ಶಿವಮೊಗ್ಗ,ಜು.೧: ಬಡವರು ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ. ಅವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಿ ಎಂದು ರಾಷ್ಟ್ರಭಕ್ತಿ ಬಳಗದ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ ಬಡವರಿಗಾಗಿ ಸೂರು ನೀಡಲು ಆಶ್ರಯಮನೆ ಯೋಜನೆಯನ್ನು ಕಳೆದ ೯ ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿತ್ತು. ಗೋವಿಂದಪುರದಲ್ಲಿ ೩ ಸಾವಿರ ಆಶ್ರಯ ಮನೆಗಳು ನಿರ್ಮಾಣವಾಗಬೇಕಿತ್ತು. ಅಲ್ಲಿ ಕೇವಲ ೨೮೮ ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ ಬಡವರು ಸೂರಿಗಾಗಿ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರು.


ಸಾಮಾನ್ಯವರ್ಗಕ್ಕೆ ಸೇರಿದ ಜನರು ೮೦ ಸಾವಿರ ಪರಿಷ್ಟರು ೫೦ ಸಾವಿರ ರೂ.ಗಳನ್ನು ಈಗಾಗಲೇ ಅಡ್ವಾನ್ಸ್ ರೂಪದಲ್ಲಿ ಕೊಟ್ಟಿದ್ದಾರೆ. ೩ ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ೯ ವರ್ಷವಾದರೂ ನೀಡಿಲ್ಲ. ಹಣಕಟ್ಟಿದವರು, ಸಾಲ ಸೋಲ ಮಾಡಿದ್ದಾರೆ. ಬಡ್ಡಿ ಕಟ್ಟಲು ಆಗುತ್ತಿಲ್ಲ. ಅತ್ಯಂತ ಕಷ್ಟದಲ್ಲಿದ್ದಾರೆ. ತಕ್ಷಣವೇ ಅವರಿಗೆ ಆಶ್ರಯ ನೀಡಬೇಕು ಎಂದರು.


ಈಗ ಕೊಟ್ಟಿರುವ ಮನೆಗಳಿಗೂ ಮೂಲಭೂತ ಸೌಲಭ್ಯಗಳಿಲ್ಲ. ಬೀದಿ ದೀಪವಿಲ್ಲ, ರಸ್ತೆಗಳಿಲ್ಲ, ರಾತ್ರಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟವಾಗುತ್ತದೆ. ಗೋಪಿಶೆಟ್ಟಿಕೊಪ್ಪದಲ್ಲಿಯೂ ಕೂಡ ಯಾವುದೇ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ. ನಾನು ಶಾಸಕನಾಗಿದ್ದಾಗ. ಒಂದಿಷ್ಟು ಶ್ರಮ ಪಟ್ಟಿದ್ದೆ ಎಂದರು.


ಈ ಹಿನ್ನಲೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದೇವೆ. ಅವರು ನಾನೇ ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ಭರವಸೆ ಇದೆ. ಈ ಎಲ್ಲಾ ಹಿನ್ನಲೆಯಲ್ಲಿ ಜು.೧೫ರೊಳಗೆ ವಿಶೇಷ ಸಭೆಯನ್ನು ಕರೆಯಬೇಕು. ಈ ಸಭೆಗೆ ಸಚಿವರು ಬರಬೇಕು. ಅವರು ಫಲಾನುಭವಿಗಳಿಗೆ ಅಭಯಾಶ್ರಯ ನೀಡಬೇಕು ಎಂದರು.
ಶಿವಮೊಗ್ಗ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಪಾತ್ರ ಹೆಚ್ಚಾಗಿದೆ. ಆದರೆ ಪಾಲಿಕೆಯ ಅವಧಿ ಮುಗಿದು ಹಲವು ತಿಂಗಳುಗಳು ಆದರು ಕೂಡ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೂಡಲೇ ಮಹಾನಗರಪಾಲಿಕೆಗೆ ಚುನಾವಣೆ ನಡೆಸಬೇಕು ಎಂದರು.


ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರಭಕ್ತ ಬಳಗವು ಆಯಾ ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳುತ್ತದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಷ್ಟ್ರಭಕ್ತ ಬಳಗದ ಮಹಾಲಿಂಗಶಾಸ್ತ್ರಿಯವರು ವಿಜೇತರಾಗಿದ್ದಾರೆ. ಅವರನ್ನು ಜು.೧೫ರಂದು ಸನ್ಮಾನಿಸಲಾಗುವುದು ಎಂದರು.
ಈ ಎರಡು ವಿಷಯಗಳ ಬಗ್ಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಷ್ಟ್ರಭಕ್ತಿ ಬಳಗದಿಂದ ಮುಂದಿನ ಹೋರಾಟವನ್ನು ರೂಪಿಸಲಾಗುವುದು ಎಂದರು.


ಪತ್ರಿಕಾಗೋಷ್ಟಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ.ವಿಶ್ವಾಸ್, ಗನ್ನಿಶಂಕರ್, ಅ.ಮಾ.ಪ್ರಕಾಶ್, ಭೂಪಾಲ್, ಬಾಲು, ನಾಗರಾಜು, ಮೋಹನ್ ಇದ್ದರು.

ಬಿಜೆಪಿಯಿಂದ ತಮಗೆ ಕರೆಬಂದಿದ್ದು, ಸದ್ಯದರಲ್ಲಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳುವೆ ಎಂದು ಈಶ್ವರಪ್ಪ ಹೇಳಿದರು.
ಈಗಾಗಲೇ ಬಿಜೆಪಿಯಲ್ಲೇ ನಾವಿದ್ದು, ರಾಷ್ಟ್ರಭಕ್ತ ಬಳಗವು ಬಿಜೆಪಿಯ ಒಂದು ಭಾಗವೇ ಆಗಿದೆ.

ಚುನಾವಣೆಯ ಒಂದು ವಿಷಯದಲ್ಲಿ ಮಾತ್ರ ಒಂದಿಷ್ಟು ಭಿನ್ನಾಭಿಪ್ರಾಯವಾಗಿದ್ದವು. ಈಗ ಬಿಜೆಪಿ ಕಡೆಯಿಂದ ತಮಗೆ ಕರೆಬಂದಿದ್ದು, ಬಿಜೆಪಿ ಮತ್ತು ಸೇರುವ ಬಗ್ಗೆ ನಿರ್ಧಾರ ಕೈಗೊಳ್ಳುವೆ ಎಂದರು.


ಕಾಂಗ್ರೆಸ್ ನಾಯಕರು ತಾವು ಜಾತಿಗಾಗಿ ನಾಯಕರಾಗಿದ್ದೇವೆ ಎಂದು ಈಗ ಸ್ಪಷ್ಟಪಡಿಸುತ್ತಿದ್ದಾರೆ

. ಮಠದ ಸ್ವಾಮೀಜಿಗಳನ್ನು ತಮ್ಮ ಹಿತಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಪರವಾಗಿ ಹೇಳಿಕೆ ಕೊಡಿಸುತ್ತಿದ್ದಾರೆ. ಇದು ನೀಚ ರಾಜಕಾರಣ ಎಂದರು.

By admin

ನಿಮ್ಮದೊಂದು ಉತ್ತರ

You missed

error: Content is protected !!