ಶಿವಮೊಗ್ಗ,ಏ.೦೫: ಬಿ.ವೈ.ರಾಘವೇಂದ್ರ ರವರಿಗೆ ರಾಜಕೀಯ ಅಸ್ಥಿರತೆ ಕಾಡುತ್ತಿದೆ. ಸೋಲುವ ಭೀತಿಯಲ್ಲಿ ಇರುವ ಅವರು ಸುಳ್ಳು ಹೇಳುವುದನ್ನು ಕಲಿತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಘವೇಂದ್ರ ಅವರು, ೨೦೦೪ರಲ್ಲಿ ಚೇಲಾಗಳೇ ಬಂಗಾರಪ್ಪನವರನ್ನು ಗೆಲ್ಲಿಸಿದ್ದು ಎಂದು ಹೇಳಿದ್ದಾರೆ. ೨೦೦೪ರಲ್ಲಿ ಈ ರಾಘವೇಂದ್ರ ರಾಜಕೀಯದಲ್ಲೇ ಇರಲಿಲ್ಲ. ಆಗ ಬಿಜೆಪಿಯಲ್ಲಿ ದೃತಿಗೆಟ್ಟ ವಾತಾವರಣವಿತ್ತು. ಹೇಗೂ ಬಂಗಾರಪ್ಪನವರು ಬಿಜೆಪಿಗೆ ಕರೆತಂದರು. ಬಿಜೆಪಿಯಿಂದ ಬಂಗಾರಪ್ಪನವರಿಗೆ ಲಾಭವಾಗಲಿಲ್ಲ. ಆದರೆ ಬಂಗಾರಪ್ಪನವರಿಂದ ಬಿಜೆಪಿಗೆ ಒಂದು ಹೊಸ ರಾಜಕೀಯ ಶಕ್ತಿ ಬಂದಿದೆ. ರಾಘವೇಂದ್ರರಿಗೆ ರಾಜಕೀಯ ಇತಿಹಾಸ ಗೊತ್ತಿಲ್ಲ. ಅವರ ಬಿಜೆಪಿ ಹಿರಿಯರಿಂದಲೇ ತಿಳಿದುಕೊಳ್ಳಲಿ ಎಂದರು.
ಈ ಅಪ್ಪ ಮಗ (ಬಿ.ಎಸ್.ವೈ.-ಬಿ.ವೈ.ಆರ್.)ಮೋಸ ಮಾಡಿದ್ದು, ಕೊಟ್ಟ ಮಾತಿಗೆ ತಪ್ಪಿದ್ದು ಇವತ್ತಿನಂದಲ್ಲ, ಈಶ್ವರಪ್ಪನವರಿಗೆ ಈಗ ಅದು ಅರ್ಥವಾಗುತ್ತಿದೆ. ಆದರೆ, ಬಹಳ ಹಿಂದಿನಿಂದಲೇ ಯಡಿಯೂರಪ್ಪನವರು ಈ ಕೆಲಸ ಮಾಡುತ್ತ ಬಂದಿದ್ದಾರೆ. ನನ್ನನ್ನು ಕೂಡ ಸಂಸತ್ಗೆ ಸ್ಪರ್ಧೆ ಮಾಡಬಾರದು ಎಂದು ಭದ್ರಾವತಿ ವಿಧಾನಪರಿಷತ್ಗೆ ಬಲವಂತವಾಗಿ ಸ್ಪರ್ಧೆ ಮಾಡುವಂತೆ ಮಾಡಿ, ಪ್ರಚಾರಕ್ಕೂ ಬಾರದೇ ಸೋಲಿಸಿದರು ಎಂದರು.
ನಾನು ಸೋತ ಅಭ್ಯರ್ಥಿ ಎಂದು ಸಂಸದ ಸ್ಥಾನಕ್ಕೆ ಟಿಕೀಟ್ ನೀಡಲಿಲ್ಲ. ಬದಲು ರುದ್ರೇಗೌಡರನ್ನು ಮುಂಚೂಣಿಗೆ ತಂದರು. ಅವರಿಗೆ ಟಿಕೇಟ್ ಕೊಡುವುದಾಗಿ ಇದೇ ಯಡಿಯೂರಪ್ಪ ಹೇಳಿದರು. ಆದರೆ, ರುದ್ರೇಗೌಡರಿಗೂ ಕೈ ಕೊಟ್ಟರು, ಇದ್ದಕ್ಕಿದ್ದಂತೆ ತಮ್ಮ ಮಗನ ಹೆಸರನ್ನೇ ಮುಂದಕ್ಕೆ ತಂದರು. ದೇವರಾಣೆ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಹೇಳಿ, ಅತ್ತ ರುದ್ರೇಗೌಡರಿಗೂ ಟಿಕೇಟ್ ಕೊಡದೇ, ಇತ್ತ ನನಗೂ ಕೊಡದೇ ಅವರ ಮಗನಿಗೆ ಕೊಟ್ಟುಬಿಟ್ಟರು, ಮೋಸ ಮಾಡಿದ ಪರಂಪರೆ ಬಿ.ಎಸ್. ಯಡಿಯೂರಪ್ಪರವರ ಕುಟುಂಬದ್ದು ಎಂದರು.
ನಾನು ಏನು ಸಾಧನೆ ಮಾಡಿದ್ದೇನೆ ಎಂದು ಟಿ.ಡಿ.ಮೇಘರಾಜ್ ಕೇಳಿದ್ದಾರೆ. ರಾಜಕೀಯ ಚಮಚಗಿರಿ ಮಾಡುವವರಿಗೆ ನನ್ನ ಸಾಧನೆ ಏನು ಎಂದು ಗೊತ್ತಿಲ್ಲ, ೪ ಮನೆಗಳಲ್ಲೂ ಇದ್ದಾಗ, ಕಾರ್ಮಿಕರಿಗೆ, ರಾಜ್ಯ ಹೆದ್ದಾರಿಗಳಿಗೆ, ಕೆಲಸ ಮಾಡಿದ್ದೇನೆ. ಬಿಜೆಪಿ ಪಕ್ಷಕ್ಕೆ ಹೋರಾಟದಿಂದ ಬಂದು ನಾನು ಸೇರಿಕೊಂಡಿದ್ದೇನೆ. ನಾನು ಫಲಾನುಭವಿಯಲ್ಲ, ನಾನು ಹೋರಾಟ ಮಾಡಿ ಯೌವ್ವನ ಕಳೆದುಕೊಂಡಿದ್ದೇನೆ, ಜೈಲಿಗೆ ಹೋಗಿದ್ದೇನೆ. ಲಾಠಿ ಕಲೆಗಳು ಇನ್ನು ಇವೆ ಎಂದರು.
೨೦೦೯ರಲ್ಲಿ ಅಪ್ಪನ ಹೆಗಲ ಮೇಲೆ ಜಾತ್ರೆಗೆ ಬಂದ ರಾಘವೇಂದ್ರರಿಗೆ ರಾಜಕಾರಣದ ಇತಿಹಾಸ ಗೊತ್ತಿಲ್ಲ, ಮೊದಲು ಅದನ್ನು ತಿಳಿದುಕೊಳ್ಳಲಿ. ಅವರು ಗಿಣಿಪಾಠಕ್ಕೆ ಶರಣಾಗಿದ್ದಾರೆ. ಮತ್ತು ತಬ್ಬಿಬ್ಬಾಗಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಹೆಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಆಯನೂರು ಸಂತೋಷ್, ಪದ್ಮನಾಭ್, ಎಸ್.ಪಿ.ಪಾಟೀಲ್, ಕೃಷ್ಣ, ಹಿರಣ್ಣಯ್ಯ, ಚನ್ನೇಶ್ ಮುಂತಾದವರು ಇದ್ದರು.