ಶಿವಮೊಗ್ಗ,ಏ.16: ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಏ.18ರಂದು ನಾಮಪತ್ರ ಸಲ್ಲಿಸಲಿದ್ದು ಜೆಡಿಎಸ್ ಪಕ್ಷದ ಕಾರ್ಯಕರ್ತರೆಲ್ಲರು ಇದರಲ್ಲಿ ಭಾಗವಹಿಸುತ್ತಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಕೋರ್ ಸಮಿಟಿ ಸದಸ್ಯ ಕೆ.ಬಿ.ಪ್ರಸನ್ನಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಪಕ್ಷದ ಜಿಲ್ಲೆಯ ಎಲ್ಲಾ ಮುಖಂಡರು, ಬೂತ್ಮಟ್ಟದ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಇದ್ದ ಜನ ಸಂಖ್ಯೆಗಿಂತಲೂ ಅತಿ ಹೆಚ್ಚಾಗಿ ನಮ್ಮ ಪಕ್ಷದ ಮತ್ತು ಮೈತ್ರಿ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದು, ಇದೊಂದು ಅಭೂತಪೂರ್ವ ಸನ್ನಿವೇಶಕ್ಕೆ ಕಾರಣವಾಗುತ್ತದೆ.
ಮುಖ್ಯವಾಗಿ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ನಮ್ಮ ಪಕ್ಷದ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿದರು.
ಹೆಚ್.ಡಿ.ಕುಮಾರಸ್ವಾಮಿಯವರು ಕೇವಲ ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಮಾತ್ರ ಬಂದುಹೋಗದೆ ಚುನಾವಣೆಯ ಮತ ಪ್ರಚಾರದ ಸಮಯದಲ್ಲೂ ಕೂಡ ಇಡೀ ಜಿಲ್ಲೆಯಲ್ಲಿ ಭಾಗವಹಿಸಿ ಮತ ಯಾಚಿಸಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಲಿದ್ದಾರೆ. ಮೈತ್ರಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದರು.
ಈಶ್ವರಪ್ಪನವರು ಸ್ಪರ್ಧೆ ಮಾಡುವುದರಿಂದ ಮೈತ್ರಿ ಪಕ್ಷಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಮತ್ತು ಇನ್ನು ಸಮಯವಿರುವುದರಿಂದ ಅವರು ನಾಮಪತ್ರವನ್ನು ವಾಪಾಸ್ಸು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಗ್ಯಾರಂಟಿಗಳನ್ನು ಟೀಕಿಸುವ ಭರದಲ್ಲಿ ಮಹಿಳೆಯರಿಗೆ ಕುಮಾರಸ್ವಾಮಿಯವರು ಅವಮಾನ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನು ಇಲ್ಲ, ಅವರು ಹೇಳಿದ ಅರ್ಥವೇ ಬೇರೆ, ಈಗಾಗಲೇ ಅದಕ್ಕೆ ಕ್ಷಮೆ ಕೂಡ ಕೇಳಿದ್ದಾರೆ. ಇದು ಮುಗಿದ ಅಧ್ಯಾಯ, ಕಾಂಗ್ರೆಸ್ನವರೇ ಮಾತನಾಡಲು ಬೇರೆ ವಿಷಯವಿಲ್ಲ ಅಷ್ಟೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಕೃಷ್ಣ, ದೀಪಕ್ಸಿಂಗ್, ಗೀತಾಸತೀಶ್, ಎಸ್.ವಿ.ರಾಜಮ್ಮ, ತ್ಯಾಗರಾಜ್, ನರಸಿಂಹಮೂರ್ತಿ ಗಂಧದಮನೆ, ಸಿದ್ದಪ್ಪ,ರಘು, ಸಂಗಯ್ಯ, ಅಬ್ದುಲ್ ವಾಜೀದ್, ಮಾಜಿ ಪಾಲಿಕೆ ಸದಸ್ಯ ರಘು ,ವಿನಯ್, ರಾಚಯ್ಯ, ಪುಷ್ಪ, ಆಯನೂರು ಶಿವಾನಾಯಕ, ಸಂಜಯ್ ಕಶ್ಯಪ್, ಪ್ರಭು ಇನ್ನಿತರರು ಉಪಸ್ಥಿತರಿದ್ದರು.