ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬುದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸಹಕಾರ ಸಂಘಗಳ ಜಂಟಿ ನಿಬಂಧಕರು ಸೂಚನೆ ನೀಡಿದ್ದು, ದೂರುಗಳ ತನಿಖೆಗೆ ಸರ್ಕಾರ ತನಿಖಾಧಿಕಾರಿಗಳನ್ನು ನೇಮಕ ಮಾಡಿದೆ.


ಬೆಂಗಳೂರು ನಗರ, ಜಿಲ್ಲೆ ನಾಲ್ಕನೇ ವಲಯದ ಉಪನಿಬಂಧಕ ಪಿ. ಶಶಿಧರ್ ಹಾಗೂ ದಾವಣಗೆರೆ ಲೆಕ್ಕ ಪರಿಶೋಧನಾ ಇಲಾಖೆಯ ಸಹಕಾರ ಸಂಘಗಳ ಜಂಟಿ ನಿರ್ದೇಶಕ ಮಹೇಶ್ವರಪ್ಪ ಅವರನ್ನು ತನಿಖಾಧಿಕಾರಿಯ್ನಾಗಿ ನೇಮಕ ಮಾಡಲಾಗಿದೆ.


ಸಿಬ್ಬಂದಿಗಳ ನೇಮಕಾತಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಕೆ. ಸಂಗಮೇಶ್, ಡಿಸಿಸಿ ಬ್ಯಾಂಕಿನ ನೌಕರರ ದೂರುಗಳನ್ನು ಆಧರಿಸಿ ತನಿಖೆಗೆ ಆದೇಶಿಸಲಾಗಿದೆ.
ದೂರಿನ ಅಂಶಗಳು:-
ಬ್ಯಾಂಕಿನ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯಲ್ಲಿ ಅನಧಿಕೃತ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿದ್ದು, ಪರೀಕ್ಷೆ ಹಂತದಲ್ಲೂ ಕೂಡ ಹಲವಾರು ನೂನ್ಯತೆಗಳು ಉಂಟಾಗಿರುತ್ತವೆ. ನೇಮಕಾತಿಯ ಯಾವುದೇ ವಿವರವನ್ನು ಆಡಳಿತ ಮಂಡಳಿಯಲ್ಲಿ ಚರ್ಚಿಸಿರುವುದಿಲ್ಲ ಹಾಗೂ ನಿರ್ದೇಶಕರಿಗೆ ಯಾವುದೇ ಮಾಹಿತಿ ನೀಡದೆ ನಿರ್ದೇಶಕರ ಮಂಡಳಿಯ ಅನುಮೋದನೆಯನ್ನು ಸಹ ಅಧಿಕೃತವಾಗಿ ಪಡೆಯದೆ ನೇಮಕಾತಿ ಆದೇಶ ನೀಡಿರುತ್ತಾರೆ. ಇದರಿಂದ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ೨೦೧೯ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಅನ್ಯಾಯವಾಗಿದೆ ಎಂದು ರಿಟ್ ಸಲ್ಲಿಸಿತ್ತಾರೆ ಸದರಿ ರಿಟ್ ಅರ್ಜಿಯಲ್ಲಿ ತಕರಾರರನ್ನು ಸಲ್ಲಿಸದೆ ಸಮಯವನ್ನು ಕೋರಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರೆಸಿರುತ್ತಾರೆ. ಆದರೆ ನ್ಯಾಯಾಲಯದಲ್ಲಿ ಪ್ರಶ್ನಿಸಿದವರ ಆರ್ಥಿಕ ಆಡಚಣೆಯಿಂದ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಂದುವರೆಸಲು ಸಾಧ್ಯವಾಗಿರುವುದಿಲ್ಲ.

ಸಹಕಾರ ಬ್ಯಾಂಕುಗಳ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ಸರ್ಕಾರದ ಸುತ್ತೋಲೆ ಇದ್ದರೂ ಸಹ ಅದನ್ನು ಗಾಳಿಗೆ ತೂರಿ ಸರ್ಕಾರ ಸೂಚಿಸಿದ ಪರೀಕ್ಷಾ ಪ್ರಾಧಿಕಾರಗಳನ್ನು ಬಿಟ್ಟು ಅನಧಿಕೃತವಾಗಿ ಪರೀಕ್ಷೆಯನ್ನು ಮಾಡಿಸಲಾಗಿದೆ. ನೇಮಕಾತಿ ಪರೀಕ್ಷೆ ನಡೆಸಿ ಬ್ಯಾಂಕಿನ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಯವರು ಸೂಚಿಸುವ ಮತ್ತು ಕೇಳಿದ ಫಲಿತಾಂಶವನ್ನು ನೀಡುವ ಷರತ್ತಿಗೆ ಒಪ್ಪಿಕೊಂಡು ಹೆಸರು ಗೊತ್ತಿಲ್ಲದ, ಮಾನ್ಯತೆ ಪಡೆಯದ ಸಂಸ್ಥೆಯೊಂದಕ್ಕೆ ಪರೀಕ್ಷಾ ಜವಾಬ್ದಾರಿಯನ್ನು ನೀಡಿರುತ್ತಾರೆ.


ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ತಮಗೆ ಬೇಕಾದವರನ್ನು ಪಾಸು ಮಾಡಿ ಅರ್ಹತೆಗೆ ತರುವ ಉದ್ದೇಶದಿಂದ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ವಾಪಸ್ಸು ಪಡೆದು, ಪರೀಕ್ಷಾ ನಿಯಮದಂತೆ ಇರುವ ಅವಧಿ ಮೀರಿದ ನಂತರ ಕೀ ಉತ್ತರವನ್ನು ನೀಡಿರುತ್ತಾರೆ ಆದರೆ ಪ್ರಶ್ನೆ ಪತ್ರಿಕೆ ಇಲ್ಲದೆ ಉತ್ತರವನ್ನು ಪರಿಶೀಲಿಸಲು ಅವಕಾಶ ಇರಲಿಲ್ಲ, ಮುಂದುವರೆದು ಕೀ ಉತ್ತರವನ್ನು ಪ್ರಕಟಿಸಿದ ನಂತರ ಮತ್ತೆ ಕೀ ಉತ್ತರವನ್ನು ಮಾರ್ಪಡಿಸಿದ ಆರೋಪ ಇರುತ್ತದೆ.


ಜಿಲ್ಲೆಯಲ್ಲಿ ೧೬೭ ಫ್ಯಾಕ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ, ಸದರಿ ಫ್ಯಾಕ್ಸ್‌ಗಳಿಗೆ ಬೆಳೆ ಸಾಲ ಮಂಜೂರಾತಿಗೆ, ಸಂಘದ ಕಾರ್ಯದರ್ಶಿಗಳು ಬ್ಯಾಂಕಿನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ಛೇಂಬರ್‌ಗೆ ಹೋಗಿ ಮಾಮೂಲಿ ನೀಡಿಯೇ ಸಾಲದ ಬಿಡುಗಡೆ ಆದೇಶಕ್ಕೆ ಸಹಿ ಮಾಡಿಸಿಕೊಳ್ಳಬೇಕಾಗಿರುತ್ತದೆ. ಮಾಮೂಲಿ ಕೊಡದಿದ್ದರೆ ಅವರ ಆಪ್ತ ಕ್ಷೇತ್ರಾಧಿಕಾರಿಯಿಂದ ತನಿಖೆಗೆ ಆದೇಶ ಮಾಡಿ ಬ್ಯಾಂಕಿನ ಸಿಬ್ಬಂದಿಗಳ ಮೇಲೆ ದೌರ್ಜನ್ಯಗಳನ್ನು ನಡೆಸಿರುತ್ತಾರೆ.


೬ನೇ ವೇತನ ಆಯೋಗದ ಶಿಫಾರಸ್ಸನ್ನು ಮಂಜು ಎನ್ನುವ ಕ್ಷೇತ್ರಾಧಿಕಾರಿಯವರಿಂದ ಎಲ್ಲಾ ಸಿಬ್ಬಂದಿಗಳಿಂದ ಹಣ ಪಡೆದು ಜಾರಿಗೆ ತಂದಿರುತ್ತಾರೆ, ಹಾಗೂ ಸಿಬ್ಬಂದಿಗಳ ಉಳಿತಾಯ ಖಾತೆಯಿಂದ ಎಲ್ಲ ಸಿಬ್ಬಂದಿಗಳ ಹಣವನ್ನು ಡ್ರಾ ಮಾಡಿರುತ್ತಾರೆ. ಈ ಬಗ್ಗೆ ನಾವುಗಳು ವಿರೋಧ ಮಾಡಿದ್ದರಿಂದ ನಮಗೆ ವರ್ಗಾವಣೆ ಬಿಸಿ ಮುಟ್ಟಿಸಿದ್ದಾರೆ ಮತ್ತೆ ಪ್ರಶ್ನಿಸಿದರೆ ಶಿಸ್ತು ವಿಚಾರಣೆಯ ಭಯವನ್ನು ಹುಟ್ಟಿಸಿರುತ್ತಾರೆ.
ನಿಯಮ ೧೭ರ ಅನ್ವಯ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆಯೇ ಎಂದು ಪರಿಶೀಲಿಸುವುದು ಮತ್ತು ೧೫ ದಿನದ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ನೇಮಕಾತಿ ಅಲ್ಲದೆ ಬೆಳೆ ಸಾಲ ಮಂಜೂರಾತಿಯಲ್ಲೂ ಕೂಡ ಅಕ್ರಮ ನಡೆದಿದೆ ಎಂದು ತಿಳಿದು ಬಂದಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!