ಶಿವಮೊಗ್ಗ,ಏ.05: ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಬಿಜೆಪಿ ಸರ್ಕಾರ ಕಾನೂನುಬಾಹಿರವಾಗಿ 240 ಎಕರೆ ಜಮೀನನ್ನು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಬೇಕು. ಆ ಜಮೀನನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ನಾನು ಉಗ್ರ ಹೋರಾಟ ನಡೆಸುತ್ತೇನೆ ಶಾಸಕ ಸ್ಥಾನಕ್ಕೆ ಅಗತ್ಯವಿದ್ದರೆ ರಾಜೀನಾಮೆ ಕೊಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಹಿ ಗಾರ್ಮೆಂಟ್ಸ್ಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ 240 ಎಕರೆ ಜಮೀನನ್ನು ನೀಡಿದೆ. ಆದರೆ ಶಾಹಿ ಗಾರ್ಮೆಂಟ್ಸ್ಗೆ 10 ಎಕರೆ ನೀಡಿದ್ದರೆ ಸಾಕಿತ್ತು. 230 ಎಕರೆ ಹೆಚ್ಚಾಗಿ ನೀಡಿದೆ. ಈ 240 ಎಕರೆ ಜಮೀನನ್ನು ಏಕೆ ಕೊಟ್ಟಿದ್ದಾರೆ ಎಂದು ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ತನಿಖೆ ನಡೆಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು
ನಾನು ಸಿದ್ದನಿದ್ದೇನೆ, ಸಾಯಿ ಗಾಮೆಂಟ್ಸ್ ಗೆ 240 ಎಕರೆ ಜಾಗ ನೀಡುವಲ್ಲಿ ಸಂಸದರ ಕೈವಾಡವಿದೆ. ಬೇನಾಮಿ ಶಂಕೆ ಇಲ್ಲೂ ಇದೆ ಎಂದರು.
ಲೋಕಸಭಾ ಚುನಾವಣೆ ಜಿದ್ದಾಜಿದ್ದಿಯಾಗಿ ನಡೆಯುತ್ತಿದೆ. ಇಬ್ಬರು ಮುಖ್ಯಮಂತ್ರಿಗಳ ಮಕ್ಕಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಈಗಾಗಲೇ ಪ್ರವಾಸ ಆರಂಭಿಸಿದ್ದಾರೆ. ತಾಲ್ಲೂಕು ಸಂಚಾರ, ಗ್ರಾಮಾಂತರ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಹೋದ ಕಡೆಯೆಲ್ಲಾ ಭವ್ಯ ಸ್ವಾಗತ ಸಿಗುತ್ತಿದೆ. ನೂರಕ್ಕೆ ನೂರು ಗೀತಾ ಶಿವರಾಜ್ ಕುಮಾರ್ ಗೆಲ್ಲೋದು ಖಚಿತ ಎಂದರು.
ಕೆಜೆಪಿಗೆ ಹೋಗಿಲ್ಲ ಎಂಬ ಒಂದೇ ಕಾರಣಕ್ಕೆ ಈಶ್ವರಪ್ಪರನ್ನು ದೂರ ಇಡಲಾಗಿದೆ. ಹಿಂದುತ್ವದ ಬಿಜೆಪಿ ಕಟ್ಟಾ ಅಭಿಮಾನಿ ಈಶ್ವರಪ್ಪ ಈಗ ಅಪ್ಪ ಮಕ್ಕಳ ಹಿಂದೆ ಬಿದ್ದಿದ್ದಾರೆ. ಇದು ಕಾಂಗ್ರೆಸ್ಗೆ ಲಾಭವಾಗಿ ಪರಿಣಮಿಸುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ಗ್ಯಾರಂಟಿಗಳು ಮತ್ತು ರಾಹುಲ್ಗಾಂಧಿಯವರ ಹೊಸ ಹತ್ತು ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಕಾರಣವಾಗುತ್ತಿದೆ. 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಕ್ಕಳು ಆಸ್ತಿ ಮಾಡಿದ್ದೇ ಸಾಧನೆ. 18 ವರ್ಷವಾದರೂ ಹೈವೇ ಸಂಪೂರ್ಣ ಆಗಿಲ್ಲ. ತಮ್ಮ ಮಾಲೀಕತ್ವದ ಕಾಲೇಜಿಗೆ ಬಂದು ಹೋಗಲಷ್ಟೇ ಹೈವೇ ಮಾಡಿದ್ದಾರೆ. ಬಸ್ ನಿಲ್ದಾಣಗಳ ನಿರ್ಮಾಣ ಬಿಟ್ಟರೆ ಮತ್ತೇನಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಬಿಟ್ಟರೆ ಅದರ ಅಕ್ಕಪಕ್ಕದಲ್ಲೇ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದರು.
ಜೂನ್ ೪ ರಿಂದ ಕುಟುಂಬ ರಾಜಕಾರಣ ಕೊನೆಗೊಳಿಸ್ತೀವಿ ಅಂತ ಬಿಜೆಪಿಯ ಶಾಸಕ ಯತ್ನಾಳ್ ಹೇಳಿದ್ದಾರೆ. ಈಶ್ವರಪ್ಪ ಕೂಡ ಹೇಳುತ್ತಿದ್ದಾರೆ. ಅಂದರೆ, ರಾಘವೇಂದ್ರ ಸೇರಿದಂತೆ ಯಾರೂ ಬಿಜೆಪಿಯಿಂದ ಗೆಲ್ಲೋದಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿದೆ. ನಮ್ಮ ಅಭ್ಯರ್ಥಿ ಗೆಲ್ಲೋದು ಖಚಿತ. ಕಾಂಗ್ರೆಸ್ ಪಕ್ಷ ಮೇಲುಗೈ ವಾತಾವರಣವಿದೆ. ಮೋದಿ, ಶಾ ಹಿಂದಿನ ಚುನಾವಣೆಯಲ್ಲೂ ಬಂದಿದ್ರು. ಬಂದ ಕಡೆ ಗೆದ್ದಿಲ್ಲ. ಈಗಲೂ ಗೆಲ್ಲೋಲ್ಲ.
ಏತ ನೀರಾವರಿ ಕಾಂಗ್ರೆಸ್ ನೀಡಿದ್ದು. ಸಂಸದರು ಸುಳ್ಳು ಹೇಳ್ತಿದ್ದಾರೆ. ಶಿಕಾರಿಪುರ ಬಿಟ್ಟರೆ ಮತ್ಯಾವ ತಾಲ್ಲೂಕಲ್ಲೂ ಸಾಧನೆ ಆಗಿಲ್ಲ. ಬಸ್ ನಿಲ್ದಾಣಗಳ ಸೃಷ್ಟಿ ಅಷ್ಟೇ. ಅದಕ್ಕೆ ಅವರು ಬಸ್ ಸ್ಟ್ಯಾಂಡ್ ರಾಘು ಎಂದು ಸಮರ್ಥಿಸಿಕೊಂಡರು.
ಕಲ್ಲು ಹೊಡೆದ ಕಡೆ ಯಡಿಯೂರಪ್ಪರ ಆಸ್ತಿ ಇದೆ. ಇಡಿ , ಐಟಿ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಬಾಂಡ್ ಹೆಸರಲ್ಲಿ ಗೋಮಾಂಸ ಮಾರಾಟಗಾರರಿಂದಲೂ ಹಣ ಪಡೆದಿದ್ದಾರೆ ಎಂದು ಆರೋಪಿಸಿದರು.
ಮಧು ಬಂಗಾರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಬೈಂದೂರಿನಲ್ಲೂ ಅತ್ಯಂತ ಹೆಚ್ಚಿನ ಬೆಂಬಲ ಇದೆ. ಹಿಂದೆ ರಾಘವೇಂದ್ರ 75 ಸಾವಿರ ಮತಗಳ ಲೀಡ್ ಪಡೆದಿದ್ದರು. ಈಗ ಕಾಂಗ್ರೆಸ್ ಆ ಲೀಡ್ ಪಡೆಯಲಿದೆ. ಬಂಗಾರಪ್ಪ ಕೊಟ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ನಾವೂ ಮತ ಕೇಳುತ್ತಿದ್ದೇವೆ. ಹೈಲೀಡ್ ನಮ್ಮದೇ, ಸಾಗರದಲ್ಲೂ ಹೈ ಲೀಡ್ ಕೊಡ್ತೀವಿ. ಒಳ್ಳೇ ಹವಾ ಇದೆ ಎಂದರು.
ಕೋಟಾ ಶ್ರೀನಿವಾಸ ಪೂಜಾರಿ ಬಳಿ 62 ಕೋಟಿ ಮೌಲ್ಯದ ಆಸ್ತಿ ಇದೆ. ಅಂಥವರು ಗಂಜಿ ಕುಡಿದು ರಾಜಕಾರಣ ಮಾಡ್ತಾರಾ? ಸ್ವಾಭಿಮಾನ ಎಂದು ಗೆದ್ದಿದ್ರು. ಈಗ ಅದನ್ನೇ ಬಿಟ್ಟು ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡ್ರು ಎಂದರು.
ಗೀತಾ ಶಿವರಾಜ್ ಕುಮಾರ್ ಮನೆ ಇಲ್ಲೇ ಇದೆ. ಗೀತಕ್ಕನ ಮನೆಯೂ ಶಿವಮೊಗ್ಗದಲ್ಲೇ ಇದೆ. ಆ ಹರತಾಳು ಹಾಲಪ್ಪನಿಗೆ ನಾಯಿಗಿರೋ ನಿಯತ್ತೂ ಇಲ್ಲ. ಬಂಗಾರಪ್ಪ ಮನೆಯಲ್ಲಿ ದೊಡ್ಡ ನಾಯಿ ಇದ್ರೂ ಹೋಗ್ತಿದ್ದ, ಯಾರ ಮನೆ ಬೆಂಗಳೂರಲ್ಲಿಲ್ಲ ಎಲ್ಲರದೂ ಇದೆ ಎಂದರು.
ರಾಮೇಶ್ವರ ಕೆಫೆ ಬಾಂಬ್ ಪ್ರಕರಣದಲ್ಲಿ ಯಾರೇ ಇದ್ದರೂ ಕೂಡಲೇ ಅವರನ್ನು ಗುಂಡು ಹೊಡೆಯಬೇಕು. ಅವರು ಮುಸ್ಲೀಮರೇ ಇರಲಿ, ಹಿಂದೂಗಳೇ ಇರಲಿ, ಕ್ರಿಸ್ತರೇ ಇರಲಿ…ಬಾಂಬ್ ಹಾಕುವ ಪಾಪಿಷ್ಠರನ್ನು ಗುಂಡು ಹೊಡೆದೇ ಬಿಡಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಉಸ್ತುವಾರಿ ಎಸ್.ಟಿ. ಹಾಲಪ್ಪ, ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕೆ.ಅನಿತಾಕುಮಾರಿ, ಪ್ರಮುಖರಾದ ಯು.ಶಿವಾನಂದ್, ಮಂಜುನಾಥ್ ಬಾಬು, ಜಿ.ಡಿ.ಮಂಜುನಾಥ್, ಕೆ.ರಂಗನಾಥ್, ಲೇಖನ ನಾಯ್ಕ, ಬಿ.ಭಾರತಿ, ಸೋಮಶೇಖರ್ ಸೇರಿದಂತೆ ಹಲವರಿದ್ದರು.