ಶಿವಮೊಗ್ಗ, ಮೇ.೨೪:
ಗೆದ್ದು ಬಂದ ತಕ್ಷಣ ಒಪಿಎಸ್ ಜಾರಿಗೊಳಿಸು ವುದಕ್ಕೇ ತಮ್ಮ ಪ್ರಥಮ ಆದ್ಯತೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಪುನರುಚ್ಛರಿಸಿದರು.
ಅವರು ನಗರದ ಜಿಲ್ಲಾ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಸಹಕಾರ ಸಂಘ ದಲ್ಲಿ ಅಲ್ಲಿನ ಪದಾಧಿಕಾರಿಗಳ, ಸದಸ್ಯರ ಮತ ಯಾಚಿಸಿ ಮಾತನಾಡುತ್ತಿದ್ದರು.
ಒಪಿಎಸ್ ಸರ್ಕಾರಕ್ಕೆ ಒಂದು ಪ್ರಸವ ವೇದನೆ ಆಗಿದೆ. ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಲವಾರು ವಿಷಯ ಗಳ ಕುರಿತು ಸದನದಲ್ಲಿ ಪ್ರಸ್ಥಾಪಿಸಿದಾಗ ನೀವೇನ್ರಿ ಪದೇ ಪದೇ ಅದನ್ನೇ ಪ್ರಸ್ತಾಪಿಸ್ತೀರಿ ಅಂತ ಸದನದಲ್ಲಿನ ಅನೇಕರು ನನಗೆ ಪ್ರಶ್ನಿಸುತ್ತಿದ್ದರು. ಸಮಸ್ಯೆಗಳು ಬಗೆ ಹರಿಯದೇ ಹಾಗೇ ಉಳಿದಿರುವಾಗ ಪ್ರಶ್ನೆ ಕೇಳುವುದರಲ್ಲಿ
ತಪ್ಪೇನಿದೆ? ಎಲ್ಲಿಯವರೆಗೆ ಸಮಸ್ಯೆ ಬಗೆ ಹರಿಯುವುದಿಲ್ಲವೋ ಅಲ್ಲಿವರೆಗೂ ತಾವು ಬಿಡುವುದಿಲ್ಲ ಎಂದು ಹೇಳುತ್ತಿದ್ದೆ ಎಂದು ಆಯನೂರು ಹೇಳಿದರು.
ಶಾಸನ ಸಭೆಗೆ ಚುನಾಯಿತರಾದ ಸದಸ್ಯರಿಗೆ ಒಪಿಎಸ್ ವ್ಯವಸ್ಥೆ ಇದೆ. ಅವರು ಒಂದು ವ ರ್ಷ ಸದಸ್ಯರಾಗಿರಲಿ, ಎರಡೇ ವರ್ಷ ಸದಸ್ಯರಾಗಿರಲಿ ಅವರು ಒಪಿಎಸ್.ಗೆ ಅರ್ಹರಾಗಿರುತ್ತಾರೆ. ಅಷ್ಟಕ್ಕೇ ಎಲ್ಲ ಸೇರಿ ತಿಂಗಳಿಗೆ ಸುಮಾರು ಎರಡು ಲಕ್ಷ ರೂಪಾಯಿ ತೆಗೆದುಕೊಳ್ಳುತ್ತಾರೆ. ಆದರೆ ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ೨೦, ೩೦ ವರ್ಷ ಸೇವೆ ಸಲ್ಲಿಸಿದರೂ ಅವರಿಗೆ ಒಪಿಎಸ್ ಸೌಲಭ್ಯ ದೊರೆಯುವುದಿಲ್ಲ ಎಂದರೆ ಅದರಷ್ಟು ಅಮಾನವೀಯ ಮತ್ತೊಂದಿಲ್ಲ ಎಂದು ವಿಷಾಧಿಸಿದರು.
ಅನುದಾನಿತ ಶಾಲಾ ಕಾಲೇಜುಗಳಿಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಪ್ರತೀ ವರ್ಷ ಮಾನ್ಯತೆ ನವೀಕರಣ ಆಗಬೇಕು ಎಂದು ಸರ್ಕಾರ ವಿಧಿಸಿರುವ ಮಾನದಂಡ ಅವೈಜ್ಞಾನಿಕವಾ ದುದು. ಅತ್ಯಂತ ಹಳೆಯ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಅತ್ಯಂತ ಶಿಸ್ತು ಭದ್ದವಾಗಿ ಕಾರ್ಯ ನಿರ್ವಹಿಸುತ್ತಿವೆ. ಅವುಗಳಿಗೆ ೧೦ ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಿಕೊಂಡರೆ ಸಾಕು ಎಂಬ ಅಭಿಪ್ರಾಯ ವ್ಯಕ್ತಪಡಿ ಸಿದರು. ಈ ನಿಟ್ಟಿನಲ್ಲಿ ತಾವು ಶ್ರಮಿಸುವು ದಾಗಿ ಭರವಸೆ ನೀಡಿದರು.
ಯಡಿಯೂರಪ್ಪ ಸರ್ಕಾರವಿದ್ದಾಗ ೨೮-೦೩-೨೦೧೦ರಂದು ರಾಜ್ಯದಲ್ಲಿ ಒಪಿಎಸ್ ಜಾರಿಮಾಡಿ ೨೦೦೬ರ ಪೂರ್ವಾನ್ವಯವಾಗುವಂತೆ ಮಾಡಿದ್ದು ಲಕ್ಷಾಂತರ ನೌಕರರ ಭವಿಷ್ಯದ ಮೇಲೆ ಬರೆ ಎಳೆದಂತಾಗಿದೆ. ಆ ಆದೇಶವನ್ನು ರದ್ದು ಪಡಿಸಿ ಎಲ್ಲರಿಗೂ ಒಪಿಎಸ್ ಅನ್ವಯಯವಾಗುವಂತೆ ಮಾಡುವುದಾಗಿ ಆಶ್ವಾಸನೆ ನೀಡಿದ ಅವರು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ, ಮರಣ, ವರ್ಗಾವಣೆ, ರಾಜೀನಾಮೆಗಳಿಂದ ತೆರವಾದ
ಹುದ್ದೆಗಳಿಗೆ ನೇಮಕಾತಿಗೆ ಈಗಿರುವ ೨೦೧೫ರ ನಿರ್ಭಂಧದ ಆದೇಶವನ್ನು ಹಿಂಪಡೆದು ಆಯಾ ಕಾಲಕ್ಕೆ ತೆರವಾಗುವ ಹುದ್ದೆಗಳಿಗೆ ಆಗಿಂದಾಗ್ಗೆ ಭರ್ತಿ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ಪ್ರಯತ್ನ ಮಾಡುವು ದಾಗಿ ಅವರು ತಿಳಿಸಿದರು.
ಅನುದಾನ ರಹಿತ ಅವಧಿಯಿಂದ ವೇತನಾನು ದಾನಕ್ಕೊಳಪಟ್ಟ ಶಿಕ್ಷಣ ಸಂಸ್ಥೆಗಳ ನೌಕರರು ಅತ್ಯಂತ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅವರ ಮತ್ತು ಅವರ ಕುಟುಂಬದ ಹಿತ ದೃಷ್ಟಿಯಿಂದ ಕಾಲ್ಪನಿಕ ವೇತನ ಸೌಲಭ್ಯನೀಡಿ ಅವರಿಗೂ ಹಳೆ ಪಿಂಚಣಿ ಪದ್ಧತಿ ದೊರಕುವಂತೆ ಮುಖ್ಯ ಮಂತ್ರಿಗಳ ಜತೆ ಮಾತನಾಡು ವುದಾಗಿ ತಿಳಿಸಿದರು.
ಸಂಘದ ಅಧ್ಯಕ್ಷ ಯೋಗೇಶ್ ಎಸ್., ಉಪಾಧ್ಯಕ್ಷ ಇಮ್ತಿಯಾಜ್ ಅಹಮ್ಮದ್, ಮಾಜಿ ಅಧ್ಯಕ್ಷರಾದ ಡಾ.ಬಾಲಕೃಷ್ಣ ಹೆಗಡೆ, ನಿರ್ದೇಶಕರಾದ ಪ್ರಶಾಂತ್ ಎಸ್.ಎಚ್. ಕಾರ್ಯದರ್ಶಿ ಶ್ರೀರಾಮ ಇದ್ದರು.