ಶಿವಮೊಗ್ಗ, ಡಿ.17:
ಜಿಲ್ಲೆಯಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ-2020ರ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಮೊದಲನೆ ಹಂತದಲ್ಲಿ ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ತಾಲೂಕುಗಳ ಗ್ರಾ.ಪಂ.ವ್ಯಾಪ್ತಿಯಲ್ಲಿ ಚುನಾವಣೆ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ದಿ: 20-12-2020ರ ಸಂಜೆ 5.00 ರಿಂದ ದಿ: 22-12-2020ರ ಸಂಜೆ 5-00ರವರೆಗೆ ಕಲಂ 144 ಅನ್ವಯ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
ಈ ಅವಧಿಯಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆಗಳನ್ನು ನಡೆಸುವಂತಿಲ್ಲ. 5 ಹಾಗೂ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವಂತಿಲ್ಲ. ಶಸ್ತ್ರ, ಕುಡುಗೋಲು, ಖಡ್ಗ, ಚೂರಿ, ಬಂದೂಕು, ಕೋಲು ಅಥವಾ ದೇಹಕ್ಕೆ ಅಪಾಯವಾಗುವಂತಹ ಮಾರಕಾಸ್ತ್ರಗಳನ್ನು ಒಯ್ಯುವಂತಿಲ್ಲ. ಕಲ್ಲು, ಬಾಟಲಿ ಅಥವಾ ಯಾವುದೇ ಎಸೆಯುವ ಅಸ್ತ್ರಗಳನ್ನು ಸಂಗ್ರಹಿಸುವುದು ಅಥವಾ ತಯಾರಿಸುವಂತಿಲ್ಲ. ಪ್ರಚೋಧನಾಕಾರಿ ಭಾಷಣ ಮಾಡುವಂತಿಲ್ಲ ಹಾಗೂ ಬ್ಯಾನರ್ ಅಥವಾ ಫ್ಲೆಕ್ಸ್‍ಗಳನ್ನು ಅಂಟಿಸುವಂತಿಲ್ಲ
ಈ ನಿಷೇಧಾಜ್ಞೆ ಸದುದ್ದೇಶದ ಕಾರ್ಯಗಳಾದ ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಪ್ರಾರ್ಥನೆಗೆ ತೆರಳುವವರಿಗೆ ಹಾಗೂ ಇನ್ನಿತರೆ ಸಮಾರಂಭಗಳನ್ನು ನಡೆಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಹಾಗೂ ಚುನಾವಣಾ ಕಾರ್ಯಚರಣೆ ಅಧಿಕಾರಿಗಳಿಗೆ, ಚುನಾವಣಾ ಏಜೆಂಟ್‍ರವರೆಗೆ ಅನ್ವಯಿಸತಕ್ಕದಲ್ಲ.
ನಿಷೇಧಾಜ್ಞೆ ಉಲ್ಲಂಘಿಸುವವರು ವಿರುದ್ಧ ಭಾ.ದಂ.ಸಂ.ಕಲಂ 188ರ ಪ್ರಕಾರ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ಎಚ್ಚರಿಸಿದ್ದಾರೆ.

ರೈಲುಗಳ ಸಂಚಾರ ಅವಧಿ ವಿಸ್ತರಣೆ
ಶಿವಮೊಗ್ಗ, ಡಿ. 17 : ಕಳೆದ 10ದಿನಗಳ ಹಿಂದೆ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದ್ದ ಇಂಟರ್‍ಸಿಟಿ ಹಾಗೂ ರಾತ್ರಿ ರೈಲುಗಳ ಓಡಾಟವನ್ನು 2021ರ ಜನವರಿ 31ರವರೆಗೆ ವಿಸ್ತರಿಸಲಾಗಿದ್ದು, ಪ್ರಯಾಣಿಕರು ಈ ರೈಲು ಸಂಚಾರದ ಲಾಭ ಪಡೆದುಕೊಳ್ಳುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಮನವಿ ಮಾಡಿದ್ದಾರೆ.
ರೈಲು ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತಿದ್ದು, ಪ್ರಯಾಣಿಕರಿಗೆ ಅನುಕೂಲವಾಗಿದೆ ಎಂದು ಸಂಸದರು ರೈಲ್ವೇ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವ ಕಾರಣ ಪ್ರಾಯೋಗಿಕವಾಗಿ ಸಂಚರಿಸುತ್ತಿದ್ದ ರೈಲುಗಳ ಓಡಾಟದ ಅವಧಿಯನ್ನು ಜನವರಿ 31ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಸದರಿ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಟಿಕೇಟುಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಂಡು ಪ್ರಯಾಣಿಸುವಂತೆ ಮನವಿ ಮಾಡಿರುವ ಅವರು, ಅವಧಿ ವಿಸ್ತರಿಸಿ ಆದೇಶ ಹೊರಡಿಸಿರುವ ರೈಲ್ವೇ ಜನರಲ್ ಮ್ಯಾನೇಜರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!