ಶಿವಮೊಗ್ಗ, ಡಿಸೆಂಬರ್ 19,
    ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಸಮಗ್ರವಾಗಿ ತಿಳಿದುಕೊಂಡು ಅತಿ ಜಾಗೃತೆಯಿಂದ, ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕೆಂದು ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಸೂಚನೆ ನೀಡಿದರು.
    ಫ್ರೀಡಂ ಪಾರ್ಕ್ ಬಳಿಯ ಗಾಂಧಿ ಭವನದಲ್ಲಿ ಇಂದು ಅಧಿಕಾರಿಗಳಿಗೆ ಮೊಬೈಲ್ ಡೆಮಾನ್‍ಸ್ಟ್ರೇಷನ್ ವೆಹಿಕಲ್(ಎಂಡಿವಿ) ಮೂಲಕ ಆಯೋಜಿಸಲಾಗಿದ್ದ ಇವಿಎಂ ಮತ್ತು ವಿವಿಪ್ಯಾಟ್ ಪ್ರಾತ್ಯಕ್ಷಿಕೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.


     ಇಂದಿನ ಪ್ರಾತ್ಯಕ್ಷಿಕೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮಾಸ್ಟರ್ ತರಬೇತುದಾರರು ಸಮಗ್ರವಾಗಿ ಇವಿಎಂ ಮತ್ತು ವಿವಿಪ್ಯಾಟ್ ಕಾರ್ಯಚಟುವಟಿಕೆ ಹಾಗೂ ಬಳಕೆ ವಿಧಾನವನ್ನು ತಿಳಿಸಿಕೊಡುವರು. ಅದನ್ನು ಸಮರ್ಪಕವಾಗಿ ತಿಳಿದುಕೊಂಡು ಇಂದು ಪಾಲ್ಗೊಂಡಿರುವ 7 ತಂಡಗಳು ತಾವು ಸಹ ಪ್ರಾತ್ಯಕ್ಷಿಕೆ ನೀಡಬೇಕು ಎಂದರು.


    ಇವಿಎಂ ಮಷೀನ್‍ಗಳು ಅತ್ಯಂತ ಸೂಕ್ಷ್ಮವಾಗಿದ್ದು ಅವುಗಳನ್ನು ಅತಿ ಎಚ್ಚರಿಕೆಯಿಂದ ನಿರ್ವಹಿಸಬೇಕು. ಚುನಾವಣಾ ಆಯೋಗ ಈ ವಿಷಯವಾಗಿ ಅತ್ಯಂತ ನಿರ್ದಿಷ್ಟವಾಗಿದ್ದು, ಯಾವುದೇ ತಪ್ಪುಗಳು ಜರುಗದಂತೆ ಜಾಗೃತೆ ವಹಿಸಬೇಕು. ಇವಿಎಂ ಗಳ ಸಾಗಾಣಿಕೆ, ಶೇಖರಣೆ ಮತ್ತು ಬಳಕೆ ಎಲ್ಲವೂ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು ಎಚ್ಚರಿಕೆಯಿಂದ ನಿರ್ವಹಣೆ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳೇ ಜವಾಬ್ದಾರರಾಗುತ್ತಾರೆ. ಇವಿಎಂ ಮತ್ತು ವಿವಿಪ್ಯಾಟ್ ನಲ್ಲಿ ತಾಂತ್ರಿಕ ತೊಂದರೆಗಳು, ಇತರೆ ಸ್ಪಷ್ಟನೆಗಳು ಇದ್ದಲ್ಲಿ ಮಾಸ್ಟರ್ ಟ್ರೈನರ್ ಮತ್ತು ತಂತ್ರಜ್ಞರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು.


    ಮಾಸ್ಟರ್ ಟ್ರೈನರ್ ರವಿಕುಮಾರ್ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.  ಈ ವೇಳೆ ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಲ್ಲ ತಾಲ್ಲೂಕುಗಳ ತಹಶೀಲ್ದಾರರು, ಮಾಸ್ಟರ್ ತರಬೇತುದಾರರು, ಅಧಿಕಾರಿ/ಸಿಬ್ಬಂದಿಗಳು ಪಾಲ್ಗೊಂಡಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!