ಶಿವಮೊಗ್ಗ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೆಂಪಲ್ ರನ್ ಮುಂದುವರೆಸಿದ್ದಾರೆ.
ಗುರುವಾರ ದೆಹಲಿಯಿಂದ ಬಂದ ಬಳಿಕ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅಮಿತ್ ಶಾ ನನ್ನ ಭೇಟಿಯಾಗದಿರುವ ಹಿಂದಿನ ಉದೇಶ ನೀನು ಶಿವಮೊಗ್ಗಕ್ಕೆ ವಾಪಸ್ ಹೋಗು, ಹೋಗಿ ನೀನು ಸ್ಪರ್ಧಿಸಿ ಗೆಲ್ಲು ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಯಾವುದೇ ಕಾರಣಲ್ಲೂ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ. ಅಮಿತ್, ಮೋದಿ ಅವರ ಅಪೇಕ್ಷೆಯಂತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಗೆದ್ದು ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ತಿಳಿಸಿದ್ದರು.
ಬಳಿಕ ಶುಕ್ರವಾರ ಬೆಳಗ್ಗೆ ಅಂಭುತೀರ್ಥದಲ್ಲಿ ಶ್ರೀರಾಮೇಶ್ವರ ಸ್ವಾಮಿಯ ದರ್ಶನ ಪಡೆದು ಕಾರ್ಯಕರ್ತರ ಸಭೆ ನಡೆಸುವ ಮೂಲಕ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದಾರೆ.
ಈ ವೇಳೆ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ ಬ್ರಿಗೇಡ್ ಅಧ್ಯಕ್ಷ ವಾಟಗೋಲು ಸುರೇಶ್, ಕರ್ನಾಟಕ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಸ್ಥಿತ್ವಕ್ಕೆ ಬಂದಿದೆ. ಕಾರ್ಯಕರ್ತರು ಈ ವ್ಯವಸ್ಥೆಯಿಂದ ನೊಂದಿದ್ದಾರೆ. ಹೀಗಾಗಿ ರಾಜ್ಯದ ಜನ ಹಾಗೂ ಕಾರ್ಯಕರ್ತರು ಬದಲಾವಣೆ ಬಯಸಿದ್ದಾರೆ. ಕುಟುಂಬ ರಾಜಕಾರಣ ಕಿತ್ತು ಹಾಕಲು ಈಶ್ವರಪ್ಪರವರಿಂದ ಮಾತ್ರ ಸಾಧ್ಯ ಎಂದರು.
ಜನ ಬಯಸುವ ಬದಲಾವಣೆ ತರಲು ಹಾಗೂ ಕಾರ್ಯಕರ್ತರ ಧ್ವನಿಯಾಗಲು ಈಶ್ವರಪ್ಪಗೆ ಹೆಚ್ಚಿನ ಬೆಂಬಲ ನೀಡುವ ಮೂಲಕ ಕುಟುಂಬ ರಾಜಕಾರಣಕ್ಕೆ ತಕ್ಕ ಉತ್ತರ ನೀಡಬೇಕಿದೆ. ಹೀಗಾಗಿ ನಾವೆಲ್ಲಾ ಈಶ್ವರಪ್ಪರನ್ನು ಬೆಂಬಲಿಸಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸಿ, ಪ್ರಧಾನಿ ನರೇಂದ್ರ ಮೋದಿಯವರ ಬಳಿ ಕಳಿಸೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಚುನಾವಣೆ ಪ್ರಚಾರದ ವೇಳೆ ರಿಪ್ಪನ್ ಪೇಟೆಯ ಶ್ರೀ ಸಿದ್ಧಿ ವಿನಾಯಕ ಸ್ವಾಮಿಯ ದರ್ಶನ ಪಡೆದರು. ಪ್ರಚಾರದ ವೇಳೆ ಸಾವಿರಾರು ಸಂಖ್ಯೆಯ ಕಾರ್ಯಕರ್ತರು, ಸಾರ್ವಜನಿಕರು ಈಶ್ವರಪ್ಪರನ್ನು ಬೆಂಬಲಿಸುವುದಾಗಿ ವಿಶ್ವಾಸ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಈಶ್ವರ ಶೆಟ್ಟಿ, ಸಮಿತಿ ಸದಸ್ಯರಾದ ಆಶಾ ನರಸಿಂಹ, ಇಂದ್ರಮ್ಮ, ಗಣೇಶ್ ಕಾಮತ್ , ಲೀಲಾವತಿ, ಮಮತ ಗರ್ತಿಕೆರೆ, ಅಭಿ ಶೆಟ್ಟಿ, ರಾಘು ಸೇರಿದಂತೆ ಹಲವರು ಉಪಸ್ಥಿತರಿದ್ದರು.