ಶಿವಮೊಗ್ಗ,ಜೂ.೨೧: ಸಂಯುಕ್ತ ಕಿಸಾನ್ ಮೋರ್ಚಾ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಜೂ.೨೪ರ ಬೆಳಿಗ್ಗೆ ೧೧ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಮುಖಂಡರ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಹಸಿರು ಸೇನೆ ಅಧ್ಯಕ್ಷ ಎಂ.ಪಿ.ಕರಿಬಸಪ್ಪ ಗೌಡ ಸಮಾವೇಶದ ಬಗ್ಗೆ ಮಾಹಿತಿ ನೀಡಿ ಕೃಷಿ ಉತ್ಪನ್ನಗಳ ಕನಿಷ್ಟ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಯಾಗಬೇಕು. ರೈತ ಕೃಷಿ ಸಾಲ ಮನ್ನಾ ಮಾಡಬೇಕು. ಬೆಳೆ ವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿಗೆ ತರುವಂತೆ, ಬರಗಾಲ ಅತಿವೃಷ್ಠಿ ಬೆಳೆ ಹಾನಿ, ಪರಿಹಾರದ ಎನ್.ಡಿ.ಆರ್.ಎಫ್. ಮಾನದಂಡ ಬದಲಾವಣೆ ಸೇರಿದಂತೆ ಇತರೆ ವಿಷಯಗಳನ್ನು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದರು.
ದೆಹಲಿ ರೈತ ಹೋರಾಟ ದಕ್ಷಿಣ ಭಾರತದಲ್ಲಿ ಪ್ರಬಲಗೊಳಿಸುವ ನಿಟ್ಟಿನಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಉತ್ತರ ಪ್ರದೇಶ ರಾಜ್ಯಗಳಲ್ಲಿ ನಡೆಯುತ್ತಿರುವ ನಿರಂತರ ಹೋರಾಟವನ್ನು ಬೆಂಬಲಿಸುವುದಾಗಿ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ಬೆಂಬಲಿಸಿದ್ದಾರೆ. ಶಿವಮೊಗ್ಗದಲ್ಲಿ ಸಮಾವೇಶ ನಡೆಸಿ ಆಂಧ್ರಪ್ರದೇಶ ಮತ್ತು ಬಿಹಾರ್‌ನ ಮುಖ್ಯಮಂತ್ರಿರವರನ್ನು ರೈತಮುಖಂಡರ ನಿಯೋಗ ಭೇಟಿ ಮಾಡಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.
ಪಂಜಾಬ್, ಹರಿಯಾಣ, ತೆಲಂಗಾಣ ರಾಜ್ಯಗಳಲ್ಲಿ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಕೃಷಿ ಉತ್ಪನ್ನಗಳನ್ನು ರೈತರಿಂದ ಶೇ.೪೫ರಷ್ಟು ಖರೀದಿ ಮಾಡಲಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಕೇವಲ ೩ರಷ್ಟು ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲು ಅನುದಾನ ನೀಡುತ್ತಿದೆ. ಇದರಿಂದ ಕೇಂದ್ರ ಸರ್ಕಾರದ ತಾರತಮ್ಯ ನೀತಿಯಿಂದ ರಾಜ್ಯದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಸಮಾವೇಶದಲ್ಲಿ ಎಸ್.ಕೆ.ಎಂ. ಅಖಿಲ ಭಾರತ ನಾಯಕ ಪಂಜಾಬ್‌ನ ಜಗಜಿತ್ ಸಿಂಗ್ ದಲೈವಾಲ, ದಕ್ಷಿಣ ಭಾರತ ರಾಜ್ಯಗಳ ಎಸ್.ಕೆ.ಎಂ. ಸಚಾಲಕ ಕುರುಬೂರು ಶಾಂತಕುಮಾರ್ ಸೇರಿದಂತೆ ಹರಿಯಾಣ, ತಮಿಳುನಾಡು, ತೆಲಂಗಾಣ, ಹೈದ್ರಾಬಾದ್‌ನ ಹಾಗೂ ರಾಜ್ಯದ ರೈತ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ಎನ್.ಹೆಚ್.ದೇವಕುಮಾರ, ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಶಿರಿವಾಳ, ಹಸಿರುಸೇನೆ ಜಿಲ್ಲಾಧ್ಯಕ್ಷ ಬಸವರಾಜ್ ಸಂಬೋಳ್, ರಾಜ್ಯ ರೈತ ಸಂಘದ ಸಾಗರ ತಾಲ್ಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಎಂ.ಎಲ್., ಉಪಸ್ಥಿತರಿದ್ದರು.