ಶಿವಮೊಗ್ಗ: ಏ. ೧೨ ರಂದು ಕೆ.ಎಸ್. ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೆ ಸುಮಾರು ೨೫ ಸಾವಿರ ಬೆಂಬಲಿಗರು ಸಾಕ್ಷಿಯಾಗಲಿದ್ದಾರೆ ಎಂದು ರಾಷ್ಟ್ರಭಕ್ತ ಬಳಗದ ಸದಸ್ಯ ಹಾಗೂ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ. ಯಾವ ಸಂಧಾನಗಳಿಗೂ ಅವರು ಬಗ್ಗಿಲ್ಲ. ಅವರಿಗಾದ ಅನ್ಯಾಯದ ಬಗ್ಗೆ ಸಾವಿರಾರು ಜನರು ಪ್ರತಿಕ್ರಿಯಿಸಿ ಚುನಾವಣೆಗೆ ನಿಲ್ಲುವಂತೆ ಪ್ರೋತ್ಸಾಹ ನೀಡಿದ್ದಾರೆ. ಹಾಗಾಗಿ ಅಂತಿಮವಾಗಿ ಕೆ.ಎಸ್. ಈಶ್ವರಪ್ಪ ಏ. ೧೨ ರಂದು ನಾಮಪತ್ರ ಸಲ್ಲಿಸುವರು ಎಂದರು.
ಅಂದು ಬೆಳಗ್ಗೆ ೧೦ ಗಂಟೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಗೋಪಿ ವೃತ್ತಕ್ಕೆ ಬಂದು ಸಭೆ ನಡೆಸಲಾಗುವುದು. ನಂತರ ನಾಮಪತ್ರ ಸಲ್ಲಿಸುವರು. ಈ ಸಂದರ್ಭದಲ್ಲಿ ಬೈಂದೂರು ಸೇರಿದಂತೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲಾ ಕಡೆಗಳಿಂದ ರಾಷ್ಟ್ರಭಕ್ತರು ಆಗಮಿಸಲಿದ್ದಾರೆ ಎಂದರು.
ಕುಟುಂಬ ರಾಜಕಾರಣದ ವಿರುದ್ಧ ಪಕ್ಷದ ಶುದ್ಧೀಕರಣಗೊಳಿಸಲು ಯಡಿಯೂರಪ್ಪ ಕುಟುಂಬದ ವಂಚನೆ ವಿರೋಧಿಸಿ ಸ್ವಾಭಿಮಾನದ ಸಂಕೇತವಾಗಿ ಈ ಸ್ಪರ್ಧೆ ನಿರ್ಧಾರವಾಗಿದೆ. ಈಶ್ವರಪ್ಪ ಅವರು ಸುಮಾರು ೨ ಲಕ್ಷ ಮತಗಳಿಂದ ಗೆಲ್ಲುತ್ತಾರೆ. ಈಶ್ವರಪ್ಪ ಅವರಿಗೆ ಜಯವಾಗಲಿ ಮೋದಿ ಮತ್ತೆ ಪ್ರಧಾನಿಯಾಗಲಿ ಎಂಬುದೇ ನಮ್ಮ ಉದ್ದೇಶವಾಗಿದೆ ಎಂದರು.
ಅಮಿತ್ ಶಾ ಅವರು ಈಶ್ವರಪ್ಪನವರಿಗೆ ದೆಹಲಿಗೆ ಬರಲು ಹೇಳಿ ಭೇಟಿಯನ್ನೇ ಮಾಡದಿರುವುದು ಅವಮಾನವಾಗಿದೆ. ಈಶ್ವರಪ್ಪನವರು ಅಮಿತ್ ಶಾ ಅವರಿಗಿಂತ ವಯಸ್ಸಿನಲ್ಲಿಯೂ ಹಿರಿಯರು. ರಾಜಕಾರಣದಲ್ಲಿಯೂ ಹಿರಿಯರು. ಭೇಟಿಯಾಗದ ಮೇಲೆ ಏಕೆ ಕರೆಸಿಕೊಳ್ಳಬೇಕಿತ್ತು ಎಂದರು.
ಆದರೆ, ಈಶ್ವರಪ್ಪನವರೇ ನನಗೆ ಅವಮಾನವಾಗಿಲ್ಲ ಎಂದು ಹೇಳುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಈಶ್ವರಪ್ಪನವರ ದೊಡ್ಡ ಗುಣ. ಆದರೆ ನನ್ನಂತ ಕಾರ್ಯಕರ್ತನಿಗೆ ಅವರು ಅವಮಾನ ಮಾಡಿದ್ದು ನಿಜ ಎನಿಸುತ್ತದೆ. ಮೋದಿ ಹೆಸರನ್ನು ಬಳಸಿಕೊಳ್ಳುವ ಬಗ್ಗೆ ನ್ಯಾಯಾಲಯದಲ್ಲಿದ್ದು, ಅದರ ತೀರ್ಮಾನದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಂಕರ್ ಗನ್ನಿ, ಏಳುಮಲೈ ಬಾಬು, ಸುವರ್ಣಾ ಶಂಕರ್, ಬಾಲು, ಲಕ್ಷ್ಮಿ ಶಂಕರನಾಯ್, ಆರತಿ ಆ.ಮ. ಪ್ರಕಾಶ್, ರಾಜು, ರವಿ, ಚಿದಾನಂದ ಮೊದಲಾದವರಿದ್ದರು.