ಶಿವಮೊಗ್ಗ: ಮಾ.೧೩ರಂದು ನಗರದ ಹೊರವಲಯದಲ್ಲಿ ಮಾರಾಕಸ್ತ್ರದಿಂದ ನೆತ್ತಿಯ ಮೇಲೆ ಹೊಡೆತ ಬಿದ್ದು ಲಾಂಗ್ ಸಮೇತ ತೀವ್ರ ಗಂಭೀರ ಸ್ಥಿತಿಯಲ್ಲಿ ನಮ್ಮ ಚಂದ್ರಗಿರಿ ಆಸ್ಪತ್ರೆಗೆ ದಾಖಲಾದ ಯುವಕ ಪ್ರಶಾಂತನನ್ನು ೬ ಗಂಟೆಗಳ ಶಸ್ತ್ರ ಚಿಕಿತ್ಸೆಯಿಂದ ಅಪಾಯದಿಂದ ಪಾರುಮಾಡಿದ್ದೇವೆ ಎಂದು ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನ್ಯೂರೋ ಸರ್ಜನ್ ಡಾ. ಚೇತನ ಪಾಂಡೋಮಟ್ಟಿ ಹೇಳಿದ್ದಾರೆ.


ಅವರು ಇಂದು ಆಸ್ಪತ್ರೆಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಅಪರೂಪದ ಮತ್ತು ಸವಾಲಿನ ಪ್ರಕರಣವಾಗಿತ್ತು. ಗೋಲ್ಡನ್ ಅವರ‍್ಸ್ ಎಂದು ಕರೆಯಲಾಗುವ ವೇಳೆಯಲ್ಲಿಯೇ ಆಸ್ಪತ್ರೆಗೆ ದಾಖಲಾಗಿದ್ದರಿಂದ ಯುವಕನ ಜೀವ ಉಳಿದಿದೆ. ಶಿವಮೊಗ್ಗದಲ್ಲಿ ಈ ರೀತಿಯ ಉನ್ನತ ಚಿಕಿತ್ಸೆ ಲಭ್ಯವಿದೆ ಎಂಬುವುದು ಜನರ ಗಮನಕ್ಕೆ ತರಬೇಕು ಎನ್ನುವ ಉದ್ದೇಶ ನಮ್ಮದಾಗಿದೆ.

ಏಕೆಂದರೆ ಅನೇಕ ಸಂದರ್ಭಗಳಲ್ಲಿ ತುರ್ತು ಸಂದರ್ಭದಲ್ಲಿ ಜೀವನ್ಮರಣ ಪರಿಸ್ಥಿತಿಯಲ್ಲಿರುವಾಗಲೇ ದೂರದ ಮಣಿಪಾಲ್, ಮಂಗಳೂರು ಅಥವಾ ಬೆಂಗಳೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ರೋಗಿಗಳು ಸಾವನ್ನಪ್ಪುತ್ತಾರೆ. ಶಿವಮೊಗ್ಗದಲ್ಲಿಯೂ ಕೂಡ ಚಂದ್ರಗಿರಿ ಆಸ್ಪತ್ರೆಯಲ್ಲಿ ತುರ್ತು ಸಂದರ್ಭದಲ್ಲಿ ಎಲ್ಲ ರೀತಿಯ ಚಿಕಿತ್ಸೆ ದೊರೆಯುತ್ತದೆ ಎಂದರು.


ಆ ದಿನ ಹಲ್ಲೆಗೊಳಗಾದ ಪ್ರಶಾಂತ್ ಬಂದ ತಕ್ಷಣ ಅವರಿಗೆ ಅರವಳಿಕೆ ನೀಡಿ ರಕ್ತಸ್ರಾವ ಹತೋಟಿಗೆ ತಂದು ಮೆದುಳಿಗೆ ಸಿಲುಕ್ಕಿದ್ದ ಮಚ್ಚ್‌ನ್ನು ತೆಗೆದು ತುರ್ತುಶಸ್ತ್ರ ಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಯಿತು. ಪುಡಿಯಾದ ಎಲುಬುಗಳನ್ನು ಜೋಡಿಸಲಾಯಿತು. ಕತ್ತಿನ ಭಾಗದಲ್ಲೂ ಕೂಡ ೧೦ ಸೆ.ಮೀ. ಉದ್ದದ ಆಳವಾದ ಗಾಯವಾಗಿತ್ತು. ಅದನ್ನು ಕೂಡ ಸರ್ಜರಿ ಮೂಲಕ ಚಿಕಿತ್ಸೆಗೆ ಒಳಪಡಿಸಲಾಯಿತು. ನಿರಂತರ ೧೦ ದಿನಗಳ ಚಿಕಿತ್ಸೆಯ ಬಳಿಕ ಈಗ ರೋಗಿಯೂ ಗುಣಮುಖರಾಗಿದ್ದಾರೆ. ಮಾತನಾಡುತ್ತಾರೆ, ಜ್ಞಾಪಕಶಕ್ತಿಯೂ ಇದೆ ಎಂದರು.


ಶಸ್ತ್ರ ಚಿಕಿತ್ಸೆಯಲ್ಲಿ ಡಾ. ಗಿರೀಶ್ ಹೆಚ್.ಟಿ., ಡಾ. ಜಯಚಂದ್ರ ಹಾಗೂ ಅರಿವಳಿಕೆ ತಜ್ಞರಾದ ಡಾ. ಪರಶುರಾಮ್, ಡಾ. ಶ್ರೀಧರ್ ಸಹಕರಿಸಿದ್ದರು. ಬೇರೆ ಆಸ್ಪತ್ರೆಗಳಲ್ಲಿ ೫-೬ ಲಕ್ಷ ರೂ. ವೆಚ್ಚವಾಗುತ್ತದೆ. ನಾವು ರೋಗಿಯ ಸ್ಥಿತಿ ಗಮನಿಸಿ ಯಾವುದೇ ಆರ್ಥಿಕ ವಿಚಾರ ನೋಡದೇ ಚಿಕಿತ್ಸೆ ನೀಡಿ, ರೋಗಿ ಗುಣಮುಖರಾಗಿರುವುದು ನಮಗೆ ಸಂತೋಷ ತಂದಿದೆ ಎಂದರು.


ಈ ಸಂದರ್ಭದಲ್ಲಿ ಹಲ್ಲೆಗೊಳಗಾಗಿ ಗುಣಮುಖರಾದ ಪ್ರಶಾಂತ್ ಮತ್ತು ಕುಟುಂಬದವರು ಕೂಡ ಆಸ್ಪತ್ರೆಯ ವೈದ್ಯರಿಗೆ ಧನ್ಯವಾದ ಅರ್ಪಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!