್ಷಕರು ಅಸಡ್ಡೆ ತೋರದೆ ಆಸಕ್ತಿ ತೋರಬೇಕು. ಮಕ್ಕಳಲ್ಲಿ ಅಭಿಮಾನ ಮೂಡಿಸುವ ಕಾರ್ಯ ಅಗತ್ಯವಿದೆ ಎಂದು ವಿವರಿಸಿದರು.
ಕಥೆ, ಪ್ರಬಂಧ ಕುರಿತು ಸಾಹಿತಿ ಡಾ.ಎಚ್.ಟಿ. ಕೃಷ್ಣಮೂರ್ತಿ ಮಾತನಾಡಿ, ಕಥೆಯಿಲ್ಲದವರು ಮನುಷ್ಯರೇ ಅಲ್ಲ, ಕಥೆ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದೇ ಕಥೆಯನ್ನು ಯೋಚನೆ ಮಾಡಿ ಸೃಜನಾತ್ಮಕವಾಗಿ ರಚಿಸುವುದು ಹೇಗೆ ಎಂದು ವಿವರಿಸಿದರು.
ಹೊಳೆಹೊನ್ನೂರು ಕಾಲೇಜು ಕನ್ನಡ ಉಪನ್ಯಾಸಕರಾದ ಡಾ.ಭಾರತಿದೇವಿ.ಪಿ. ಕವನಗಳು ಅಂದರೆ ಏನು ಮತ್ತು ಹೇಗೆ ಓದುವುದು ಎಂದು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಎಚ್. ವೈ. ಮಾತನಾಡಿ ಕನ್ನಡ ನಮ್ಮ ಹೆಮ್ಮೆ. ಕಮ್ಮಟಗಳು
ನಿಮ್ಮ ಪ್ರತಿಭೆಗಳು ಬೆಳಗಲು ನೆರವಾಗಲಿದೆ ಎಂದು ಅಭಿಪ್ರಾಯ ಪಟ್ಟರು. ಹೊಳೆಹೊನ್ನೂರು ಕಸಾಪ ಹೋಬಳಿ ಅಧ್ಯಕ್ಷರಾದ ಸಿದ್ದಪ್ಪ ಸ. ಬ., ಎಚ್. ಹನುಮಂತಪ್ಪ, ಶ್ರೀನಿವಾಸ್, ರಮೇಶ್, ಮಂಜುನಾಥ, ರಾಮಕೃಷ್ಣ, ಕಾರ್ಯದರ್ಶಿ ಚಂದ್ರಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಚೇತನ, ಶ್ವೇತ ಪ್ರಾರ್ಥಿಸಿ, ಶಿಕ್ಷಕ ಲೋಕೇಶ್ ಎಚ್.ಎನ್. ಸ್ವಾಗತಿಸಿ, ಈಶ್ವರ್ ನಿರೂಪಿಸಿ, ನಂದ್ಯಪ್ಪ ವಂದಿಸಿದರು.