ಶಿವಮೊಗ್ಗ,ಜ.೦೧: ಶಿಕ್ಷಣಕ್ಕೆ ಜಾತಿ-ಮತ- ಧರ್ಮಗಳಿಲ್ಲ. ಶಿಕ್ಷಣದಿಂದ ಮಾತ್ರ ನಂಬಿದ ದೇವರನ್ನು ಕಾಣಲು ಸಾಧ್ಯ. ಶಿಕ್ಷಣವಿಲ್ಲದಿದ್ದರೆ ಯಾವುದೇ ಧರ್ಮ ನಿರರ್ಥಕ ಎಂದು ಶಿಕ್ಷಣ ಸಚಿವ ಮಧು.ಎಸ್ ಬಂಗಾರಪ್ಪ ಹೇಳಿದರು.
ಅವರು ಇಲ್ಲಿನ ಗೋಪಾಳದ ಎಸ್.ಕೆ.ಪಿ. ಶಿವಮೊಗ್ಗ ಪಬ್ಲಿಕ್ ಸ್ಕೂಲಿನ ವಿಶೇಷ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಲ್ಪಸಂಖ್ಯಾತರ ಶಾಲೆಗಳು ಅಭಿವೃದ್ಧಿಯ ಹಾದಿಯಲ್ಲಿರಬೇಕು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರವರು ಧರ್ಮಗಳನ್ನು ಮೀರಿ ಶಿಕ್ಷಣಕ್ಕೆ ಒತ್ತು ಕೊಟ್ಟು ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಸಾಗಿಸುತ್ತಿದ್ದರು. ಮಕ್ಕಳಿಗೆ ಶಕ್ಷಣದ ಮೂಲಕವಷ್ಟೇ ಉದ್ಧರಿಸಲು ಸಾಧ್ಯ. ಅವರ ಉದ್ಧಾರದಿಂದ ದೇಶ ಮತ್ತು ಧರ್ಮ ಉದ್ಧಾರವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ಈ ಶಾಲೆಯ ಕಾರ್ಯಕ್ರಮ ಮತ್ತು ಕನಸುಗಳು ಸಾಕಷ್ಟು ಭರವಸೆ ಮೂಡಿಸುವಂತಿವೆ. ಮುಸ್ಲಿಂ ಸಮುದಾಯದ ಮಕ್ಕಳು ದಾರಿ ತಪ್ಪದಂತೆ ಇರಲು ಇಂತಹ ಶಾಲೆಗಳು ಕಾರಣವಾಗಬೇಕು. ಇಲ್ಲಿ ಅಬ್ದುಲ್ ಕಲಾಂನಂತಹ ಮೇರು ಪ್ರತಿಭೆಗಳು ಕೂಡ ಇರುತ್ತಾರೆ.
ಅವರಿಗೆ ಇಂತಹ ಶಾಲೆಗಳ ಮೂಲಕ ಪ್ರೋತ್ಸಾಹ ಸಿಗಬೇಕು ಎಂದರು.
ಎಸ್‌ಕೆಪಿ ಶಿವಮೊಗ್ಗ ಪಬ್ಲಿಕ್ ಶಾಲೆಯ ಚೇರ್ಮನ್ ಜನಾಬ್ ಮೊಹಮದ್ ಅನ್ವರ್ ಖಾದ್ರಿ ಮಾತನಾಡಿ, ಕಳೆದ ಒಂದು ವರ್ಷದಿಂದ ಈ ಶಾಲೆಯನ್ನು ಕೈಗೆತ್ತಿಕೊಂಡಿದ್ದೇವೆ. ಸರ್ವ ಧರ್ಮಗಳ ಮಕ್ಕಳಿಗೂ ಈ ಶಾಲೆ ಭವಿಷ್ಯ ರೂಪಿಸಲು ಸನ್ನದ್ಧವಾಗಿದೆ ಎಂದರು.