ನಿಂತಿದ್ದ ಲಾರಿಗೆ ಟಿಟಿ ಡಿಕ್ಕಿ | ಟೆಂಪೋ ಟ್ರಾವೆಲರ್ ಛಿದ್ರ ಛಿದ್ರ
ಹಾವೇರಿ,ಜೂ.28:
ಸವದತ್ತಿ ಯಲ್ಲಮ್ಮನ ದೇವಾಲಯಕ್ಕೆ ತೆರಳಿ ವಾಪಾಸಾಗುವ ವೇಳೆ ಹಾವೇರಿ ಬಳಿಯಲ್ಲಿ ಟೆಂಪೋ ಟ್ರಾವೆಲರ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಶಿವಮೊಗ್ಗ ಜಿಲ್ಲೆಯ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯಲ್ಲಿ ಇಂದು ನಸುಕಿನಲ್ಲಿ ಘಟನೆ ಸಂಭವಿಸಿದೆ.
ಮೃತರು ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದರು ಎಂದು ವರದಿಯಾಗಿದ್ದು, ದೇವಸ್ಥಾನದಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಮೃತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಹಾಗೂ ಶಿವಮೊಗ್ಗ ತಾಲೂಕಿನ ನಿವಾಸಿಗಳು ಎಂದು ವರದಿಯಾಗಿದೆ.
ಟಿಟಿಯಲ್ಲಿ ಒಟ್ಟು 17 ಜನರಿದ್ದರು ಎನ್ನಲಾಗಿದ್ದು, ಇದರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.
ರಸ್ತೆ ಬದಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ಮುಂಭಾಗ ಬಹುತೇಕ ನಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಸಾವನ್ನಪ್ಪಿದವರ ಪೈಕಿ ಎಮ್ಮೆಹಟ್ಟಿ ಗ್ರಾಮದ ಆದರ್ಶ, ವಿಶಲಾಕ್ಷಮ್ಮ, ನಾಗೇಶ್, ಭಾಗ್ಯಾ, ಮಾನಸ, ಸುಭದ್ರ, ಶಿವಮೊಗ್ಗ ನಗರದ ಆಲ್ಕೋಳ ನಿವಾಸಿಗಳಾದ ಪರಶುರಾಮ್ ಮತ್ತು ರೂಪ ದಂಪತಿ ಎಂದು ವರದಿಯಾಗಿದೆ.
ಇನ್ನು, ಭದ್ರಾವತಿ ತಾಲೂಕಿನ ಕಲ್ಲಿಹಾಳ್ ಸರ್ಕಲ್ ಮಂಜುಳಾ ಬಾಯಿ, ಮಂಜುಳಾ, ಕಡೂರು ತಾಲೂಕಿನ ಬೀರೂರು ನಿವಾಸಿ ಅಂಜು, ಭದ್ರಾವತಿ ತಾಲೂಕಿನ ಮಾಚೇನಹಳ್ಳಿಯ ಪುಣ್ಯ ಬಾಯಿ ಮೃತರು ಎಂದು ತಿಳಿದುಬಂದಿದೆ.
ಬ್ಯಾಡಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಅಪಘಾತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.