ಶಿವಮೊಗ್ಗ:

ಶಿವಮೊಗ್ಗ ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗ ತಾಲೂಕಿನ ವಿವಿಧೆಡೆ ಅಬ್ಬರದ ಪ್ರಚಾರ ನಡೆಸಿದರು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಶಕ್ತಿ

ಪ್ರದರ್ಶಿಸಲಾಯಿತು.ಗುರುವಾರ ಸಂಜೆ ಶಿವಮೊಗ್ಗ ತಾಲೂಕಿನ ಆಯನೂರು ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ಈಶ್ವರಪ್ಪ ಆಯನೂರಿಗೆ ಆಗಮಿಸುತ್ತಿದ್ದಂತೆ ಅವರ ಪರ ಜೈಕಾರಗಳು ಮುಗಿಲುಮುಟ್ಟಿದವು. ಶಿವಮೊಗ್ಗ ತಾಲೂಕಿನ ವಿವಿಧೆಡೆ ಯಿಂದಲೂ ಸಾವಿರಾರು ಜನರು ಆಗಮಿಸಿದ್ದರು. ಜನರಿಂದ ಆಯನೂರು ರಸ್ತೆ ತುಂಬಿ ಹೋಗಿತ್ತು.

ಬಳಿಕ ಹಾರನಹಳ್ಳಿಯಲ್ಲಿ ಕೆ.ಎಸ್‌.ಈಶ್ವರಪ್ಪ ರೋಡ್ ಷೋ ನಡೆಸಿದರು. ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರು, ಮಹಿಳೆಯರು, ಯುವಕರು, ರೈತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲೆಲ್ಲೂ ಜನಸಾಗರವೇ ಹರಿದು ಬಂದಿತ್ತು.

ಆಯನೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ನಾನು ಗೆದ್ದ ಬಳಿಕ ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮ ಸಮಸ್ಯೆ ಬಗೆಹರಿಯುವವರೆಗೆ ನಾನು ಬಿಡಲ್ಲ ಎಂದು ಭರವಸೆ ನೀಡಿದರು.

ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂಬ ಉದ್ದೇಶ ನನಗೆ ಇರಲಿಲ್ಲ. ನಾನು ಐದು ಬಾರಿ ಶಿವಮೊಗ್ಗದ ಶಾಸಕನಾಗಿದ್ದೇನೆ. ಅನೇಕ ಇಲಾಖೆಯ ಸಚಿವನಾಗಿದ್ದೇನೆ. ಉಪಮುಖ್ಯಮಂತ್ರಿಯಾಗಿದ್ದೇನೆ. ಇಷ್ಟೇಲ್ಲ ಆದರೂ ನಾನು ಸ್ಪರ್ಧೆ ಮಾಡುತ್ತಿರುವ ಉದ್ದೇಶ ಜಿಲ್ಲೆಯ ಅನೇಕ ಸಮಸ್ಯೆಗಳು ಹಾಗೆ ಉಳಿದಿವೆ. ಇವುಗಳನ್ನು ಪರಿಹರಿಸಲು ರಾಘವೇಂದ್ರ

ಅವರ ಕೈಯಲ್ಲಿ ಆಗಲ್ಲ. ಕಾಂಗ್ರೆಸ್‌ನ ಮಂತ್ರಿಯಾಗಿರುವ ಮಧು ಬಂಗಾರಪ್ಪ ಅವರು ಪತ್ರಿಕಾಗೋಷ್ಠಿ, ಸಭೆ, ಸನ್ಮಾನಗಳಿಗೆ ಅಷ್ಟೇ ಸಿಮಿತರಾಗಿದ್ದಾರೆ. ಜನರ ಸಮಸ್ಯೆಗಳನ್ನು ಕೇಳುತ್ತಿಲ್ಲ. ಇದೆಲ್ಲದಕ್ಕೂ ಉತ್ತರ ಕೊಡುವ ಸಂದರ್ಭ ಬಂದಿದೆ. ಇದಕ್ಕಾಗಿ ನಾನ್ನು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು.

ನಾನು ನರೇಂದ್ರ ಮೋದಿ ಅವರ ಭಕ್ತ. ಮೋದಿಯನ್ನು ದೇವರಂತೆ ನೋಡುತ್ತೇನೆ. ರಾಷ್ಟ್ರದಲ್ಲಿ ಕಾಂಗ್ರೆಸ್‌ನ ಕುಟುಂಬ ರಾಜಕೀಯದಿಂದ ಮುಕ್ತ ಗೊಳಿಸಬೇಕು ಎನ್ನುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಒಂದು ಕುಟುಂಬದ ಕೈಯಲ್ಲಿದೆ. ಯಡಿಯೂರಪ್ಪ ರಾಷ್ಟ್ರ ಚುನಾವಣೆ ಸಮಿತಿ ಸದಸ್ಯರಿದ್ದಾರೆ. ಅವರ ಒಬ್ಬ ಮಗ ಸಂಸದರಾಗಿದ್ದಾರೆ. ಇನ್ನೊಬ್ಬ ಮಗ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾನೆ. ಬಿಜೆಪಿಯಲ್ಲಿ ಬೇರೆ ಯಾರು ಇರಲಿಲ್ವಾ? ನಿಮ್ಮ ಕುಟುಂಬದವರೇ ಇರಬೇಕಾ? ರಾಜ್ಯದಲ್ಲಿ ಬಿಜೆಪಿಯಲ್ಲಿರುವ ಕುಟುಂಬ ರಾಜಕಾರಣವನ್ನು ಕೊನೆಗಾಣಿಸಿ, ಬಿಜೆಪಿ ಪಕ್ಷವನ್ನು ಅಪ್ಪ-ಮಕ್ಕಳಿಂದ ಮುಕ್ತ ಮಾಡುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌, ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ತೀ.ನಾ.ಶ್ರೀನಿವಾಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!