ಶಿವಮೊಗ್ಗ: ಸಮಾಜ ತಿದ್ದುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ

, ಜನಪ್ರತಿನಿಧಿಗಳು ಹೆಚ್ಚಿನ ಕೆಲಸ ಮಾಡುವ ನಿಟ್ಟಿನಲ್ಲಿ ಪತ್ರಿಕೆ ಹಾಗೂ ಪತ್ರಕರ್ತರ ಪಾತ್ರ ಮುಖ್ಯವಾಗಿದ್ದು, ಜನಪರ ಲೇಖನಗಳು ಹೆಚ್ಚು ಬರಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಪತ್ರಿಕೆಗಳು ಮಾಡಬೇಕು ಎಂದು ಕರೆನೀಡಿದರು.


೧೦ ಕೋಟಿಗಿಂತ ಹೆಚ್ಚು ಪತ್ರಿಕೆಗಳು ಭಾರತದಲ್ಲಿ ಮುದ್ರಣವಾಗುತ್ತಿದ್ದು,೧೦೦೦ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆ ನೋಡಿದರೆ ವಿಶ್ವದಲ್ಲಿಯೇ ಭಾರತದ ಪತ್ರಿಕೋದ್ಯಮ ಅತ್ಯಂತ ದೃಢ ಮತ್ತು ಭದ್ರವಾಗಿ ನಿಂತಿದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಪತ್ರಿಕೆಗಳು ಕಾರಣ ಎಂದರು.
ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪತ್ರಿಕಾ ಕ್ಷೇತ್ರ ಪ್ರಬಲವಾದ ಕ್ಷೇತ್ರ. ಸ್ವಾತಂತ್ರ್ಯ ಪೂರ್ವದಿಂದಲೂ ದೇಶವನ್ನು ಕಟ್ಟುವ ಕೆಲಸವನ್ನು ಪತ್ರಿಕೆಗಳು ನಿರಂತರವಾಗಿ ಮಾಡಿಕೊಂಡು ಬಂದಿವೆ. ರಾಷ್ಟ್ರೀಯತೆಯ ಆಧಾರದ ಮೇಲೆ, ವೈಚಾರಿಕ ನೆಲೆಗಟ್ಟಿನ ಮೇಲೆ ದೇಶ ಕಟ್ಟುವ ಕೆಲಸ ಮಾಡಿಕೊಂಡು ಬರಲಾಗಿದೆ ಎಂದರು.


ಈ ದೇಶದ ಮಣ್ಣಿಗೆ ಹೊಂದದಂತಹ ಸಿದ್ಧಾಂತಗಳನ್ನು ಕೆಲವೊಮ್ಮೆ ಹೇರುವ ಕೆಲಸ ನಡೆದಾಗಲೂ ಪತ್ರಿಕೆಗಳು ವಾಸ್ತವವನ್ನು ಬಿಂಬಿಸುವ ಕೆಲಸ ಮಾಡಿವೆ. ಈಗಲೂ ಕೂಡ ಕಮ್ಯೂನಿಸಂ ಈ ದೇಶಕ್ಕೆ ಹೊಂದುತ್ತಾ ಎಂಬುದನ್ನು ಯೋಚಿಸಬೇಕಿದೆ. ಯಾವುದು ಬೇಕೋ ಅದನ್ನು ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ ಎಂದ ಅವರು, ಪತ್ರಿಕಾ ರಂಗವೂ ಕೂಡ ಉದ್ಯಮವಾಗಿ ಬೆಳೆಯುತ್ತಿದೆ. ಆದರೆ ಇದರ ಜೊತೆಗೆ ಹಳದಿ ಪತ್ರಿಕೋದ್ಯಮವು ಬೆಳೆಯುತ್ತಿರುವುದು ದುರದೃಷ್ಟಕರ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದರು.


ಮಾಜಿ ಶಾಸಕ ಭಾನುಪ್ರಕಾಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಮಾಧ್ಯಮ ರಂಗ ಈ ನಾಲ್ಕೂ ರಂಗಗಳು ಪರಸ್ಪರ ಪೂರಕವಾಗಿದ್ದರೆ ಮಾತ್ರ ದೇಶಕ್ಕೆ ಒಳ್ಳೆಯದಾಗುತ್ತದೆ ವಿರುದ್ಧವಾಗಿ ನಡೆದುಕೊಂಡರೆ ದೇಶಕ್ಕೆ ಕೇಡಾಗಲಿದೆ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್, ಪತ್ರಕರ್ತರು ಆರ್ಥಿಕವಾಗಿ ಸಬಲರಾಗದೆ ಇರಬಹುದು. ಆದರೆ ಯಾವುದೇ ಪರಿಸ್ಥಿತಿಯಲ್ಲಿಯೂ ಸ್ವಾಭಿಮಾನ ಬಿಡದೆ ಕಾವಲು ನಾಯಿಯಂತೆ ಕೆಲಸ ಮಾಡಬೇಕಿದೆ, ಪತ್ರಕರ್ತರು ಸಂಕಷ್ಟದಲ್ಲಿರುವುದು ನಿಜ. ಸರ್ಕಾರದ ಜೊತೆಗೆ ಚರ್ಚಿಸಿ ಪತ್ರಕರ್ತರ ಆರೋಗ್ಯ, ಅಸಂಘಟಿತ ಕಾರ್ಮಿಕರ ಪಟ್ಟಿಗೆ ಸೇರ್ಪಡೆಗೊಳಿಸಿ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವತ್ತ ಗಮನಹರಿಸುತ್ತಿದೆ. ಈಗಾಗಲೇ ಗ್ರಾಮೀಣ ಪ್ರದೇಶದವರಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಮೌಖಿಕವಾಗಿ ಒಪ್ಪಿಗೆ ನೀಡಿದೆ. ಸಂಘ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಗಮನಸೆಳೆಯುತ್ತಿದೆ ಎಂದರು.
ಮಧ್ಯಾಹ್ನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಸರ್ವ ಸದಸ್ಯರ ಸಭೆ ನಡೆಯಿತು.


ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಉಪಾಧ್ಯಕ್ಷರಾದ ಕೆ.ಎಸ್. ಹುಚ್ರಾಯಪ್ಪ, ವೈದ್ಯ, ಹಾಲಸ್ವಾಮಿ, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ. ದಿನೇಶ್, ಮಾಜಿ ಶಾಸಕ ಆಯನೂರು ಮಂಜುನಾಥ, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ಆರ್ ನಂಜುಂಡಪ್ಪ, ಖಜಾಂಚಿ ಎಸ್. ಆರ್ ರಂಜಿತ್ ಮತ್ತಿತರರಿದ್ದರು. ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು.
ಹಿರಿಯ ಪತ್ರಕರ್ತ ಅರಸಾಳು ರಂಗನಾಥ ಅವರನ್ನು ಈ ಸಂದರ್ಭದಲ್ಲಿ ವಿಶೇ?ವಾಗಿ ಸನ್ಮಾನಿಸಲಾಯಿತು.
ವಿಜಯವಾಣಿ ವರದಿಗಾರ ನವೀನ್ ಬಿಲ್ಗುಣಿ, ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ಉದಯವಾಣಿ ಭದ್ರಾವತಿ ವರದಿಗಾರ ಜಿ.ಎಸ್. ಸುಧೀಂದ್ರ, ಪ್ರಜಾವಾಣಿ ಹೊಸನಗರ ವರದಿಗಾರ ನಾ.ರವಿ, ತೀರ್ಥಹಳ್ಳಿಯ ನಿರಂಜನ, ಆನವಟ್ಟಿಯ ರವಿ.ಆರ್. ತಿಮ್ಮಾಪುರ, ಶಿಕಾರಿಪುರದ ಎಂ. ನವೀನ್, ಸಂಯುಕ್ತ ಕರ್ನಾಟಕ ಸಾಗರ ವರದಿಗಾರ ಮಹೇಶ್ ಹೆಗಡೆ ಅವರಿಗೆ ಜಿಲ್ಲಾ ಪ್ರಶಸ್ತಿ ಹಾಗೂ ಸೊರಬ ತಾಲೂಕು ಘಟಕಕ್ಕೆ ಅತ್ಯುತ್ತಮ ತಾಲೂಕು ಘಟಕವೆಂದು ಪರಿಗಣಿಸಿ ಬಣ್ಣದಬಾಬು ಅವರಿಗೆ ನೀಡಿ ಗೌರವಿಸಲಾಯಿತು. ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಾದ ಪ್ರಣತಿ, ವಿಶಾಖಾ, ಸೃಷ್ಟಿ, ಸ್ನೇಹಾ, ತುಷಾರಗೌರಿ, ಸೃಜನ್ ಅವರನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು. ಜಗತ್ತಿನ ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಡಾ. ವರುಣ್ ಕುಮಾರ್, ಕುವೆಂಪು ವಿವಿ ಸ್ನಾತಕೋತ್ತರ ಪದವಿಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದ ಸಿಂಚನ ಪರವಾಗಿ ಅವರ ತಂದೆತಾಯಿಗಳನ್ನು ಅಭಿನಂದಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!