ಶಿವಮೊಗ್ಗ,ಜೂ.೨೧: ಲೈಂಗಿಕ ಅಲ್ಪಸಂಖ್ಯಾತರಿಗೆ ಕಾನೂನು ಅರಿವು ಮೂಡಿಸಬೇಕಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮರೆಡ್ಡಿ ಹೇಳಿದರು.


ಅವರು ಇಂದು ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ರಕ್ಷಾ ಸಮುದಾಯ, ಬೆಂಗಳೂರಿನ ಬಿಪಿಎಸ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರ ಮತ್ತು ದಮನೀತ ಮಹಿಳೆಯರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮಂಗಳಮುಖಿ, ತೃತೀಯ ಲಿಂಗಿಗಳು, ಲೈಂಗಿಕ ಅಲ್ಪಸಂಖ್ಯಾತರು ಹೀಗೆ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಸಮುದಾಯ ಶೋಷಣೆಗಳಿಗೆ ಒಳಗಾಗುತ್ತಲೆ ಇದೆ. ವಿಷಾಧವೆಂದರೆ ಈ ಸಮುದಾಯಕ್ಕೆ ಕಾನೂನಿನ ಅರಿವೆ ಇರುವುದಿಲ್ಲ. ಲಿಂಗತ್ವ ಅಲ್ಪಸಂಖ್ಯಾತರ ಕುರಿತ ಸಮಾಜದ ದೃಷ್ಟಿ ಬದಲಾಗಬೇಕಾಗಿದೆ. ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿಯೇ ಹಲವು ಕಾಯ್ದೆಗಳು ಜಾರಿಗೆ ಬಂದಿವೆ. ಮಹಿಳಾ ಮತ್ತು ಮಕ್ಕಳ ಇಲಾಖೆ, ಸಿಎಂಸಿ ಸೇರಿದಂತೆ ಎಲ್ಲಾ ಇಲಾಖೆಗಳು ಈ ಸಮುದಾಯಕ್ಕೆ ಕಾನೂನಿನ ಅರಿವ ಮೂಡಿಸಬೇಕಾಗಿದೆ. ಲೈಂಗಿಕ

ಅಲ್ಪಸಂಖ್ಯಾತರನ್ನು ಮನೆಯಿಂದ ಹೊರದಬ್ಬುವುದು, ದೈಹಿಕವಾಗಿ ಹಲ್ಲೆ ನಡೆಸುವುದು, ಇವೆಲ್ಲವೂ ಶಿಕ್ಷಾರ್ಹ ಅಪರಾಧಗಳಾಗಿವೆ. ಒಪ್ಪಿತ ಲೈಂಗಿಕ ಕ್ರಿಯೆಯನ್ನು ಕೂಡ ಕಾಯ್ದೆ ಒಪ್ಪುತ್ತದೆ ಹಾಗಾಗಿ ಈ ಬಗ್ಗೆ ಪೊಲೀಸ್ ಇಲಾಖೆ ಸೇರಿದಂತೆ ಸಮಾಜ ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಂತ ಗಮನಿಸಬೇಕು. ಮತ್ತು ಸರ್ಕಾರ ಕೂಡ ಅನೇಕ ಸೌಲಭ್ಯಗಳನ್ನು ಅವರಿಗೆ ನೀಡಬೇಕು ಎಂದರು.


ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸೂಪರಿಡೆಂಟ್ ಅನಿಲ್‌ಕುಮಾರ್ ಮಾತನಾಡಿ, ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಸಮಾನ ಅವಕಾಶವನ್ನು ನೀಡಲಾಗುತ್ತಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಲಾಗಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಕ್ಕು ಇದು ಅನ್ವಯಿಸುತ್ತದೆ. ಅವರಿಗೆ ಕಾನೂನಿನ ಅರಿವು ಮೂಡಿಸಬೇಕಾಗಿದೆ ಎಂದರು.
ಜಯಕರ್ನಾಟಕ ಸಂಘಟನೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಾಜೀಮಾ ಮಾತನಾಡಿ, ತೃತೀಯ ಲಿಂಗಿಗಳು ಎಲ್ಲರಂತೆ ಮನುಷ್ಯರು

ಅವರನ್ನು ಯಾವುದೇ ಕಾರಣಕ್ಕೂ ಸಮಾಜದಿಂದ ದೂರವಿಡಬಾರದು. ಸರ್ಕಾರ ಕೂಡ ಅವರ ನೆರವಿಗೆ ಬರಬೇಕು. ಮತ್ತು ಅವರಿಗೆ ಮಾಸಿಕ ವೇತನ ಮತ್ತು ಆಶ್ರಯ ಮನೆಗಳನ್ನು ನೀಡಿ ಬಿಕ್ಷೆ ಬೇಡುವುದನ್ನು ತಪ್ಪಿಸಬೇಕು. ಆ ಸಮುದಾಯ ಕೂಡ ಸ್ವಾವಲಂಭಿಯಾಗಿ ಬದುಕುವುದಕ್ಕೆ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ರಕ್ಷಾ ಸಮುದಾಯದ ಅಧ್ಯಕ್ಷ ಮೊಹಮ್ಮದ್ ಸೈಪುಲ್ಲಾ, ಸಾಮಾಜಿಕ ಹೋರಾಟಗಾರ ಕರಿಬಸಪ್ಪ, ರತ್ನಾಕರ್ ಸೇರಿದಂತೆ ಹಲವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!