ಶಿವಮೊಗ್ಗ, ಡಿ.09:
ನಾಳೆಯಿಂದ ಕರ್ಫ್ಯೂ ಇರುವ 3 ಠಾಣೆ ವ್ಯಾಪ್ತಿ ಯಲ್ಲಿ ಬೆಳಿಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಆದರೆ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ 28 ವಿವಿಧ ವ್ಯಾಪಾರಸ್ಥರ ಸಂಘಟನೆಗಳು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಅವಕಾಶ ನೀಡಿ ರಾತ್ರಿ ಕರ್ಫ್ಯೂ ಮುಂದುವರೆಸುವಂತೆ ಒಕ್ಕೊರಲಿನಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದ್ದು, ಡಿಐಜಿಯ ವರೊಂದಿಗೆ ಮಾತನಾಡಿ, ನಾಳೆ ಬೆಳಿಗ್ಗೆ 7 ಗಂಟೆಗೆ ಈ ಸಂಬಂಧ ಆದೇಶ ಹೊರಡಿಸುವುದಾಗಿ ಜಿಲ್ಲಾಧಿ ಕಾರಿಗಳು ವರ್ತಕರಿಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕರೋನದಿಂದ ತತ್ತರಿಸಿ ಹೋದ ವ್ಯಾಪಾರಸ್ಥರಿಗೆ ಕಳೆದ 7 ದಿನಗಳಿಂದ ೧೪೪ ಸೆಕ್ಷನ್ ಮತ್ತು ಕರ್ಫ್ಯೂ ಜಾರಿಮಾಡಿ, ವಾಣಿಜ್ಯ ವಹಿವಾಟುಗಳನ್ನು ಗಾಂಧಿಬಜಾರ್ ಮತ್ತು ಮೂರು ಠಾಣಾ ವ್ಯಾಪ್ತಿಯಲ್ಲಿ ಬಂದ್ ಮಾಡಿರುವುದು ಕಾನೂನು ಬಾಹಿರವಾಗಿದ್ದು, ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ವ್ಯಾಪಾರಸ್ಥರಿಗೆ ವ್ಯಾಪಾರ-ವಹಿವಾಟುಗಳನ್ನು ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಂಡು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಇಂದು ಮನವಿ ಮಾಡಲಾಯಿತು.
ಹಾಗೂ ವರ್ತಕ ವೃಂದಕ್ಕೆ ರಕ್ಷಣಾ ಇಲಾಖೆಯ ಕೆಳವರ್ಗದ ಸಿಬ್ಬಂದಿಗಳು ಅವಾಚ್ಯ ಶಬ್ಧಗಳನ್ನು ಬಳಸುವುದು, ಅಮಾನವೀಯವಾಗಿ ವರ್ತಿಸುವುದು, ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಲು ಆಗ್ರಹಿಸಲಾಯಿತು.
ರಕ್ಷಣಾ ಇಲಾಖೆಯ ವೈಫಲ್ಯತೆಯನ್ನು ಮುಚ್ಚಿ ಹಾಕಲು ವರ್ತಕ ವೃಂದವನ್ನು ಬಲಿಪಶುಗಳನ್ನಾಗಿ ಮಾಡುವುದು ಬೇಡ ಎಂದು ಮನವಿ ಸಲ್ಲಿಸಲಾಯಿತು.
ಈ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ವಾತಾವರಣ ತಿಳಿಯಾಗಲು ಎಲ್ಲರ ಸಹಕಾರ ಅಗತ್ಯ. ನಾಳೆ ಬೆಳಿಗ್ಗೆಯವರೆಗೆ ಕಾಲಾವಕಾಶ ಕೊಡಿ. ಕರ್ಫ್ಯೂ ಸಡಿಲಿಸಲಾಗುವುದು. ಆದರೆ, ಸೆಕ್ಷನ್ ಜಾರಿಯಲ್ಲಿರುತ್ತದೆ. ೧೪೪ ಸೆಕ್ಷನ್‌ನ ಪ್ರಕಾರ ಅದರಲ್ಲಿರುವ ಮಾರ್ಗಸೂಚಿಗಳನ್ನು ಎಲ್ಲ ವರ್ತಕರು ಪಾಲಿಸಬೇಕು. ಸಹಜ ಸ್ಥಿತಿಗೆ ಬರುವವರೆಗೆ ಎಲ್ಲರು ಸಹಕರಿಸಬೇಕು, ಪೊಲೀಸ್ ಇಲಾಖೆ ಅಹೋರಾತ್ರಿ ಶ್ರಮಿಸುತ್ತಿದ್ದು, ನಿರಂತರ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ನಾಳೆ ಬೆಳಿಗ್ಗೆ ೭ ಗಂಟೆಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಅನೇಕ ಸಂಘಟನೆಗಳು ಈ ಕೂಡಲೆ ನಮಗೆ ಇಂದಿನಿಂದ ಸಂಜೆ ೬ರವರಗೆ ನಮಗೆ ಅವಕಾಶ ನೀಡುವಂತೆ ಒತ್ತಾಯಿಸಿದರೂ ಕೂಡ ಜಿಲ್ಲಾಧಿಕಾರಿಗಳು ಮಾತನಾಡಿ, ನಾಳೆ ಬೆಳಿಗ್ಗೆಯೇ ಅಂತಿಮ ತೀರ್ಮಾನದ ಭರವಸೆ ನೀಡಿದೆ. ಕರ್ಫ್ಯೂ ಇರುವ ಠಾಣಾ ವ್ಯಾಪ್ತಿಯಲ್ಲಿ ನಾಳೆ ೭ ರಿಂದ ೨ರವರೆಗೆ ವ್ಯಾಪಾರಕ್ಕೆ ಅವಕಾಶ ಇದ್ದೆ ಇದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳು ಮಾತನಾಡಿ, ಪೊಲೀಸರು ಇರುವುದು ಶಾಂತಿ ಸುವ್ಯವಸ್ಥೆ ಕಾಪಾಡಲು. ಅಂಗಡಿ ಮುಂಗಟ್ಟು ಬಂದ್ ಮಾಡಿಸಿ ನಮಗೇನು ಲಾಭವಿಲ್ಲ. ನಮಗೆ ವ್ಯಾಪಾರಸ್ಥರ ಸಂಕಷ್ಟ ಅರ್ಥವಾಗುತ್ತದೆ. ಇದು ಶಾಶ್ವತ ಅಲ್ಲ. ದಯವಿಟ್ಟು ಎಲ್ಲಾ ವ್ಯಾಪಾರಸ್ಥರು ಸಿಸಿ ಕ್ಯಾಮರಾ ಕಡ್ಡಾಯವಾಗಿ ಅಳವಡಿಸಬೇಕು, ಹಾಗೂ ಪ್ರತಿ ಬೀದಿಯ ಎರಡೂ ಬದಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸುವಂತೆ ಅವರು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಜಿ.ಆರ್. ವಾಸುದೇವ್, ಪದಾಧಿಕಾರಿಗಳಾದ ಬಿ.ಗೋಪಿನಾಥ್, ಎಸ್.ಎಸ್. ಉದಯ್ ಕುಮಾರ್, ಮಾಜಿ ಅಧ್ಯಕ್ಷರಾದ ಶಂಕರಪ್ಪ, ವಸಂತ್ ಕುಮಾರ್, ಅಶ್ವಥ್ಥನಾರಾಯಣ ಶೆಟ್ಟಿ, ದಿನಕರ್, ಡಾ. ಭರತ್ ಹಾಗೂ ವಿವಿಧ ವ್ಯಾಪಾರಿ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.