ಶಿವಮೊಗ್ಗ: ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಆರಂಭ, ಪ್ರವೇಶಾತಿ ಶುಲ್ಕ ವಸೂಲಿ ಹಾಗೂ ಆನ್‌ಲೈನ್ ಶಾಲೆ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಯಾವುದೇ ಅನುಮತಿ ನೀಡಿರುವುದಿಲ್ಲ. ಯಾವುದೇ ಶಾಲೆಗಳು ಈ ಮೂರೂ ಪ್ರಕ್ರಿಯೆಗಳನ್ನು ನಡೆಸುವುದು ಸದ್ಯಕ್ಕಿಲ್ಲ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಂ.ರಮೇಶ್ ಹೇಳಿದರು.
ಅವರು ಇಂದು ಬೆಳಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡುತ್ತಾ, ಸರ್ಕಾರ, ಶಿಕ್ಷಣ ಇಲಾಖೆ ಆದೇಶ ನೀಡುವವರೆಗೂ ಯಾರೂ ಶಾಲೆಗಳನ್ನು ಆರಂಭಿಸುವಂತಿಲ್ಲ, ಯಾರು ಪ್ರವೇಶಾತಿ ಮಾಡಿಕೊಳ್ಳುವಂತಿಲ್ಲ. ನಿಯಮ ಮೀರಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು
ಈಗಾಗಲೇ 1ರಿಂದ 5ನೇ ತರಗತಿಯವರೆಗೆ ಆನ್‌ಲೈನ್ ತರಬೇತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ನಿರ್ಭಂದ ಹೇರಿದೆ. ಉಳಿದಂತೆ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆನ್‌ಲೈನ್ ತರಬೇತಿ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಹಿರಿಯ ತಜ್ಞರ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿ ವಾರದೊಳಗೆ ವರದಿ ನೀಡುವ ಸಾಧ್ಯತೆಗಳಿವೆ. ನಂತರ ಆನ್ ಲೈನ್ ಶಾಲೆ ಮಾಡುವುದಾದರೆ ಯಾವ ಮಾರ್ಗದಲ್ಲಿ ಮಾಡಬೇಕು ಎಂಬ ಮಾರ್ಗಸೂಚಿಯನ್ನು ನೀಡುತ್ತದೆ. ಅಲ್ಲಿಯವರೆಗೂ ಆನ್‌ಲೈನ್ ತರಗತಿಗಳನ್ನು ಸಹ ನಡೆಸುವಂತಿಲ್ಲ. ಇಲಾಖೆಯ ಅನುಮತಿ ಬಹುಮುಖ್ಯ ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ: ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸಕಲ ವ್ಯವಸ್ಥೆ ಕೈಗೊಂಡಿದ್ದು, 24243 ವಿದ್ಯಾರ್ಥಿಗಳು ಈ ಭಾರಿ ಅತ್ಯಂತ ವ್ಯವಸ್ಥಿತವಾಗಿ ನಡೆಯಲಿದೆ ಎಂದು ಉಪನಿರ್ದೇಶಕ ಎನ್.ಎಂ.ರಮೇಶ್ ಹೇಳಿದರು.
ಜಿಲ್ಲೆಯಾದ್ಯಂತ 84ಪರೀಕ್ಷಾ ಕೇಂದ್ರಗಳಲ್ಲಿ 462 ಶಾಲೆಗಳ 12287 ವಿದ್ಯಾರ್ಥಿಗಳು ಹಾಗೂ ೧೧೯೫೬ ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದ, ಕೊರೊನಾ ಹಿನ್ನೆಲೆಯಲ್ಲಿ 220 ಹೆಚ್ಚುವರಿ ಪರೀಕ್ಷಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಒಟ್ಟು 1252 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಬಾಗವಹಿಸಲಿದ್ದಾರೆ.
ಅದೃಷ್ಠ : ಶಿವಮೊಗ್ಗದ ಈಗಿರುವ ಕಂಟೈನ್ಮೆಂಟ್ ವಲಯಗಳಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಿಲ್ಲದಿರುವುದು ಅದೃಷ್ಟವೇ ಹೌದು. ಆದರೆ ಅಲ್ಲಿಂದ ಬಂದು 250 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅವರಿಗೆ ಪ್ರತ್ಯೇಕ ಕೊಠಡಿಗಳನ್ನು ಮಾಡಿಕೊಡಲಾಗಿದೆ. 313 ಅಧಿಕಾರಿ ಹಾಗೂ ಸಿಬ್ಬಂದಿಗಳು ಕೊಠಡಿಗಳಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಆರೋಗ್ಯ ತಪಾಸಣೆ: ಪರೀಕ್ಷೆಗೆ ಹಾಜರಾಗುವ ಪ್ರತಿ ಮಗುವಿಗೂ ಆರೋಗ್ಯ ತಪಾಸಣೆ ಮಾಡಲಿದ್ದು, ಮಕ್ಕಳಿಗೆ ಮೂರು ಕಡೆಯಿಂದ ಮಾಸ್ಕ್ ನೀಡಲಾಗುತ್ತದೆ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಜೇಷನ್ ಮಾಡಲಾಗಿದೆ.
ವಾಹನ ವ್ಯವಸ್ಥೆ: ಎಲ್ಲಾ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆತರಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬಹುತೇಕ ಮಕ್ಕಳು ಪೋಷಕರು ಹಾಗೂ ಕಾಲ್ನಡಿಗೆಯಲ್ಲಿ ಆಗಮಿಸಲಿದ್ದು, ವಾಹನ ಸೌಲಭ್ಯ ಇಲ್ಲದಿರುವ 4097 ಮಕ್ಕಳಿಗೆ ಖಾಸಗಿ ಶಾಲೆಗಳ 138 ಹಾಗೂ 104 ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಮಕ್ಕಳೇ ಲಘು ಉಪಹಾರ ನೀರು ತರಬೇಕು
ಪರೀಕ್ಷೆ ಬರೆಯುವ ಮಕ್ಕಳೇ ಲಘು ಉಪಹಾರ ಹಾಗೂ ಕುಡಿಯುವ ನೀರನ್ನು ತರಬೇಕು. ಯಾರಾದರೂ ಬಿಟ್ಟು ಬಂದರೆ ಅವರಿಗೆ ಸೀಲ್ಡ್ ವಾಟರ್ ನೀಡಲಾಗುತ್ತದೆ. ಬಿಸಿ ನೀರು ಆರಿಸಿ ತಂದರೆ ಉತ್ತಮ. ಮಕ್ಕಳು ಯಾವುದಕ್ಕೂ ಅವಸರ ಪಡುವ ಅಗತ್ಯವಿಲ್ಲವೆಂದರು.
ಮೊಬೈಲ್ ಸ್ವಾಧೀನ: ಪರೀಕ್ಷಾ ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷರ ಬಳಿ ಬೇಸಿಕ್ ಮೊಬೈಲ್ ಹೊರತು ಪಡಿಸಿ ಯಾವುದೇ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮೊಬೈಲ್ ತರುವಂತಿಲ್ಲ. ತಂದರೂ ಅದನ್ನು ಮೊಬೈಲ್ ಸ್ವಾಧೀನಾಧಿಕಾರಿಗೆ ನೀಡತಕ್ಕದ್ದು ಎಂದರು.