ಸಾಗರ, ಜೂ.೦೪;
ಇಲ್ಲಿನ ಬಿಜೆಪಿ ಯುವ ಮೋರ್ಚಾ ವತಿಯಿಂದ ಪರಿಶಿಷ್ಟ ವರ್ಗಕ್ಕೆ ಸಂಬಂಧಪಟ್ಟ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿರುವ ೧೮೭ ಕೋಟಿ ರೂ. ಅಕ್ರಮ ಹಣ ವರ್ಗಾವಣೆಯನ್ನು ಖಂಡಿಸಿ ಶಿವಪ್ಪನಾಯಕ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು…


ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಸಂತೋಷ್ ಶೇಟ್, ಪರಿಶಿಷ್ಟ ವರ್ಗದವರು, ದಲಿತರ ಏಳಿಗೆಗಾಗಿ ಇರುವ ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ೧೮೭ ಕೋಟಿ ರೂ. ಅಕ್ರಮ ಹಣ ವರ್ಗಾವಣೆಯಾಗಿದೆ. ಯೂನಿ ಯನ್ ಬ್ಯಾಂಕ್ ಮೂಲಕ ಕೆಲವು ಕಂಪನಿಗಳಿಗೆ ಹಣವನ್ನು

ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದು, ಕಾಂಗ್ರೇಸ್ ಪಕ್ಷ ಚುನಾವಣಾ ಖರ್ಚಿಗಾಗಿ ದಲಿತ ಸಮುದಾಯದ ಅಭಿವೃದ್ದಿಗೆ ಮೀಸಲಿದ್ದ ಹಣವನ್ನು ಖರ್ಚು ಮಾಡಿದೆ ಎನ್ನುವ ಅನುಮಾನ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಾಂಗ್ರೇಸ್‌ನ ಭ್ರಷ್ಟಾಚಾರಕ್ಕೆ ಹಿಡಿದ ಕನ್ನಡಿ ಇದಾಗಿದ್ದು,

ತಕ್ಷಣ ಸಚಿವ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಪ್ರಕರಣದಲ್ಲಿ ಯಾರ‍್ಯಾರು ಭಾಗಿಯಾಗಿದ್ದಾರೋ ಎಲ್ಲಾ ಸಚಿವರು ರಾಜಿನಾಮೆ ನೀಡಬೇಕು. ಅಕೌಂಟ್ ಸೂಪರಿಡೆಂಟ್ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಸಂಪೂರ್ಣ ಹೊಣೆ ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.


ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಪರಶುರಾಮ್ ಮಾತನಾಡಿ, ಗ್ಯಾರಂಟಿ ಮೂಲಕ ಜನರ ದಾರಿ ತಪ್ಪಿಸಿ ರಾಜ್ಯವನ್ನು ಕಾಂಗ್ರೇಸ್ ಸರ್ಕಾರ ಲೂಟಿ ಮಾಡುತ್ತಿದೆ. ರಾಜಕೀಯ ಇತಿಹಾಸದಲ್ಲಿ

ಸಚಿವರೊಬ್ಬರು ೧೮೭ ಕೋಟಿ ರೂ. ಅವ್ಯವಹಾರ ನಡೆಸಿರುವುದು ಮೊದಲು. ಸಚಿವ ನಾಗೇಂದ್ರ ಈ ಹಗರಣದ ಪ್ರಮುಖ ಆರೋಪಿಯಾಗಿದ್ದು ತಕ್ಷಣ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ನಾಗೇಂದ್ರ ರಾಜಿನಾಮೆ ನೀಡದೆ ಹೋದಲ್ಲಿ ಉಗ್ರವಾದ ಪ್ರತಿಭಟನೆ ಯುವ ಮೋರ್ಚಾ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.


ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಬಿ.ಎಚ್.ಲಿಂಗರಾಜ್, ಅರವಿಂದ ರಾಯ್ಕರ್, ಪ್ರಮುಖರಾದ ಪ್ರದೀಪ್ ಆಚಾರಿ, ವಿನಯ್ ಪೂಜಾರಿ, ಗುರುಪ್ರಸಾದ್, ಪ್ರವೀಣ್, ಆದರ್ಶ, ಮುರಳಿ ಮಂಕಳಲೆ, ಸುಧೀರ್ ಶೆಣೈ, ಪ್ರಕಾಶ್ ರಾಮನಗರ, ಅಮಿತ್ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!