ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ಹೊರೆಯಾಗುವಂತೆ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಗ್ಯಾಸ್ ಸಿಲಿಂಡರ್‌ಗಳೊಂದಿಗೆ ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.


ಗೃಹಬಳಕೆ ಸಿಲಿಂಡರ್ ದರವನ್ನು 100 ರು. ಏರಿಕೆ ಮಾಡಲಾಗಿದೆ. ಇದರಿಂದಾಗಿ ಗ್ರಾಹಕರು ಕಂಗಾಲಾಗಿದ್ದಾರೆ. ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಿದಂತಾಗಿದೆ. ಕೊರೋನಾದಿಂದ ಆರ್ಥಿಕ ಬಿಕ್ಕಟ್ಟು, ಹಣದುಬ್ಬರ ಹೆಚ್ಚಳದಿಂದ ಹೈರಾಣಾಗಿರುವ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿ ಕುಟುಂಬಕ್ಕೆ ವರ್ಷಕ್ಕೆ 12 ಗೃಹ ಬಳಕೆ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸರ್ಕಾರ ನೀಡುತ್ತಿದ್ದ ಸಬ್ಸಿಡಿಯನ್ನು ಕಳೆದ 6 ತಿಂಗಳಿಂದ ನಿಲ್ಲಿಸಲಾಗಿದೆ. ಸಿಲಿಂಡರ್ ದರ ಮಾತ್ರ ಭಾರೀ ಹೆಚ್ಚಳ ಮಾಡಲಾಗಿದೆ ಎಂದು ದೂರಿದರು.
ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗಿದೆ. ಇದರಿಂದಾಗಿ ವಾಹನ ಸವಾರರಿಗೆ ಮತ್ತು ಲಾರಿ, ಬಸ್, ಟ್ಯಾಕ್ಸಿ ಮಾಲೀಕರಿಗೆ ಬಿಸಿ ತಟ್ಟಿದೆ. ಆದರೂ ನಿತ್ಯ ದರ ಏರುಗತಿಯಲ್ಲಿ ಸಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಸತತವಾಗಿ ಏರಿಕೆಯಾಗುತ್ತಿರುವುದರಿಂದ ರೈತರು ಸೇರಿ ಬಡ, ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿ ಹಣದುಬ್ಬರಕ್ಕೆ ಕಾರಣವಾಗಿದೆ. ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಸರಕು ಸಾಗಾಣೆ ದರಗಳ ಹೆಚ್ಚಳವಾಗಿ ವಸ್ತುಗಳ ಬೆಲೆ ಏರಿಕೆಯಾಗಿದೆ. ಕೃಷಿ ಮತ್ತು ಮಾರಾಟ ಕಾರ್ಯದಲ್ಲಿ ತೊಡಕು ಉಂಟಾಗಿ ಅರ್ಥವ್ಯವಸ್ಥೆಗೆ ಧಕ್ಕೆ ಬಂದಿದೆ. ತೈಲ, ಅಡುಗೆ ಅನಿಲ ದರ ಏರದಂತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸರ್ಕಾರದ ಹೊಣೆಗಾರಿಕೆ ಮತ್ತು ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸಾಮಾನ್ಯ ಜನರು ಪ್ರತಿಭಟನೆ ಮಾಡಲು ಸರ್ಕಾರವೇ ಅವಕಾಶ ನೀಡಿದಂತಾಗಿದೆ ಎಂದರು.
ವಿದ್ಯುತ್ ಕಂಪೆನಿಗಳು ನಷ್ಟದ ಹೊರೆ ಸರಿದೂಗಿಸಲು ಜನವರಿ ೧ ರಿಂದ ಮಾರ್ಚ್ ೩೧ರವರೆಗೆ ಸೀಮಿತವಾಗಿ ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ ೪ ರಿಂದ ೮ ಪೈಸೆವರೆಗೆ ಹೆಚ್ಚಳ ಮಾಡಲಾಗಿದೆ. ನವೆಂಬರ್‌ರಿಂದೀಚೆಗೆ ಎರಡು ಬಾರಿ ವಿದ್ಯುತ್ ದರ ಹೆಚ್ಚಳದಿಂದ ಸಂಕಷ್ಟಕ್ಕೆ ಸಿಲುಕಿರುವ ಗ್ರಾಹಕರಿಗೆ ಕೆಲವೇ ತಿಂಗಳುಗಳ ಅಂತರದಲ್ಲಿ ವಿದ್ಯುತ್ ದರದ ಬಿಸಿ ತಟ್ಟಲಿದೆ ಎಂದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಪ್ರಸ್ತಾಪ ರೈತರು ಮತ್ತು ಗ್ರಾಹಕರ ಹಿತಾಸಕ್ತಿಗೆ ಮಾರಕವಾಗಲಿದೆ ಎಂಬ ಭೀತಿ ಜನಸಾಮಾನ್ಯರಲ್ಲಿ ಆತಂಕವನ್ನುಂಟುಮಾಡಿದೆ. ಏಕಪಕ್ಷೀಯವಾಗಿ ಕಾಯ್ದೆಗೆ ತಿದ್ದುಪಡಿ ಮಾಡುವುದು ಸರಿಯಲ್ಲ. ಈ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿದರು.
ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ದಿನನಿತ್ಯ ವಸ್ತುಗಳು ಕೈಗೆ ಎಟಕದೇ ಶ್ರೀಸಾಮಾನ್ಯರು ಆತಂಕಗೊಂಡಿದ್ದಾರೆ. ಇದರಿಂದ ಬಿಜೆಪಿಗರ ಸಾಧನೆ ಬಡವರ ಬಾಳಿಗೆ ಆತಂಕಕಾರಿಯಾಗಿದೆ. ಲಾಕ್‌ಡೌನ್‌ನಿಂದಾಗಿ ರಾಜ್ಯದ ಜನ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಆಸ್ತಿ ತೆರಿಗೆ ಹೆಚ್ಚಳದ ಮೂಲಕ ರಾಜ್ಯಸರ್ಕಾರ ಜನಸಾಮಾನ್ಯರಿಗೆ ಬರೆ ಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ಜನಸಾಮಾನ್ಯರನ್ನು ರಕ್ಷಿಸಲು ಸಂಪೂರ್ಣವಾಗಿ ವಿಫಲವಾಗಿದೆ. ಗ್ಯಾಸ್ ಸಿಲಿಂಡರ್, ಪೆಟ್ರೋಲ್, ಡೀಸೆಲ್, ವಿದ್ಯುತ್ ದರ, ಅಗತ್ಯ ವಸ್ತುಗಳು, ಆಸ್ತಿ ತೆರಿಗೆ ಹೆಚ್ಚಳವನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಎಸ್.ಸುಂದರೇಶ್, ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆ ಸದಸ್ಯೆ ರೇಖಾ ರಂಗನಾಥ್, ಮುಖಂಡರಾದ ಎನ್.ರಮೇಶ್, ಕಲಗೋಡು ರತ್ನಾಕರ್, ತೀ.ನಾ.ಶ್ರೀನಿವಾಸ್, ಬಿ.ಎ.ರಮೇಶ್ ಹೆಗ್ಡೆ, ಎಸ್.ಪಿ.ಶೇಷಾದ್ರಿ, ಎಲ್.ರಾಮೇಗೌಡ, ನಯಾಜ್ ಅಹಮ್ಮದ್, ಇಕ್ಕೇರಿ ರಮೇಶ್, ಯು.ಶಿವಾನಂದ, ವಿಶ್ವನಾಥ್ ಕಾಶಿ, ಚಂದನ್, ಸುವರ್ಣ ನಾಗರಾಜ್, ವಿಜಯಲಕ್ಷ್ಮಿ ಪಾಟೀಲ್, ಸಿ.ಜೆ. ಮಧುಸೂದನ್, ಕೆ.ಚೇತನ್, ಹೆಚ್.ಪಿ.ಗಿರೀಶ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!