ಬಿಜೆಪಿ ಪಕ್ಷದ ಪುನಶ್ಚೇತನ, ಸಿದ್ದಾಂತ ಮತ್ತು ಹಿಂದುತ್ವ ಉಳಿವಿಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದೇನೆ. ನನ್ನ ನಿರ್ಧಾರವನ್ನು ಬೆಂಬಲಿಸಿ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಬೇರೆ ಪಕ್ಷದ ನಾಯಕರೂ ಬೆಂಬಲ ಸೂಚಿಸಿದ್ದಾರೆ. ನಿಶ್ಚಯವಾಗಿ ನಾನು ಗೆಲ್ಲುತ್ತೇನೆ. ನಿಮ್ಮ ಬೆಂಬಲ ಸಹಕಾರ ನನ್ನಗಿರಲಿ ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು.
ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ ಶನಿವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಪಕ್ಷದಲ್ಲಿ ಹಿಂದುತ್ವ ಪರ ಧ್ವನಿ ಎತ್ತಿದ ಒಕ್ಕಲಿಗ ಸಮಾಜದ ನಾಯಕರಾದ ಸದಾನಂದ ಗೌಡ, ಪ್ರತಾಪ್ ಸಿಂಹ, ಸಿ.ಟಿ.ರವಿಯವರನ್ನು ಅಪ್ಪ ಮಕ್ಕಳು ಮೂಲೆಗುಂಪು ಮಾಡಿದ್ದಾರೆ. ಹಿಂದುತ್ವ ಪರ ಧ್ವನಿ ಎತ್ತುವುದೇ ತಪ್ಪಾ ಎಂದು ಪ್ರಶ್ನೆ ಮೂಡುವಂತೆ ಮಾಡಿದ್ದಾರೆ. ಪಕ್ಷದಲ್ಲಿರುವ ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ನಾನು ಹೋರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ನನ್ನ ನಿರ್ಧಾರವನ್ನು ಬೆಂಬಲಿಸಿ ರಾಜ್ಯಾದ್ಯಂತ ಬಿಜೆಪಿ ಸೇರಿದಂತೆ ಬೇರೆ ಬೇರೆ ಪಕ್ಷದ ನಾಯಕರುಗಳು ಬೆಂಬಲ ಸೂಚಿಸಿದ್ದಾರೆ. ಶಿವಮೊಗ್ಗದ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಪ್ರಚಾರಕ್ಕೆ ಹೋದಲೆಲ್ಲ ಎಲ್ಲ ಜಾತಿ ಸಮಾಜದವರು, ನಾವು ನಿಮ್ಮ ಜೊತೆ ಇದ್ದೇವೆ ಎಂದು ಧೈರ್ಯ ತುಂಬಿ ಕಳಿಸಿಕೊಡುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ನಿಶ್ಚಯವಾಗಿ ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸ ಇದೆ ಎಂದರು.
ಮಾ.12ರಂದು ನಾಮ ಪತ್ರ ಸಲ್ಲಿಸಲಿದ್ದೇನೆ. ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಪ್ರಚಾರ ವೇಳೆ ಆನವೇರಿ ಬಳಿ ಇರುವ ಸೈದರ ಕಲ್ಲಳ್ಳಿ ಗ್ರಾಮದ ಶ್ರೀರಂಗನಾಥ ಸ್ವಾಮಿಯ ದರ್ಶನ ಪಡೆದರು. ಭದ್ರಾವತಿ ಹುತ್ತಾ ಕಾಲೋನಿಯ ಒಕ್ಕಲಿಗ ಸಮಾಜದ ಮುಖಂಡರು ಹಾಗೂ ಮಾಜಿ ನಗರ ಸಭೆ ಸದಸ್ಯ ರವಿ ಕುಮಾರ್, ಜೆ.ಡಿ.ಕಟ್ಟೆಯ ಭದ್ರಾವತಿ ತಾಲೂಕಿನ ಬಿಜೆಪಿ ಯುವ ಮೋರ್ಚಾದ ಮಾಜಿ ಅಧ್ಯಕ್ಷ ಬಾನಿ ಮಹದೇವ್ , ಒಕ್ಕಲಿಗರ ಸಮಾಜದ ಪ್ರಮುಖರಾದ ಕವಲಗುಂದಿ ರಾಘುರವರನ್ನು ಭೇಟಿ ಮಾಡಿ ಪ್ರಚಾರ ನಡೆಸಿದರು.
ಪ್ರಚಾರದ ವೇಳೆ ಹಿಂದು ಹುಲಿ ಈಶ್ವರಪ್ಪ ಎಂದು ಘೋಷಣೆ ಮೊಳಗಿಸಿದ ಈಶ್ವರಪ್ಪ ಪರ ನೂರಾರು ಸಂಖ್ಯೆಯ ಕಾರ್ಯಕರ್ತರು ಪ್ರಚಾರಕ್ಕೆ ಸಹಕಾರ ನೀಡಿದರು.