ಶಿವಮೊಗ್ಗ,ಮೇ4: ಗ್ಯಾರಂಟಿ ಯೋಜನೆಯ ಮೂಲಕ ಕೋಟ್ಯಾಂತರ ಬಡವರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಇದು ಕಾಂಗ್ರೆಸ್ಸಿನ ಐತಿಹಾಸಿಕ ಕೊಡುಗೆಯಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಪಕ್ಷ ರಾಜ್ಯ ಮತ್ತು ದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತದೆ ಎಂದು  ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷಿಯಿಂದ ಮಹಿಳೆಯರಿಗೆ ವರ್ಷಕ್ಕೆ 24 ಸಾವಿರ ರೂ. ಸಿಗಲಿದೆ. ಅದೇ ರೀತಿ ಗೃಹಜ್ಯೋತಿ, ಶಕ್ತಿ ಯೋಜನೆ, ಯುವ ನಿಧಿ, ಅನ್ನಭಾಗ್ಯ ಯೋಜನೆಯಿಂದ ಬಡವರಿಗೆ ಅನುಕೂಲವಾಗಿದೆ. ಇದನ್ನು ಮನಗಂಡು ಮತದಾರರು ಕಾಂಗ್ರೆಸ್‍ನ್ನು ಬೆಂಬಲಿಸಬೇಕು ಎಂದರು.

ಅಭಿವೃದ್ಧಿ ಹರಿಕಾರ ಎಸ್.ಬಂಗಾರಪ್ಪನವರ ಪುತ್ರಿ ಗೀತಾಶಿವರಾಜ್‍ಕುಮಾರ್ ಅವರಿಗೆ ಮತನೀಡಬೇಕು, ಎಸ್.ಬಂಗಾರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಆಶ್ರಯ, ಆರಾಧನ ಮುಂತಾದ ಯೋಜನೆಗಳನ್ನು ತಂದು ಕೋಟ್ಯಾಂತರ ಬಡ ಕುಟುಂಬಗಳಿಗೆ ಅನುಕೂಲ ಮಾಡಿಕೊಟ್ಟಿದ್ದರು. ಇವರಿಗೆ ಗೌರವ ಸಿಗಬೇಕಾದರೆ ಗೀತಾಕ್ಕ ಅವರಿಗೆ ಒಂದು ಅವಕಾಶ ನೀಡಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ತಾವೇ ತಂದಿದ್ದೇವೆ ಎಂದು ಬಿಜೆಪಿಯವರು ಬಿಲ್ಡಪ್ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರದ ಒಂದೇ ಒಂದು ಯೋಜನೆಯನ್ನು ಜಾರಿಗೆ ತಂದಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾರೆ ಹೊರತು ಸಾಧನೆಗಳನ್ನು ಎಲ್ಲಿಯೂ ಹೇಳುತ್ತಿಲ್ಲ. ಶೌಚಾಲಯವನ್ನು ಕಟ್ಟಿದ್ದೇವೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ, ಹಿಂದೇ ಶೌಚಾಲಯಗಳೇ ಇರಲಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಸಂಸದ ಬಿ.ವೈ.ರಾಘವೇಂದ್ರ ಅವರ ಸಾಧನೆ ಶೂನ್ಯವಾಗಿದ್ದು, 15 ವರ್ಷದಲ್ಲಿ ಅವರೇನು ಕಡೆದು ಕಟ್ಟೆಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಇನ್ನೂ ಟೇಕಪ್ ಆಗಿಲ್ಲ ಎಂದ ಅವರು, ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರು ಸಹ ಬಿಜೆಪಿ ಸಂಸದರು ಸಂಸತ್‍ನಲ್ಲಿ ಧ್ವನಿಯೆತ್ತದೆ ಮೂಕಪ್ರೇಕ್ಷಕರಾಗಿದ್ದಾರೆ ಎಂದು ದೂರಿದರು.

ಮಲೆನಾಡ ಮಗಳು, ದೊಡ್ಮನೆ ಸೊಸೆ, ಗೀತಾಶಿವರಾಜ್‍ಕುಮಾರ್ ಅವರ ಗೆಲುವು ನಿಶ್ಚಿತ ಎಂದ ಅವರು, ರಾಜ್ಯದಲ್ಲಿ 23 ಸ್ಥಾನಗಳನ್ನು ಗೆದ್ದೆ ಗೆಲ್ಲುತ್ತೇವೆ ಎಂದರು.

ಅಣ್ಣಾಮಲೈ ಅವರು ಬಿಜೆಪಿಯ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಇದರ ಜೊತೆಗೆ ಬಿಜೆಪಿಯ ಮುಖಂಡರು ಕೂಡ ಕಾಂಗ್ರೆಸ್ ಪಕ್ಷ 60ವರ್ಷಗಳಲ್ಲಿ ಏನು ಮಾಡಿದೆ ಎಂದು ಕೇಳುತ್ತಾರೆ. ಅವರು ನಮ್ಮೊಂದಿಗೆ ಚರ್ಚೆ ಬರಲಿ ಒಂದು ಆರೋಗ್ಯಕರವಾದ ಚರ್ಚೆ ಮಾಡೋಣ. ಇನ್ನು 2 ದಿನ ಸಮಯವಿದೆ. ನೀವು ಎಲ್ಲಿಗೆ ಕರೆದರು ನಾವು ಡಿಬೆಟ್‍ಗೆ ಸಿದ್ದ ಎಂದು ಸವಾಲು ಹಾಕಿದರು.

ಕಳೆದ 60 ವರ್ಷಗಳಲ್ಲಿ ಕಾಂಗ್ರೆಸ್ ಈ ದೇಶವನ್ನು ಕಟ್ಟಿದೆ. ರೈಲು, ವಿಮಾನ, ರಸ್ತೆ ಮಾರ್ಗಗಳನ್ನು ದೇಶದಲ್ಲಿ ನಿರ್ಮಿಸಿದವರು ನಾವು, ಶೌಚಾಲಯ, ಶಾಲೆಗಳನ್ನು ಕಟ್ಟಿದ್ದು ಕಾಂಗ್ರೆಸ್, ದೊಡ್ಡ ದೊಡ್ಡ ನೀರಾವರಿ ಯೋಜನೆಗಳನ್ನು ಮಾಡಿದ್ದು, ಕಾಂಗ್ರೆಸ್   ಬಾಹ್ಯಾಕಾಶಕ್ಕೆ ತಂತ್ರಜ್ಞಾನಕ್ಕೆ ಒತ್ತುಕೊಟ್ಟವರು ನಾವು, ಕೈಗಾರಿಕಾ ಕ್ರಾಂತಿ, ಕೃಷಿ ಕ್ರಾಂತಿಯನ್ನು ಸೃಷ್ಠಿಸಿದ್ದು ಕಾಂಗ್ರೆಸ್, ನವೋದಯ ಶಾಲೆಗಳನ್ನು ಕೊಟ್ಟಿದ್ದು ಕಾಂಗ್ರೆಸ್, ಈ ಎಲ್ಲವೂ ಸಾಧನೆಗಳೆಲ್ಲವೇ ಬಿಜೆಪಿಗರು ಈ ಸಾಧನೆಗೆ ಬಣ್ಣ ಹಂಚಿ ನಾವು ಮಾಡಿದ್ದು ಎನ್ನುತ್ತಾರೆ ಎಂದರು. 

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಮುಖಂಡರಾದ ಅನಿಲ್‍ಕುಮಾರ್ ತಡಕಲ್, ಎಲ್.ಸತ್ಯನಾರಾಯಣರಾವ್, ಸಿ.ಎಸ್.ಚಂದ್ರಭೂಪಾಲ್, ಜಿ.ಡಿ.ಮಂಜುನಾಥ್, ಇಕ್ಕೇರಿ ರಮೇಶ್, ಶ್ರೀಧರಮೂರ್ತಿ ನವುಲೆ, ಜಿ.ಪದ್ಮನಾಭ್, ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!