ಶಿವಮೊಗ್ಗ : ನೆಮ್ಮದಿಯುತ ಸಮಾಜಕ್ಕೆ ನಾಗರಿಕ ಪ್ರಜ್ಞೆಯೆಂಬುದು ಅತ್ಯಗತ್ಯ ವಿಚಾರವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಆಡಳಿತ ಕಛೇರಿಯ ಆವರಣದಲ್ಲಿ ಏರ್ಪಡಿಸಿದ್ದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ನಾಗರಿಕ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬಾಳುವಲ್ಲಿ ಸಂವಿಧಾನದ ಮೂಲಕ ನಮ್ಮ ಹಿರಿಯರು ನೀಡಿದ ಕೊಡುಗೆಗಳು ಸದಾ ಸ್ಮರಣೀಯ. ನೆಮ್ಮದಿಯುತ ಸಮಾಜಕ್ಕೆ ನಾಗರಿಕ ಪ್ರಜ್ಞೆ ಸದಾ ಜಾಗೃತವಾಗಿರಬೇಕು. ನಾಗರಿಕ ಪ್ರಜ್ಞೆಯೆಂಬುದು ಹುಟ್ಟಿನಿಂದಲೇ ಬರುವ ವಿಚಾರವಲ್ಲ. ನಾವು ಕಲಿಯುವ ಶಿಕ್ಷಣ ಬೆಳೆಯುವ ವಾತಾವರಣ ಮತ್ತು ಸಮಾಜದಿಂದ ಬರಬೇಕಿದೆ.
ಆಧುನಿಕತೆ ಹಾಗೂ ಸ್ಪರ್ಧಾತ್ಮಕ ವಾತಾವರಣದ ಧಾವಂತದಲ್ಲಿ ನಾಗರಿಕ ಪ್ರಜ್ಞೆಗೆ ಪ್ರಾಮುಖ್ಯತೆ ನೀಡುವಲ್ಲಿ ಹಿಂದೆ ಬಿದ್ದಿದ್ದೇವೆ. ಕಲಿಸುವ ಶಿಕ್ಷಕರು ಹಾಗೂ ಪೋಷಕರಿಗೆ ತಮ್ಮ ಮಕ್ಕಳಿಗೆ ನಾಗರಿಕ ಪ್ರಜ್ಞೆಯ ಕುರಿತು ಮಾರ್ಗದರ್ಶನ ನೀಡುವಲ್ಲಿ ಯಾವುದೇ ಸಂಯಮ ತೋರುತ್ತಿಲ್ಲ.
ನಮ್ಮ ನಡುವೆ ನಡೆಯುವ ಅನೇಕ ಅಹಿತಕರ ಘಟನೆಗಳನ್ನು ನಿರ್ಲಕ್ಷಿಸಿ ನುಣುಚಿಕೊಳ್ಳಲು ಪ್ರಯತ್ನಿಸುತ್ತೇವೆ. ವೈಯಕ್ತಿಕ ಲಾಭ ನಷ್ಟದ ಲೆಕ್ಕಾಚಾರ ಮೀರಿ ನೈಜ ನಾಗರಿಕ ಪ್ರಜ್ಞೆ ಮೆರೆದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಸುಧಾರಿಸಲು ಸಾಧ್ಯ. ಇದು ನನ್ನ ದೇಶ ನಾನು ಇದರ ಪ್ರಜೆ ಎಂಬ ಆತ್ಮಾಭಿಮಾನ ಬರಬೇಕಿದ್ದು ಆಗ ಮಾತ್ರ ಗಣರಾಜ್ಯದ ಪರಿಕಲ್ಪನೆ ಪರಿಪೂರ್ಣ ಹೊಂದಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ ಧ್ವಜಾರೋಹಣ ನೆರವೇರಿಸಿದರು. ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಹೆಚ್.ಸಿ.ಶಿವಕುಮಾರ್, ಎನ್.ಟಿ.ನಾರಾಯಣರಾವ್, ಮಧುರಾವ್ ಅಜೀವ ಸದಸ್ಯರಾದ ಹೆಚ್.ಎಂ.ಮಲ್ಲಪ್ಪ, ಕಿಶೋರ್ ಶೀರನಾಳಿ,ರಘು, ಆನಂದ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.