ಈ ಜಗತ್ತಿನಲ್ಲಿ ಶೇ. ನೂರರಷ್ಟು ಮಂದಿಗಳಲ್ಲಿ ಒಂದೇ ಬಗೆಯ ಮನೋಭಾವ ಇರುವುದಿಲ್ಲ. ನಾನಾ ಬಗೆಯ ಅಭಿಪ್ರಾಯಗಳು, ವರ್ತನೆಗಳು ಸಹಜ ಆದರೆ ಶೇಕಡ 90ರಷ್ಟು ಜನ ಮನುಷ್ಯತ್ವದ ಮಾತಿಗೆ ಬದ್ಧತೆ, ಕಟ್ಟುನಿಟ್ಟಿನ ಜೀವನ ಕ್ರಮ ಹೊಂದಿರುತ್ತಾರೆ. ಉಳಿದ ಶೇಕಡ 10ರಷ್ಟು ಜನ ಹೊಂದಿರುವಂತಹ ನೆಗೆಟೀವ್ ಯೋಚನೆಯ ಎಳೆಗಳಿಂದ ಶೇ. 90ರಷ್ಟು ಪಾಸಿಟಿವ್ ಮನಸುಗಳು ಘಾಸಿಗೊಳ್ಳುವ ಸನ್ನಿವೇಶವನ್ನು ಬಿಂಬಿಸುವ ಉದ್ದೇಶವನ್ನು ಈ ಅಂಕಣ ಹೊಂದಿದೆ -ಸಂ

ಯಾರ್ ಏನೇ ಆಗಿರಲಿ, ಸಾಲ ಅಂತ ಕೊಡಬೇಡಿ, ಸಾದ್ಯವಿರುವಷ್ಟು ಕಡೆ ಕಿತ್ಕೊಳ್ಳಿ, ತಲೆ ಕೆಟ್ಟಿದ್ದರೆ ಬಿಕ್ಷೆ ಅಂತ ಕೊಟ್ಬಿಡಿ- ಸ್ವಾಮಿ ಮನದಾಳದ ಮಾತು ಕೇಳಿ


‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ – ಕಿಬ್ಬದಿಯ ಕೀಲು ಮುರಿದಂತೆ’ ಸರ್ವಜ್ಞ. ಹೌದು, ಸಾಲ ಎಂಬುದು ಪಡೆಯುವಾಗ ಸಿಹಿ, ಹಿಂದಿರುಗಿಸುವಾಗ ಕಹಿ. ಇದು ನಾಚ್ಕೆ, ಮಾನ, ಮರ್ವಾದೆ ಮಾರಿಕೊಂಡವರ, ಅಡವಿಟ್ಟವರ ಕರ್ಮಕಥೆ.


ಇಂತಹದೊಂದು ಮಾತನ್ನು ನಿಮ್ಮ ಮುಂದೆ ಹೇಳಲು ಒಂದಿಷ್ಟು ಅನುಭವ ಜನ್ಯ ಬದುಕುಗಳ ವಿಷಯಗಳನ್ನು ಕೇಳಿದ್ದು ಹಾಗೂ ಅನುಭವಿಸಿದ್ದು ಈ ಬರಹಕ್ಕೊಂದು ಕಾರಣ.


ಕೇವಲ ತಮ್ಮ ತಮ್ಮ ಬದುಕು, ಹೆಂಡ್ತಿಯರ ಸೀರೆ, ಒಡವೆ, ಮಕ್ಕಳ ತಿನಿಸಿನಿಂದ ಓದು, ಹೊಸ ಗಾಡಿ, ಜಾಲಿ ಟ್ರಿಪ್, ಜಾಲಿ ಜಾಲಿ ಬದುಕು ಅಷ್ಟೇ ಯೋಚನೆಯಲ್ಲಿ ಎಲ್ಲೆಂದರಲ್ಲಿ ನಾಳೆ, ನಾಡಿದ್ದು ಕೊಡ್ತೀನಿ, ತುಂಬಾ ಅರ್ಜೆಂಟ್, ಹೆಂಡತಿ, ಮಕ್ಕಳು, ಅಪ್ಪ, ಅಮ್ಮ ಇಲ್ಲವೇ ಅಜ್ಜ, ಅಜ್ಜಿ ತುಂಬಾ ಸೀರಿಯಸ್ಸು ಅರ್ಜೆಂಟ್ ಆಸ್ಪತ್ರೆ ಸೇರಿಸಬೇಕು. ಆಪರೇಷನ್ ಆಗಬೇಕು…., ಹೀಗೆ ಕಥೆ ಹೇಳುತ್ತಾ ಹಣ ಪಡೆಯುವ ಮುನ್ನ ಗೋಗರಿಯುವ ಇದೇ ಜನ ಮುಂದೆ ಹಣ ಕೊಡುವ ಬಗ್ಗೆ ಚಿಂತಿಸುವುದೇ ಇಲ್ಲ.
ಇಂತಹ ಕೆಲವು ವ್ಯಕ್ತಿಗಳು ನಮ್ಮ ನಡುವೆ ಸೇರಿಕೊಂಡಿರುವುದರಿಂದ ಮೃದು, ಮುಗ್ಧ ಹಾಗೂ ಸಹಜ ಉದಾರಿ ಮನಸ್ಸು ಹೊಂದಿರುವ ವ್ಯಕ್ತಿಗಳು ಈಗ ಎಲ್ಲಿಯೂ ನಾಕಾಣೆ ಕೊಡಲು ಯೋಚಿಸುವ ಪರಿಸ್ಥಿತಿ ಬಂದಿರುವುದು ನಿಜಕ್ಕೂ ದುರಂತವೇ ಹೌದು.


ಈ ಲಕ್ಷ್ಮಿ ಎಷ್ಟು ಚೆಂದಾಗಿ ಜನರ ಬದುಕನ್ನು ಆಟವಾಡಿಸುತ್ತಾಳೆ ಗೊತ್ತಾ? ಇದೆ ಮುಕ್ತ ಮನಸ್ಸಿನಿಂದ ಕೊಟ್ಟು ಸಹಕರಿಸಿದಾತ, ಕಷ್ಟದ ಸಂದರ್ಭದಲ್ಲಿ ಎಲ್ಲಾದರೂ ಹೇಳಿದರೆ ಆತನಿಗೆ ಒಂದು ನಯಾ ಪೈಸೆ ದಕ್ಕದಂತೆ ಆಟವಾಡಿಸುವ ಲಕ್ಷ್ಮಿ ಮಹಾತಾಯಿ ಮನುಷ್ಯರ ಮನಸ್ಸುಗಳನ್ನು, ಆ ಮನದೊಳಗೆ ಇರಬೇಕಾದ ಮನುಷ್ಯತ್ವವನ್ನು ಅಷ್ಟೇ ಏಕೆ ಉದಾರತ್ವವನ್ನು ಮೃಗೀಯವಾಗಿ ಬದಲಿಸುವುದು ನಿಜಕ್ಕೂ ದುರಂತವಲ್ಲವೇ? ಇದೊಂದು ಇಂದಿನ ಕಾಲದ ನೈಜ ಸ್ಥಿತಿ ಎಂದರೆ ತಪ್ಪಾಗಲಿಕಿಲ್ಲ. ಬದುಕ ದಾರಿಯಲ್ಲಿ ಎಷ್ಟೇ ಶ್ರೀಮಂತನಾದರೂ ಕೋಟ್ಯಾಧೀಶ್ವರನಾದರೂ ಲಕ್ಷ್ಮಿ ಆತನಿಗೆ ಆಟವಾಡಿಸುವುದು ಅಷ್ಟೇ ಸತ್ಯ.
ಅನ್ನದ ಬೆಲೆ ಗೊತ್ತಿದ್ದವನಿಗೆ ಮಾತ್ರ ಅದರ ಹಾಗೂ ಬದುಕಿನ ಅರಿವು ಇರುತ್ತದೆ.

ಜಿಪುಣಾಗ್ರೇಸರ ಎನಿಸಿಕೊಂಡರೂ ಪರವಾಗಿಲ್ಲ. ಇಂದಿನ ಕಾಲ ಹಾಗೂ ಇಂದಿನ ಪರಿಸ್ಥಿತಿಯಲ್ಲಿ ಹೇಳಿದವರಿಗೆ ಕೈಲಿರುವ ಕಾಸು ಬಿಚ್ಚುವುದು ದುರಂತ. ನೆರವು, ಸಹಾಯ ಬಿಕ್ಷೆಯಾಗುತ್ತದಯೇ? ಇದು ಕೊಡುಕೊಳ್ಳುವಿಕೆಯ ಸಾಲುಗಳಲ್ಲಿ ಸೇರಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಏಕೆಂದರೆ ಕೊಡುವ ಸಂದರ್ಭದಲ್ಲಿ ಕಾಡುವ, ಬೇಡುವ ಅವರ ಸನ್ನಿವೇಶ ವಾಪಸ್ ಬರಲಿಸುವಾಗ ಇಲ್ಲದಿರುವ ವ್ಯಕ್ತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಇತ್ತೀಚೆಗೆ ಬಂದಿರುವ ಫೋನ್ ಪೇ ಇಂತಹ ಸಾಕಷ್ಟು ಅವಾಂತರಗಳನ್ನು ಸೃಷ್ಟಿಸಿದೆ. ಅಣ್ಣ ಅರ್ಜೆಂಟ್ 1000 ಹಾಕುವ ಎನ್ನುವುದರಿಂದ ಲಕ್ಷಗಟ್ಟಲೆ ಹಣ ಪಡೆಯುವ ವ್ಯಕ್ತಿಗಳ ನಡುವೆ ಶೇಕಡ 90ರಷ್ಟು ಸಭ್ಯ ಸುಸಂಸ್ಕೃತ ಕೊಡುಕೊಳ್ಳುವಿಕೆಯ ಮನೋ ಸ್ಥಿತಿಯನ್ನು ಅರಿತುಕೊಂಡವರು ಇದ್ದರೂ ಸಹ ಇನ್ನು ಉಳಿದ ಶೇಕಡ 10 ರಷ್ಟು ಮನಸುಗಳು ಕೇವಲ ಕಾಡಿಬೇಡುವ ಕಾಯಕ ಮಾಡುತ್ತಾರೆ. ಹಾಗಾಗಿ ಕೊಡುವ ಮುನ್ನ ವಾಪಸ್ ಬರುತ್ತದೆ ಎನ್ನುವ ಆಲೋಚನೆಯನ್ನು ಬಿಟ್ಟು ಬಿಕ್ಷೆಕೊಟ್ಟಿದ್ದೇವೆ ಎಂದು ನೀಡುವುದು ಒಳ್ಳೆಯದು.


ಮೊನ್ನೆ ಅಷ್ಟೇ ಒಂದು ಘಟನೆ ಕೇಳಿದೆ ಸುಮಾರು 18 ವರ್ಷಗಳ ಹಿಂದೆ 27,000 ತುಂಬಾ ಅನಿವಾರ್ಯತೆ ಎಂದು ಪಡೆದಿದ್ದ ವ್ಯಕ್ತಿ ಒಬ್ಬ ಸಾಲ ಕೊಟ್ಟಿದ್ದವನಿಗೆ ಸಿಕ್ಕು ಅಣ್ಣ ಇನ್ನೂ ಎರಡು ತಿಂಗಳಲ್ಲಿ ಖಂಡಿತ ಕೊಡುತ್ತೇನೆ ಎಂದು ಮರೆತಿದ್ದ ಹಣವನ್ನು ನೆನಪು ಮಾಡಿದ್ದನಂತೆ. ಅಂತಹ ಘಟನೆ ನಡೆದು ಅದೆಷ್ಟೋ ವರ್ಷ ಆಗಿದ್ದವಂತೆ. ಹಾಗಾಗಿ ಅದನ್ನು ಭಿಕ್ಷೆ ಕೊಟ್ಟಿದ್ದೇನೆ ಬದುಕಿಕೊಳ್ಳಲಿ ಎಂದು ಸುಮ್ಮನಿರುವ ಆ ವ್ಯಕ್ತಿಯ ಮನದಾಳದ ಮಾತು ಕೇಳಿದಾಗ ನಿಜಕ್ಕೂ ನಮ್ಮ ನಡುವಿನ ಕೆಲ ನೈಜ ಸಮಸ್ಯೆಗಳಿಗೆ ಸಹಾಯ ಮಾಡುವ ಮನಸ್ಸು ಬರದಿರುವುದು ಈಗಿನ ವಾಸ್ತವವಾಗಿದೆ.


ಇದೇ ಸಾಲ ಕೊಟ್ಟ ವ್ಯಕ್ತಿ ಈ ಹಣದಿಂದ ಏನು ಸತ್ತು ಹೋಗಿಲ್ಲ. ಲಕ್ಷ್ಮಿ ಅವನಿಗೆ ಕೃಪೆ ತೋರಿದ್ದಾಳೆ. ಆದರೆ ಹಣ ಪಡೆದಾತ ಕೊಡುತ್ತೇವೆ ಕೊಡುತ್ತೇನೆ ಎಂದು ನಾಟಕ ಮಾಡುತ್ತಾ ನೈಜ ಮನುಷ್ಯನ ಮನದ ಮೂಲೆಯಲ್ಲಿ ಒಂದಿಷ್ಟು ಬೇಸರ, ಅಸಡ್ಡೆ ಮೂಡಿಸಿರುವುವುದು ನಿಜಕ್ಕೂ ದುರಂತವೇ ಹೌದು.
ಒಂದಂತೂ ಸತ್ಯ ಕಣ್ರೀ, ಯಾವುದೇ ಕಾರಣಕ್ಕೂ ಸುಮ್ ಸುಮ್ನೆ ಕೇಳಿ ಕೇಳಿದವರಿಗೆ ಹಣ ಕೊಡಬೇಡಿ. ಅದೂ ಸಾಲ ಅಂತ ಲೆಕ್ಕಕ್ಕೆ ಇಡಬೇಡಿ. ಬೇಕಿದ್ರೆ ಸ್ವಲ್ಪ ಸಹಾಯ ಅಂತ ಕೊಟ್ಬಿಡಿ.

ಮನಸುಗಳನ್ನು ಅರಿತುಕೊಳ್ಳುವ ಮುನ್ನ ನಮ್ಮನ್ನು ನಾವು ಅರಿತುಕೊಳ್ಳಬೇಕಿದೆ. ಇಡೀ ವ್ಯವಸ್ಥೆ ಸಾಲದ ಶೂಲದಲ್ಲಿ ಸಿಲುಕಿರುವುದು ಒಂದು ಕಡೆ ಸತ್ಯವಾಗಿದ್ದರೆ, ಮತ್ತೊಂದು ಕಡೆ ಸಾಲ ಎಂದು ಕೊಟ್ಟಾತ ಅದನ್ನು ವಸೂಲಿ ಮಾಡುವ ತಾಕತ್ತನ್ನು ಹೊಂದಿರಬೇಕು. ಮೃದು ಮನಸ್ಸಿನ ವ್ಯಕ್ತಿಗಳು ಇಂತಹ ಕೆಲಸ ಮಾಡದಿರುವುದು ಅತ್ಯಂತ ಒಳ್ಳೆಯದು. ಆ ಬಗೆಯ ಮನೋಸ್ಥಿತಿ ಈಗ ಎಲ್ಲೆಡೆ ಕಂಡುಬರುತ್ತದೆ. ಶೇಕಡವಾರು ಬಡ್ಡಿ ದರದಲ್ಲಿ ವಸೂಲಿ ಮಾಡುವ, ರೌಡಿ ಪಟಾಲಮ್ ಕಟ್ಟಿಕೊಂಡು ದಾಂದಲಿ ಮಾಡುವ ಜನರಷ್ಟೇ ಸಾಲ ಕೊಡಲು ಲಾಯಕ್ಕು. ಇದು ಇಂದಿನ ವಾಸ್ತವ ಸ್ಥಿತಿಗತಿಗಳ ಒಂದು ಸಣ್ಣ ಮಾಹಿತಿ.

  • ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ

By admin

ನಿಮ್ಮದೊಂದು ಉತ್ತರ

error: Content is protected !!