ಹೊಸನಗರ : ದೇಶದ ಎಲ್ಲ ನಾಗರೀಕರಲ್ಲಿ ಶಾಂತಿ ಸುವ್ಯವಸ್ಥೆ ಭದ್ರತೆ ಆರ್ಥಿಕಾಭಿವೃದ್ಧಿ ಸಾಮಾಜಿಕ ನ್ಯಾಯ ಅಗತ್ಯ ಮಾರ್ಗದರ್ಶನ ನೀಡುವುದೆ ಸಂವಿಧಾನ ಎಂದು ಮುತ್ತಲ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಡಾ. ಯಶೋಧ ದೇವರಮನಿ ಹೇಳಿದರು.
ಕೋಡೂರು ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿ, ಅವಿದ್ಯಾವಂತರಿಗೆ ಸಂವಿಧಾನದ ಮೂಲಭೂತ ಹಕ್ಕುಗಳ ಬಗೆಗೆ ಅರಿವು ಮೂಡಿಸಿ ಮಹಾಮಾನವತವಾದಿ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನು ನಾವುಗಳೆಲ್ಲರೂ ನಮ್ಮ ದಿನ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡುವ ಮೂಲಕ ಕಟ್ಟ ಕಡೆಯ ಶೋಷಿತ ಸಮಾಜದಿಂದ ಮುಖ್ಯ ವಾಹಿನಿಗೆ ತರುವ ಇಚ್ಚೆಯಿಂದ ಅಂಬೇಡ್ಕರ್ ಸಂವಿಧಾನವನ್ನು ರಚಿಸಿದ್ದಾರೆ. ಅದನ್ನು ನಾವುಗಳೆಲ್ಲರೂ ಅರಿತುಕೊಳ್ಳುವ ಅಗತ್ಯವಿದೆ. ಸಮಾಜದಲ್ಲಿ ನಾವುಗಳೆಲ್ಲಾ ಒಂದೇ, ಎಲ್ಲರಿಗೂ ಶಿಕ್ಷಣವನ್ನು ಪಡೆಯುವ ಹಕ್ಕಿದೆ ಎಂದರು.
ನಮ್ಮ ಸಂವಿಧಾನ ರಚನೆಗೊಂಡು 75 ವರ್ಷಗಳು ಸಂದರು ಇಂದಿಗೂ ಕೂಡಾ ಸಮಾಜದಲ್ಲಿ ಸಮಾನತೆಯನ್ನು ಕಾಣುವಲ್ಲಿ ನಾವೆಲ್ಲರೂ ವಿಫಲರಾಗಿದ್ದೇವೆ. ಮೇಲು-ಕೀಳೆಂಬ ಭಾವನೆಗಳನ್ನು ನಾವು ಹೋಗಲಾಡಿಸಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನನಸಾಗಿಸಲು ಸಾಧ್ಯ ಎಂದರು.
ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಲಗೋಡು ಉಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋಡೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸುಧಾಕರಗೌಡ, ಗ್ರಾಮ ಪಂಚಾಯ್ತಿ ಸದಸ್ಯ ಜಯಪ್ರಕಾಶಶೆಟ್ಟಿ, ಅಂಬೇಡ್ಕರ್ ವಸತಿ ಶಾಲೆಯ ಪ್ರಾಚಾರ್ಯೆ ಚಂದ್ರಕಲಾ ಹಾಗೂ ಹೊಸನಗರ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಸಿಡಿಪಿಓ ಕಛೇರಿಯ ಮೇಲ್ವಿಚಾರಕಿ ವನಮಾಲ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಚೇತನ ಸಂವಿಧಾನದ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಗ್ರಾಮ ಪಂಚಾಯ್ತಿ ಸದಸ್ಯರಾದ ಮಂಜಪ್ಪ, ಯೋಗೇಂದ್ರಪ್ಪ, ಎಲ್.ಶೇಖರಪ್ಪ, ಪ್ರೀತಿ, ಸವಿತಾ, ಸುನಂದ, ಅನ್ನಪೂರ್ಣ, ಚಂದ್ರಕಲಾ, ರೇಖಾ, ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಕೆ.ಎಸ್.ರಾಘವೇಂದ್ರ, ಬಿಸಿಎಂ ಇಲಾಖೆಯ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಬಿ.ಟಿ.ಮೋಹನ್, ಸಮೂಹ ಸಂಪನ್ಮೂಲ ವ್ಯಕ್ತಿ ಪ್ರದೀಪ್, ಕೋಡೂರು ಗ್ರಾಮ ಪಂಚಾಯ್ತಿ ಪಿಡಿಓ ಎಸ್. ನಾಗರಾಜ, ಸಿಬ್ಬಂದಿ ವರ್ಗದವರು, ಗ್ರಾಮಸ್ಥರು ಹಾಜರಿದ್ದರು.
ಅಂಬೇಡ್ಕರ್ ಶಾಲೆಯ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಪ್ರೌಢಶಾಲೆ ಮತ್ತು ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಈ ಸಂವಿಧಾನದ ಜಾಥಾದಲ್ಲಿ ಭಾಗವಹಿಸಿ ಜನಾಕರ್ಷಣೆಗೊಳಿಸಿದರು.
ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪಿಡಿಒ ಎಸ್.ನಾಗರಾಜ್ ಸ್ವಾಗತಿಸಿದರು. ಸಿಆರ್‌ಪಿ.ಪ್ರದೀಪ್ ನಿರೂಪಿಸಿದರು. ಶಿಕ್ಷಕ ತೀರ್ಥಪ್ಪ ವಂದಿಸಿದರು.