

- ಗಜೇಂದ್ರಸ್ವಾಮಿ
ಶಿವಮೊಗ್ಗದ ಪಾಲಿಗೆ 2024ರ ಕ್ರೀಡಾಹಬ್ಬವೆಂದು ಪರಿಗಣಿತವಾದ 67ನೇ ರಾಷ್ಟ್ರಮಟ್ಟದ 19 ವರ್ಷ ವಯೋಮಿತಿಯೊಳಗಿನ ವಾಲಿಬಾಲ್ ಕ್ರೀಡಾಕೂಟ ಇಂದು ಸಂಜೆ ಮುಗಿಯಲಿದೆ. ಸ್ಕೂಲ್ ಗೇಮ್ಸ್, ಫೆಡರೇಷನ್ ಆಫ್ ಇಂಡಿಯಾ ಸಂಸ್ಥೆ ನಡೆಸುವ ಕ್ರೀಡಾಕೂಟದ ಸಂಪೂರ್ಣ ಜವಾಬ್ದಾರಿ ಹೊತ್ತ ಶಿವಮೊಗ್ಗದ ಆದಿಚುಂಚನಗಿರಿ ಟ್ರಸ್ಟ್ ನಿಜಕ್ಕೂ ಅತ್ಯಂತ ವ್ಯವಸ್ಥಿತವಾಗಿ ದೇಶದ 400ಕ್ಕೂ ಹೆಚ್ಚು ಕ್ರೀಡಾಪಟುಗಳಿಗೆ ಅವರ ಪೋಷಕರಿಗೆ ಹಾಗೂ ನೂರಾರು ರಾಷ್ಟ್ರ ಹಾಗೂ ರಾಜ್ಯಮಟ್ಟದ ತೀರ್ಪುಗಾರರಿಗೆ ವ್ಯವಸ್ಥೆಯನ್ನು ಮಾಡಿದೆ.

ಅತಿಥಿ ಸತ್ಕಾರ ವಿಷಯದಲ್ಲಿ ಶಿವಮೊಗ್ಗ ರಾಜ್ಯದಲ್ಲೇ ಮಾದರಿಯಾದ ಜಿಲ್ಲೆ. ಹಿಂದಿನಿಂದಲೂ ಕ್ರೀಡೆ, ಸಾಹಿತ್ಯ, ಕಲಾ ಜಗತ್ತಿಗೆ ಶಿವಮೊಗ್ಗ ನೀಡುವ ದಾಸೋಹ, ಅತಿಥ್ಯ ವ್ಯವಸ್ಥೆ ಅವಿಸ್ಮರಣೀಯ. ಹಿಂದೆ ೧೮ನೇ ರಾಷ್ಟ್ರಮಟ್ಟದ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ದಾಸೋಹದ ವ್ಯವಸ್ಥೆಯನ್ನು ಹೊತ್ತು ಅತ್ಯಂತ ವ್ಯವಸ್ಥಿತವಾಗಿ ನೀಡಿದ್ದ ಆದಿಚುಂಚನಗಿರಿ ಮಠ ಪ್ರಸಕ್ತ ೬೭ ನೇ ರಾಷ್ಟ್ರಮಟ್ಟದ ಬಾಲಕಿಯರ ವಾಲಿಬಾಲ್ ಕ್ರೀಡಾಕೂಟದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದೆ. ಒಂದು ಚಿಕ್ಕ ಲೋಪ-ದೋಷಗಳು ಕಾಣದಂತೆ ದೇಶದ ಎಲ್ಲಾ ರಾಜ್ಯಗಳ ಕ್ರೀಡಾಪಟುಗಳು ಹಾಗೂ ತೀರ್ಪುಗಾರರು ಆದಿಚುಂಚನಗಿರಿ ಟ್ರಸ್ಟ್ ನೀಡಿದ ದಾಸೋಹ ಹಾಗೂ ಅತಿಥ್ಯವನ್ನು ಆತ್ಮೀಯವಾಗಿ ಸವಿದು ಶ್ರೀಗಳಿಗೆ ಗೌರವ ಅರ್ಪಿಸಿದ್ದಾರೆ.

ಅನ್ನದ ವಿಷಯದಲ್ಲಿ ಆದಿಚುಂಚನಗಿರಿ ವಿದ್ಯಾಸಂಸ್ಥೆ ವಿಶೇಷವಾಗಿ ಕ್ರೀಡೆ ಮತ್ತು ಕ್ರೀಡಾಪಟುಗಳ ವಿಷಯದಲ್ಲಿ ಮಹಾಸಂಸ್ಥಾನದ ಪ್ರಧಾನಕಾರ್ಯದರ್ಶಿ ಶ್ರೀ ಪ್ರಸನ್ನನಾಥಸ್ವಾಮೀಜಿ ಇಡೀ ಭಾರತ ದೇಶದ ಎಲ್ಲಾ ರಾಜ್ಯಗಳಿಂದ ಬಂದಿರುವಂತಹ ಕ್ರೀಡಾಪಟುಗಳಿಗೆ ರಸದೌತಣವನ್ನು ಕೊಡಿಸಿದ್ದಾರೆ.
ಉತ್ತರ ಹಾಗೂ ದಕ್ಷಿಣ ಭಾರತದ ಊಟಗಳನ್ನು ಕ್ರೂಢೀಕರಿಸಿ ಎಲ್ಲರೂ ಅತ್ಯಂತ ಖುಷಿಯಿಂದ ತಿಂಡಿ, ಊಟ ಹಾಗೂ ಸಂಜೆಯ ತಿನಿಸು ಸವಿಯಲು ವಿಶೇಷವಾಗಿ ಪ್ರಯತ್ನಿಸಿರುವುದು ಆದಿಚುಂಚನಗಿರಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಉಪನ್ಯಾಸಕ ವೃಂದದ ಶ್ರಮದ ನಡುವೆ ಯಶಸ್ವಿಯಾಗಿರುವುದು ವಿಶೇಷವೇ ಹೌದು.


ನಿತ್ಯ ಬೆಳಗ್ಗೆ 7.30ರಿಂದ 10ರೊಳಗೆ ಬ್ರೆಡ್ಜಾಮ್, ಬಟರ್, ಇಡ್ಲಿ, ವಡೆ, ಸಾಂಬರ್, ಚಟ್ನಿ, ಪೊಂಗಲ್, ಉಪ್ಪಿಟ್ಟು, ಕೇಸರಿಬಾತ್ ಹಾಗೂ ಬದಾಮಿ ಹಾಲಿನ ರಸದೌತಣ ಸಿಗುತ್ತದೆ. ಆದಿಚುಂಚನಗಿರಿ ಕಾಲೇಜಿನ ಉಪನ್ಯಾಸಕ ವೃಂದ, ಕೆಲ ವಿದ್ಯಾರ್ಥಿಗಳು, ಶಿವಮೊಗ್ಗ ಆದಿಚುಂಚನಗಿರಿ ಮಠದ ಆಹಾರ ವ್ಯವಸ್ಥೆ ನೋಡಿಕೊಳ್ಳುವ ಉದ್ಯೋಗಿಗಳು ನಿತ್ಯ ಇದೇ ಕಾಯಕದಲ್ಲಿ ಮಗ್ನರಾಗಿದ್ದಾರೆ.
ಮದ್ಯಾಹ್ನ 12.30ರಿಂದ 2.30ರವರೆಗೆ ಜಿಲೇಬಿ, ತಂದೂರಿರೊಟ್ಟಿ, ಕುರ್ಮ, ಜಿರಾರೈಸ್, ರೈತಾ ರೈಸ್, ರಸಂ, ಅನ್ನ, ಉಪ್ಪಿನಕಾಯಿ, ಸೆಂಡಿಗೆ, ಮೊಸರು, ವೆಜಿಟೇಬಲ್ ಸಾಲಿಡ್, ಐಸ್ಕ್ರೀಂ ಸೇರಿದಂತೆ ವಿವಿಧ ಬಗೆಯ ಭಕ್ಷ ಭೋಜನಗಳು ಇಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

4.30ರಿಂದ 5.30ರವರೆಗೆ ಚಹ ಅಥವಾ ಕಾಫಿ ಜೊತೆಗೆ ಭೋಂಡಾ ಸೂಪ್, ಮತ್ತಿತರ ತಿನಿಸುಗಳು ದೊರೆಯುತ್ತವೆ.
ಸಂಜೆ 7.30ರಿಂದ 9.30ರವರೆಗೆ ಚಪಾತಿ, ಸಾಗು, ಸ್ವೀಟ್, ಗೋಬಿಮಂಚೂರಿ, ಅನ್ನ, ರಸಂ, ಉಪ್ಪಿನಕಾಯಿ, ಪಾಪಡ್, ಸಲಾಡ್, ಬನಾನ, ಸೇರಿದಂತೆ ವಿವಿಧ ಭೋಜನಗಳು ದೊರೆಯಲಿವೆ.
ಕ್ರೀಡಾಂಗಣ ವ್ಯವಸ್ಥೆಯಿಂದ ಹಿಡಿದು ಕ್ರೀಡಾಪಟುಗಳು ಹಾಗೂ ತೀರ್ಪುಗಾರರ ವಸತಿ, ಆಹಾರ ಪದ್ದತಿಯನ್ನು ನೋಡಿಕೊಳ್ಳುತ್ತಿರುವ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಕಳೆದ 4 ದಿನಗಳಿಂದ ಅತ್ಯಂತ ವ್ಯವಸ್ಥಿತ ಹಾಗೂ ಎಲ್ಲರ ಮನೆ, ಮನ ತುಂಬುವ ಕಾರ್ಯಮಾಡಿದೆ.
ದೇಶದ ೨೮ ಬಾಲಕಿಯರ ತಂಡಗಳಲ್ಲಿನ ಕ್ರೀಡಾಪಟುಳು ಇಲ್ಲಿ ಆದಿಚುಂಚನಗಿರಿಯ ಕಾರ್ಯವನ್ನು ಮನದುಂಬಿ ಶ್ಲಾಘಿಸಿದ್ದಾರೆ.
