ಶಿವಮೊಗ್ಗ: ಅಪ್ಪ, ಮಕ್ಕಳು ಮಹಾನ್ ಸುಳ್ಳುಗಾರರು, ಮಹಾನ್ ಮೋಸಗಾರರು ಎಂದು ಬಿ.ಎಸ್. ಯಡಿಯೂರಪ್ಪ ಹಾಗೂ ಬಿ.ವೈ. ರಾಘವೇಂದ್ರ ಅವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಗೂ ರಾಷ್ಟ್ರ ಭಕ್ತರ ಬಳಗದ ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.


ಅವರು ಇಂದು ತಮ್ಮ ಚುನಾವಣಾ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯಡಿಯೂರಪ್ಪ ಅವರು ಕೇವಲ ಸುಳ್ಳುಗಾರರು ಮಾತ್ರವಲ್ಲ, ಮೋಸಗಾರರು ಕೂಡ. ನಿಮ್ಮ ಮಗನಿಗೆ ಟಿಕೆಟ್ ಕೊಡಿಸುತ್ತೇನೆ. ನಾನೇ ನಿಂತು ಪ್ರಚಾರ ಮಾಡಿ ಗೆಲ್ಲಿಸುತ್ತೇನೆ ಎಂದಿದ್ದರು. ಏಕೆ ಕೊಡಿಸಲಿಲ್ಲ. ಈಗ ನನ್ನ ಹತ್ತಿರ ಮಾತನಾಡಲು ಬರುತ್ತಾರಂತೆ. ಯಾವ ಮುಖ ಇಟ್ಟುಕೊಂಡು ನನ್ನ ಜೊತೆ ಮಾತುಕತೆ ಆಡಲು ಬರುತ್ತಾರೆ? ನಾನಂತೂ ಇದಕ್ಕೆ ಸಿದ್ಧವಿಲ್ಲ ಎಂದರು.


ಸ್ಪರ್ಧೆಯಿಂದ ಹಿಂದೆ ಸರಿಯುವಂತಹ ಪ್ರಮೇಯವೇ ಇಲ್ಲ. ಇದಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಕೂಡ ಸುಮ್ಮನಾಗಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಅವರಿಗೂ ನಾನು ಸ್ಪರ್ಧೆ ಮಾಡುವುದು ಇಷ್ಟವಿದ್ದ ಹಾಗೆ ಕಾಣುತ್ತದೆ. ಆ ಮೂಲಕ ನಾನು ಗೆದ್ದು ಯಡಿಯೂರಪ್ಪರ ಕುಟುಂಬ ರಾಜಕಾರಣ ಕೊನೆಗಾಣಿಸುವೆ ಎಂಬ ಉದ್ದೇಶವೂ ಇದರ ಹಿಂದೆ ಇರಬಹುದು. ಮೋದಿಯವರಿಗೆ ನನ್ನ ಮೇಲೆ ಅಭಿಮಾನವಿದೆ. ನಾನು ಗೆದ್ದು ಬರಲಿ ಎಂಬ ಆಶಯ ಕೂಡ ಇದೆ. ನನ್ನ ಮನಸ್ಸು ಹೃದಯ ಮೋದಿ ಮತ್ತು ಬಿಜೆಪಿ ಪಕ್ಷದ ಮೇಲಿದೆ. ನಾನು ಪುನಃ ಬಿಜೆಪಿಗೆ ಸೇರುವೆ. ಪಕ್ಷ ಬಿಟ್ಟು ಹೋದ ಜಗದೀಶ್ ಶೆಟ್ಟರ್ ಅವರಂತಹವರನ್ನೇ ಬರಮಾಡಿಕೊಂಡು ಮತ್ತೆ ಟಿಕೆಟ್ ಕೊಟ್ಟಿದ್ದಾರೆ. ಗೆದ್ದು ಹೋದ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೇ ಎಂದರು.


ಯಡಿಯೂರಪ್ಪನವರು ನೀವು ಕ್ಲೀನ್ ಚಿಟ್ ಪಡೆದು ಬಂದ ಮೂರೇ ದಿನದಲ್ಲಿ ಮತ್ತೆ ಮಂತ್ರಿ ಸ್ಥಾನ ಕೊಡತ್ತೇವೆ ಎಂದಿದ್ದರು. ಎಲ್ಲಿ ಕೊಟ್ಟರು? ಇದು ಸುಳ್ಳಲ್ಲವೇ? ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಕೊಡಿಸಲು ಬರುತ್ತೆ. ನನ್ನ ಮಗನಿಗೆ ಟಿಕೆಟ್ ಕೊಡಿಸುತ್ತೇವೆ ಎಂದರೂ ಕೊಟ್ಟರಾ? ಅಪ್ಪ, ಮಕ್ಕಳಿಬ್ಬರೂ ಸುಳ್ಳುಗಾರರೇ ಅಲ್ಲವೇ ಎಂದು ಪ್ರಶ್ನಿಸಿದರು.


ಮಠಾಧೀಶರಿಗೆ ನೋವಾಗುವಂತೆ ನಾನು ಮಾತನಾಡಿಲ್ಲ. ಬೇಕಾದರೆ ಚಂದ್ರಗುತ್ತಿಯಲ್ಲಿ ಗಂಟೆ ಹೊಡೆಯಲು ಸಿದ್ಧ ಎಂದು ಸಂಸದ ರಾಘವೇಂದ್ರ ಹೇಳುತ್ತಾರೆ. ನನಗೆ ಈ ಗಂಟೆ, ಪಂಟೆಯಲ್ಲಿ ನಂಬಿಕೆ ಇಲ್ಲ. ಆದರೆ ಅವರು ಪ್ರಶ್ನೆ ಎತ್ತಿದ್‌ದಾರೆ. ಸ್ವಾಮೀಜಿಗಳಿಗೆ ನೋವುಂಟು ಮಾಡಿದ್ದೂ ನಿಜ, ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದೂ ನಿಜ. ಹೀಗಂತ ನಾನು ಗಂಟೆ ಹೊಡೆಯುತ್ತೇನೆ. ಅವರು ನೋವುಂಟು ಮಾಡಿಲ್ಲ ಎಂದು ಗಂಟೆ ಹೊಡೆಯಲಿ ಎಂದು ಸವಾಲು ಹಾಕಿದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಪಕ್ಷಕ್ಕೆ ಬಂದರೆ ಬರಲಿ ಬಿಟ್ಟರೆ ಬಿಡಲಿ. ಅವರೆಷ್ಟು ಮತ ತೆಗೆದುಕೊಳ್ಳುತ್ತಾರೆ ನೋಡೋಣ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಶಾಂತವಾಗಿಯೇ ಉತ್ತರಿಸಿದ ಈಶ್ವರಪ್ಪ, ಚನ್ನಬಸಪ್ಪ ನನ್ನ ಮುಂದೆ ಬೆಳೆದ ಹುಡುಗ. ಈಗ ನನ್ನನ್ನೇ ಪ್ರಶ್ನೆ ಕೇಳುವಷ್ಟು ದೊಡ್ಡವನಾಗಿದ್ದಾನೆ. ಆತನಿಗೆ ನಾನು ಏನೂ ಹೇಳುವುದಿಲ್ಲ. ಏಕೆಂದರೆ ನಾನು ಗೆದ್ದ ಮೇಲೆ ಅವನು ನನ್ನ ಜೊತೆಗೇ ಬರಬೇಕು ಎಂದರು.


ಅಖಿಲೇಶ್ ಯಾದವ್ ಕೂಡ ನನಗೆ ಫೋನ್ ಮಾಡಿದ್ದರು. ನಾನು ಫೋನ್ ಎತ್ತಲಿಲ್ಲ. ಹೋದ ಕಡೆಯಲ್ಲೆಲ್ಲ ನನಗೆ ಭರ್ಜರಿ ಸ್ವಾಗತ ಸಿಗುತ್ತಿದೆ. ಜೊತೆಗೆ ದೇವರ ಪ್ರಸಾದವೂ ಸಿಕ್ಕಿದೆ. ದೈವ ಭಕ್ತನಾದ ನಾನು ಇದನ್ನು ನಂಬುತ್ತೇನೆ. ಭದ್ರಾವತಿಯ ದಾನವಾಡಿ ರಂಗಸ್ವಾಮಿ ದೇವರ ಪ್ರಸಾದ ಅತ್ಯಂತ ಪ್ರಸಿದ್ಧಿಯಾಗಿದೆ. ಅಲ್ಲಿ ನಾನು ಕುಳಿತು ಪ್ರಸಾದ ಕೇಳಿದೆ. ಭಗವಂತ ಪ್ರಸಾದ ಕೊಡು ಎಂದು ನನ್ನ ಜೊತೆಗಿದ್ದವರು ಕೇಳಿದ್ದರು. ಬಹುಶಃ ರಂಗನಾಥನಿಗೂ ನಾನು ಸ್ಪರ್ಧಿಸುವುದಿಲ್ಲ ಎಂಬ ಅನುಮಾನವಿದ್ದಿರಬೇಕು. ನಾನು ತಕ್ಷಣವೇ ಇಲ್ಲ ರಂಗನಾಥ ನಾನು ಸ್ಪರ್ಧಿಸುವುದು ಖಚಿತ ಎಂದ ತಕ್ಷಣವೇ ಪ್ರಸಾದ ಕೊಟ್ಟಿತು. ನಾನು ನೆಮ್ಮದಿಯ ಉಸಿರು ಬಿಟ್ಟೆ ಎಂದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಗನ್ನಿ ಶಂಕರ್, ಬಾಲು, ಶ್ರೀಕಾಂತ್, ಗಂಗಾಧರ್, ಗುರುಶೇಠ್, ರವಿ ಎಂ, ಜಾಧವ್, ಮೋಹನ್, ತೇಜ ಇತರರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!