ಸಾಗರ : ದೇಶಕ್ಕೆ ಕಾಂಗ್ರೇಸ್ ನೀಡಿದ ಕೊಡುಗೆ ಸರ್ವಕಾಲಕ್ಕೂ ದಾಖಲೆಯಾಗಿದೆ. ಆದರೆ ಬಿಜೆಪಿ ನೀಡಿದ ಕೊಡುಗೆ ಏನೆಂದು ಹುಡುಕುವ ಸ್ಥಿತಿ ಇದೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮುಂಚೂಣಿಯಲ್ಲಿದ್ದ ಪಕ್ಷ ಕಾಂಗ್ರೇಸ್ ಮಾತ್ರ. ಬಿಜೆಪಿಯ ಯಾರೂ ಸ್ವಾತಂತ್ರ್ಯ ಚಳುವಳಿಯಲ್ಲಿ ಪಾಲ್ಗೊಂಡವರಲ್ಲ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ಗಾಂಧಿ ಮಂದಿರದಲ್ಲಿ ಗುರುವಾರ ಬ್ಲಾಕ್ ಕಾಂಗ್ರೇಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೧೩೯ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.+


ದೇಶದ ಜನ ಬದಲಾವಣೆ ಬಯಸುತ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೇಸ್ ಸರ್ಕಾರವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟಿತವಾಗಿ ಪ್ರಯತ್ನ ನಡೆಸಬೇಕಾಗಿದೆ.

ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜನರ ಸಂಕಷ್ಟ ದೂರವಾಗಿದೆ. ಬಿಜೆಪಿಗೆ ಕಾಂಗ್ರೇಸ್ ಸರ್ಕಾರದ ಏಳಿಗೆ ಸಹಿಸಿಕೊಳ್ಳಲು ಸಾಧ್ಯವಾಗದೆ ಅಪಪ್ರಚಾರದ ಮೂಲಕ ಸಮಾಧಾನಪಟ್ಟುಕೊಳ್ಳುತ್ತಿದೆ. ಕಾಂಗ್ರೇಸ್‌ನ ಯುವನಿಧಿ ಯೋಜನೆ ಜ.೧೨ಕ್ಕೆ ಜಾರಿಗೆ ಬರಲಿದ್ದು ಸುಮಾರು ೧೨ಸಾವಿರ ಕೋಟಿ ರೂ. ಇದಕ್ಕೆ ಸರ್ಕಾರ ಖರ್ಚು ಮಾಡಲಿದೆ ಎಂದರು.


ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸಮಾಜ ಮತ್ತು ಜನರಲ್ಲಿ ಬದಲಾವಣೆ ತರುವ ಕೆಲಸ ಕಾಂಗ್ರೇಸ್ ಪಕ್ಷ ಮಾಡಿದೆ. ಸಂಸ್ಥಾಪನಾ ದಿನ ಕಾಂಗ್ರೇಸ್‌ನ ಪ್ರಮುಖ ಕಾರ್ಯಕ್ರಮ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷವನ್ನು ಯಾರೂ ಮರೆಯಬಾರದು. ಮತ್ತೊಮ್ಮೆ ಕೇಂದ್ರದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ತರುವ ಸಂಕಲ್ಪ ಕೈಗೊಳ್ಳಿ ಎಂದು ಕರೆ ನೀಡಿದರು.


ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಆರ್. ಜಯಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಐ.ಎನ್.ಸುರೇಶಬಾಬು, ಮಧುಮಾಲತಿ, ಸುಮಂಗಲ, ಗಣಪತಿ ಮಂಡಗಳಲೆ, ಎಂ.ಗಣಪತಿ, ಮಹಾಬಲ ಕೌತಿ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!