ಶಿವಮೊಗ್ಗ,ಜ.೦೪: ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ ಇಬ್ಬರು ಮತಾಂತರಗೊಂಡು ಪಾಕಿಸ್ಥಾನಕ್ಕೆ ಹೋಗಲಿ ಎಂದು ಬಿಜೆಪಿಯ ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರಿಅವರನ್ನು ಬಂಧಿಸಿದ್ದನ್ನು ವಿರೋಧಿಸಿ ಖಾಸಗಿ ಬಸ್ ಸ್ಟ್ಯಾಂಡ್‌ನಲ್ಲಿ ಆಯೋಜಿಸಿದ್ದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯನವರು ಭಾರತ ಹಿಂದೂ ರಾಷ್ಟ್ರವಾದರೆ, ಪಾಕಿಸ್ಥಾನದಲ್ಲಿರುವಂತೆ ಗೊಂದಲ ಇಲ್ಲೂ ಶುರುವಾಗುತ್ತೆ ಎಂದು ಹೇಳಿರುವುದು ಖಂಡನೀಯ ಇದೊಂದು ಹುಚ್ಚುತನದ ಹೇಳಿಕೆಯಾಗಿದೆ. ಅವರು ಮುಸ್ಮಾಲಾನರಾಗಿ ಪಾಕಿಸ್ಥಾನಕ್ಕೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು..
ಭಾರತದಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಬೆಲೆ ಗೌರವ ನೀಡಲಾಗುತ್ತಿದೆ. ಶ್ರದ್ಧ ಕೇಂದ್ರಗಳನ್ನು ಗೌರವಿಸಲಾಗುತ್ತದೆ. ಆದರೆ ಪಾಕಿಸ್ಥಾನದಲ್ಲಿ ಮುಸಲ್ಮಾನ್ ಗುರುಗಳಾದ ಮುಲ್ಲಾಗಳನ್ನು ಗುಂಡಿಟ್ಟು ಕೊಲ್ಲುತ್ತಾರೆ. ಆದರೆ, ಭಾರತದಲ್ಲಿ ಆಗಿಲ್ಲವಲ್ಲ. ಇಲ್ಲಿ ಎಂದು ಧರ್ಮದ ಗುರುಗಳಿಗೂ ಬೆಲೆ ಕೊಡುತ್ತೇವೆ. ಇದೇ ಭಾರತಕ್ಕೂ ಪಾಕಿಸ್ಥಾನಕ್ಕೂ ಇರುವ ವ್ಯತ್ಯಾಸ. ಮೊದಲು ಇದನ್ನು ಯತೀಂದ್ರ ಸಿದ್ದರಾಮಯ್ಯ ತಿಳಿದುಕೊಳ್ಳಲಿ, ಅವರಿಗೆ ಹಿಂದೂ ಧರ್ಮ ಏನೆಂದು ಗೊತ್ತಿಲ್ಲ ಎಂದರು.
ಮುಸಲ್ಮಾನರ ಓಲೈಸಲು ಈ ರೀತಿ ಹೇಳಿಕೆಗಳನ್ನು ತಂದೆ ಮಕ್ಕಳು ನೀಡುತ್ತಿದ್ದಾರೆ. ಅವರ ತಂದೆಯಿಂದಲೇ ಅವರು ಪ್ರಚಾರಕ್ಕೆ ಒಳಗಾಗಿದ್ದಾರೆ. ಈ ಇಬ್ಬರಿಗೂ ಈ ದೇಶದಲ್ಲಿ ಇರಲು ಯೋಗ್ಯತೆ ಇಲ್ಲ. ದೇಶಭಕ್ತಿಯೂ ಇಲ್ಲ ಎಂದು ಟೀಕೀಸಿದರು.
ಸಿದ್ದರಾಮಯ್ಯನವರು ಸಿ.ಎಂ.ಆಗಿ ಮುಂದುವರೆಯಲು ಹೋರಾಟ ನಡೆಸಬೇಕು ಎಂದು ಯತೀಂದ್ರ ಹೇಳುತ್ತಾರೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ಹೋರಾಟ ಮಾಡಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೆಂಬುದು ಎಷ್ಟು ಸಮಂಜಸ. ಹಾಗಾಗಿ ಈ ಸರ್ಕಾರ ಯಾವುದೇ ಸಂದರ್ಭದಲ್ಲಿ ಬಿದ್ದುಹೋಗಬಹುದು ಎಂದರು.
ಕಾಂಗ್ರೆಸ್‌ನ ಗುಂಪುಗಾರಿಕೆ, ಧರ್ಮ ದ್ವೇಷ, ಗ್ಯಾರಂಟಿ ಹೆಸರಿನಲ್ಲಿ ಬಡವರಿಗೆ ಮೋಸ ಮಾಡುತ್ತ ಬಂದಿದೆ. ವರ್ಗಾವಣೆ ದಂಧೆ ಹೆಚ್ಚಿದೆ. ಲಕ್ಷಾಂತರ ಹಣವನ್ನು ಲೂಟಿ ಮಾಡಲಾಗಿದೆ. ಜೊತೆಗೆ ಹುಬ್ಬಳ್ಳಿಯಲ್ಲಿ ಕರಸೇವಕರನ್ನು ಬಂಧಿಸಲಾಗಿದೆ. ೩೨ ವರ್ಷದ ಹಿಂದಿನ ಪ್ರಕರಣದಲ್ಲಿದ್ದ ಪೂಜಾರಿಯವರನ್ನು ಬಂಧಿಸಿರುವುದು ಎಷ್ಟರ ಮಟ್ಟಿಗೆ ಸರಿ?. ತಪ್ಪು ಮಾಡಿದವರನ್ನು ಬಂಧಿಸಬಾರದ ಎಂದು ಹೇಳುತ್ತಾರೆ. ಈಗ ಈ ಕರಸೇವಕನನ್ನು ಬಂಧಿಸುವ ಉದ್ದೇಶವಾದರೂ ಏನಿದೆ. ಎಫ್.ಐ.ಆರ್. ಎಲ್ಲಿದೆ ಎಂಬುವುದೇ ಗೊತ್ತಿಲ್ಲ. ಇದು ದ್ವೇಷದ ರಾಜಕಾರಣವಲ್ಲದೇ ಮತ್ತೇನು ? ಎಂದರು.
ಕಾಂಗ್ರೆಸ್ ಸರ್ಕಾರದ ಧರ್ಮ ಪ್ರೇರಿತ ಹಾಗೂ ಧರ್ಮ ವಿರೋಧಿ ಪೊಲೀಸರನ್ನು ಅಮಾನತ್ತು ಮಾಡಬೇಕು. ಕರಸೇವಕರನ್ನು ಖುಲಾಸೆಗೊಳಿಸಬೇಕು ಎಂದ ಅವರು, ಮತ್ತೊಮ್ಮೆ ಗೋದ್ರ ಹತ್ಯಾಕಾಂಡ ನಡೆಯಲಿದೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ ಕೂಡಲೇ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಕೆಡುಗಾಲ ಬಂದಿದೆ. ಕಾಂಗೆಸ್ ನಾಯಕರು ಧರ್ಮದ ವಿರುದ್ಧ ಬೇಕಂತನೇ ಮಾತನಾಡುತ್ತಿದ್ದರೋ, ಪ್ರಚಾರಕ್ಕಾಗಿ ಮಾತನಾಡುತ್ತಿದ್ದರೋ ಗೊತ್ತಿಲ್ಲ. ಅರ್ಥಹೀನವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹರಿಪ್ರಸಾದ್ ಹೇಳಿಕೆಗಳನ್ನು ಗೃಹಮಂತ್ರಿಗಳು ತನಿಖೆ ನಡೆಸಬೇಕು. ಈ ಹೇಳಿಕೆ ಗಲಾಟೆ ನಡೆಸಲು ಪೂರ್ಣ ತಯಾರಿ ನಡೆಸಿದಂತೆ ಆಗಿದೆ. ಅವರು ಯಾವ ಭಯೋತ್ಪಾದನಾ ಚಟುವಟಿಕೆ ನಡೆಸುವ ಸಂಸ್ಥೆಯಲ್ಲಿದ್ದರೋ ಗೊತ್ತಿಲ್ಲ. ನಾಳೆ ಹೆಚ್ಚು ಕಡಿಮೆಯಾದರೆ, ಕಾಂಗ್ರೆಸ್ ಸರ್ಕಾರವೇ ಕಾರಣ ಎಂದರು.