ಚಂದ್ರಯಾನ-3ರ ಸುತ್ತ
ಕೇಂದ್ರೀಕರಿಸಿ ನಮ್ಮ ಚಿತ್ತ
ಹೋಗಿ ಬರೋಣವೇ ನಾವು ಒಮ್ಮೆ ಪರಿಭ್ರಮಿಸುತ್ತಾ!

LVMK3 ಎಂಬ ಉಡ್ಡಾಯನ ವಾಹನ
ದಿನಾಂಕ: 14-07-2023 ರ ಮಧ್ಯಾಹ್ನ 2.35 ಕ್ಕೆ ಸ್ವದೇಶಿ ನಿರ್ಮಿತ ಉಡ್ಡಾಯನ ವಾಹನವಾದ Launch Vehicle Mk-3 ಅಂದು ಹೊತ್ತು ಒಯ್ದಿದ್ದು ಕೇವಲ ಪ್ರೊಪಲ್‌ಷನ್ ಮಾಡ್ಯೂಲ್ ಸಹಿತ ಇರುವ ವಿಕ್ರಂ ಮತ್ತು ಪ್ರಜ್ಞಾನ್‌ಗಳನ್ನು ಮಾತ್ರವಲ್ಲ! ಭವಿಷ್ಯ ಭಾರತದ ಯಶೋಗಾಥೆಯನ್ನು ಮತ್ತು ಭಾರತೀಯರ ದೃಡತೆಯ ಸದ್ಭಾವನೆಗಳನ್ನು !!
ಈಗಾಗಲೇ ಮೂರು ಬಾರಿ ಅಕ್ಷಗಳಿಗೆ ಆರ್ಬಿಟರ್‌ಗಳನ್ನು ಸುರಕ್ಷಿತವಾಗಿ ಸೇರಿಸಿ ತನ್ನ ಸಾಮಾರ್ಥ್ಯವನ್ನು ಇಡೀ ಜಗತ್ತಿಗೆ ನಿರೂಪಿಸಿದ್ದ LVMK3 ಗೆ 4ನೇ ಬಾರಿ ನಿರ್ವಹಿಸುತ್ತಿರುವ ಅದೇ ಮಾದರಿಯ ಕೆಲಸ ಹೊಸತೇನೂ ಅಲ್ಲದೇ ಇದ್ದರೂ, ಅದರ ಮೇಲೆ ಇದ್ದ ಭರವಸೆಗಳು ಇಮ್ಮಡಿಯಾಗಿದ್ದವು. ಚಂದ್ರನ ಕಡೆಗೆ ಗುರಿಯಾಗಿಸಿ ಹೊರಟ LVMK3, ಉಡ್ಡಾಯನವಾದ ದಿನವೇ ಚಂದ್ರಯಾನ-3 ಎಂಬ ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ನಿಖರವಾದ ಕಕ್ಷೆಗೆ ಆರೋಗ್ಯಕರ ಸ್ಥಿತಿಯಲ್ಲಿ ಸೇರಿಸಿತು. ಇಲ್ಲಿಂದ LVMK3 ಭಾರತ ಮಾತೆಯ ಮಕ್ಕಳನ್ನು ತನ್ನ ಮಾವನ ಮನೆಗೆ ತಲುಪಿಸುವ ಕಾರ್ಯವನ್ನು ಪ್ರಾರಂಭಿಸಿತು. ತನ್ನ ಬಿಡಿಭಾಗಗಳನ್ನು ಕಳಚಿಕೊಳ್ಳುತ್ತಾ ಚಂದ್ರನ ಕಡೆ ಹೊರಟ ವಾಹನದ ರಣರೋಚಕ ಪ್ರಯಾಣದ ನೌಕೆಯ ಪಥದ ವಿವಿಧ ಹಂತಗಳು :
ಭೂಮಿಯ ಪರಿಭ್ರಮಣೆ :
ಜುಲೈ 15 ರಂದು ನೌಕೆಯನ್ನು 41722 ಕಿ.ಮೀ x 173 ಕಿ.ಮೀ ಎತ್ತರದ ಅಂಡಾಕಾರದ ಕಕ್ಷೆಗೆ ಏರಿಸಿತು.
ಜುಲೈ 17 ರಂದು ನೌಕೆಯನ್ನು 41603 ಕಿ.ಮೀ x 226 ಕಿ.ಮೀ ಎತ್ತರದ ಅಂಡಾಕಾರದ ಕಕ್ಷೆಗೆ ಏರಿಸಿತು.
ಜುಲೈ 22 ರಂದು ನೌಕೆಯನ್ನು 71351 ಕಿ.ಮೀ x 233 ಕಿ.ಮೀ ಎತ್ತರದ ಅಂಡಾಕಾರದ ಕಕ್ಷೆಗೆ ಏರಿಸಿತು.
ಜುಲೈ 25 ರಂದು ಮತ್ತೊಮ್ಮೆ ಕಕ್ಷೆಯನ್ನು 3,69,328 ಕಿ.ಮೀ. x 288 ಕಿ.ಮೀ ಹೆಚ್ಚಿಸುವ ಕಾರ್ಯವನ್ನು ಮುಂದುವರೆಸಿತು ಹಾಗೂ ಅದೇ ದಿನ ಬರುವ ಆಗಸ್ಟ್ -01 ರಂದು ತಾನು ನಿರ್ವಹಿಸುವ ಕಾರ್ಯದ ಬಗ್ಗೆ ಬೆಂಗಳೂರಿನ ISTRAC ಕೇಂದ್ರದಿಂದ ಮಾಹಿತಿಯನ್ನು ಪಡೆದುಕೊಂಡಿತು.
ಹೀಗೆ ಭೂಮಿಯ ಸುತ್ತ ಪರಿಭ್ರಮಿಸುತ್ತ ಎತ್ತರೆತ್ತರಕ್ಕೆ ತಲುಪಿ, ಕೊನೆಯದಾಗಿ ಆಗಸ್ಟ್ ೧ ರಂದು ಚಂದ್ರನ ಕಕ್ಷೆಗೆ ಸೇರಿಕೊಳ್ಳುವ ದಾರಿಯನ್ನು(Lunar Transfer Trajectory) ಹಿಡಿಯಿತು.

b) ಚಂದ್ರನ ಪರಿಭ್ರಮಣೆ :
ಆಗಸ್ಟ್ 5 ರಂದು ಚಂದ್ರನ ಕಕ್ಷೆಗೆ ಸೇರುವಲ್ಲಿ ಯಶಸ್ವಿಯಾಯಿತು ಹಾಗೂ ಈ ಕಕ್ಷೆಯು ಚಂದ್ರನಿಂದ 164 ಕಿ.ಮೀ. x 18074 ಕಿ.ಮೀ. ಎತ್ತರದಲ್ಲಿದೆ.
ಆಗಸ್ಟ್ 6 ರಂದು 170 ಕಿ.ಮೀ. x 4313 ಕಿ.ಮೀ. ಕಕ್ಷೆ ಸೇರುವಲ್ಲಿ ಯಶಸ್ವಿಯಾಯಿತು ಹಾಗೂ ಅದೇ ದಿನ ಚಂದ್ರನ ಕಕ್ಷೆಯಿಂದ ಚಂದ್ರ ಕಾಣುವ ಪರಿಯನ್ನು ಒಂದು ವಿಡಿಯೋ ಮೂಲಕ ಭೂಮಿಗೆ ಕಳುಹಿಸಿಕೊಟ್ಟಿತು.
ಆಗಸ್ಟ್ 9 ರಂದು ನೌಕೆಯ ಎತ್ತರವನ್ನು 174 ಕಿ.ಮೀ. x 1437 ಕಿ.ಮೀ.ನ ಅಂಡಾಕಾರದ ಕಕ್ಷೆಗೆ ಹೊಂದುವಂತೆ ಇಳಿಸಲಾಯಿತು.
ಆಗಸ್ಟ್ 14 ರಂದು 151 ಕಿ.ಮೀ. x 17ಕಿ.ಮೀ. ಎತ್ತರದ ಕಕ್ಷೆಗೆ ನೌಕೆಯನ್ನು ಇಳಿಸಲಾಯಿತು.
ಆಗಸ್ಟ್ 16 ರಂದು ಬಾಹ್ಯಾಕಾಶ ನೌಕೆಯನ್ನು 153 ಕಿ.ಮೀ. x 163 ಕಿ.ಮೀ. ಕಕ್ಷೆಗೆ ತರಲಾಯಿತು.
ಆಗಸ್ಟ್ 17ರಂದು ಲ್ಯಾಂಡರ್ ಮಾಡ್ಯೂಲ್ ಪ್ರೊಪಲ್‌ಷನ್ ಮಾಡ್ಯೂಲ್‌ನಿಂದ ಯಶಸ್ವಿಯಾಗಿ ಬೇರ್ಪಟ್ಟಿತು.

ಡಿಬೂಸ್ಟಿಂಗ್ :

ಆಗಸ್ಟ್ 18 ಕ್ಕೆ ನೌಕೆಯ ಮೊದಲನೇ ಹಂತದ ಬ್ರೇಕಿಂಗ್ ಕಾರ್ಯವನ್ನು (Deboosting) ಪ್ರಾರಂಭಿಸಲಾಯಿತು.
ಆಗಸ್ಟ್ 19 ರ ಅಂತ್ಯಕ್ಕೆ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಸುತ್ತ 113 ಕಿ.ಮೀ. x 157ಕಿ.ಮೀ. ಕಕ್ಷೆಗೆ ಸೇರಿತು.
ಆಗಸ್ಟ್ 20 ರಂದು ಎರಡನೇ ಹಂತದ ಡಿ ಬೂಸ್ಟಿಂಗ್ ಪ್ರಕ್ರಿಯೆ ಪ್ರಾರಂಭಿಸಲಾಯಿತು ಹಾಗೂ ಅಂದು ನೌಕೆಯು 25 ಕಿ.ಮೀ. x 134 ಕಿ.ಮೀ. ಕಕ್ಷೆಯ ಸಮೀಪಕ್ಕೆ ಬಂದು ತಲುಪಿತು.

ವಿಕ್ರ (ಲ್ಯಾಂಡರ್) ಸಾಫ್ಟ್ ಲ್ಯಾಂಡಿಂಗ್ :
ಆಗಸ್ಟ್ 23ರಂದು ಕೊನೆಯದಾಗಿ ವಿಕ್ರಮನನ್ನು (ಲ್ಯಾಂಡರ್) ತನ್ನ ಕೊನೆಯ ಹಂತದ ಕಾರ್ಯಕ್ಕೆ ಸಜ್ಜಾಗೊಳಿಸಿ, ಸಂಜೆ 5.45 ರ ಸಮಯಕ್ಕೆ ತನ್ನ ವೇಗವನ್ನು ಹಂತ-ಹಂತವಾಗಿ ನಿಯಂತ್ರಿಸುತ್ತಾ ಚಂದ್ರನ ಮೇಲೆ ಇಳಿಸುವ ಕಾರ್ಯ ಪ್ರಾರಂಭವಾಯಿತು. ಇದೇ ಹಂತದಲ್ಲಿ ಕಳೆದ ಬಾರಿ ಆದ ತಪ್ಪು ಪುನರಾವರ್ತನೆಯಾಗದಂತೆ ತುಂಬಾ ಜಾಗರೂಕತೆಯಿಂದ ಚಂದ್ರನ ನೆಲದ ಮೇಲೆ ಇಳಿಸುವ ಪ್ರಕ್ರಿಯೆ ಪ್ರಾರಂಭಿಸಿ, ಪಾದ ಊರುವ ಕೊನೆಯ ಹಂತದವರೆಗೂ ತುಂಬಾ ಸ್ಥಿತಪ್ರಜ್ಞನಾಗಿ ವೇಗವನ್ನು ಅತ್ಯಂತ ಹತೋಟಿಯಲ್ಲಿಟ್ಟುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಯಿತು.

ಚಂದ್ರನ ಸಮೀಪ ಬಂದಾಗ ವಿಕ್ರಮ್‌ನ ಸಮತಲ ವೇಗವು 0.5m/s ಗಿಂತಲೂ ಕಡಿಮೆ ಇರಬೇಕು ಹಾಗೂ ಲಂಬ ವೇಗವು 2 m/s ಗಿಂತಲೂ ಕಡಿಮೆ ಇರಬೇಕು ಎಂಬುದು ISRO ಆಶಯವಾಗಿತ್ತು. ಈ ಎಲ್ಲಾ ಒತ್ತಡಗಳ ನಡುವೆ ISRO ನೀಡಿದ್ದ ಸಂದೇಶಕ್ಕಿಂತಲೂ ಕಡಿಮೆ ಪ್ರಮಾಣದ ವೇಗವನ್ನು ವಿಕ್ರಮ್ ಪಡೆದುಕೊಂಡು ಕೊನೆಗೂ ಛಲ ಬಿಡದ ತ್ರಿವಿಕ್ರಮನಂತೆ ಒಂದು ಮಹತ್ತರ ಜವಾಬ್ದಾರಿಯನ್ನು ಸಂಜೆ 6.04ರ ಸುಮಾರಿಗೆ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಯಿತು.

ಜೈ ವಿಜ್ಞಾನ – ಜೈ ಇಸ್ರೊ ವಿಜಯೋತ್ಸವ
ಭರತ ಖಂಡದ ಮೇಲೆ ವಿಕ್ರಮನ ಈ ಸಾಹಸಗಾಥೆಯನ್ನು ಉಸಿರು ಬಿಗಿ ಹಿಡಿದು ನೋಡುತ್ತಿದ್ದ ಭಾರತೀಯರೆಲ್ಲರ ನರ-ನಾಡಿಗಳಲ್ಲೂ ವಿಜಯೋತ್ಸವದ ಮಿಂಚಿನ ಸಂಚಾರವಾಗಿ ಹಷೋದ್ಗಾರ ಮುಗಿಲು ಮುಟ್ಟಿತು. ಜೈ ಇಸ್ರೊ ಮತ್ತು ಜೈ ವಿಜ್ಞಾನ್ ಘೋಷಣೆ ಮೊಳಗಿದವು. ಭಾರತದ ಮೂಲೆ ?ಮೂಲೆಗಳಿಂದ ಮಾತ್ರವಲ್ಲದೆ ಇತರೆ ದೇಶಗಳು ಭಾರತದ ವೈಜ್ಞಾನಿಕ ರಂಗದ ಈ ಸಾಧನೆಗೆ ತಲೆ ಬಾಗಿದವು, ಅಭಿನಂದಿಸಿದವು.

14ದಿನಗಳ ಕಾಯಕಲ್ಪ :
ಮುಂದಿನ ಹಂತದಲ್ಲಿ ತನ್ನೊಳಗೆ ಅಡಗಿಸಿ ಇಟ್ಟುಕೊಂಡಿದ್ದ ಪ್ರಜ್ಞಾನ್ ಎಂಬ ರೋವರ್ ಅನ್ನು ಚಂದ್ರನ ನೆಲದ ಮೇಲೆ ಇಳಿಸಿ, ಸಮಯವನ್ನು ವ್ಯರ್ಥ ಮಾಡದೇ ಕೆಲಸವನ್ನು ಮಾಡಲು ಪ್ರಾರಂಭಿಸಿತು. ಗುರಿ ತಲುಪಿದ ಖಾತರಿಗಾಗಿ ಕಳುಹಿಸಬೇಕಾಗಿದ್ದ ಸಂದೇಶ I reached my destination and you too! ಪಡೆದುಕೊಳ್ಳುವಲ್ಲಿ ISRO ಯಶಸ್ವಿಯಾಯಿತು. ವಿಕ್ರಂ ಹಾಗೂ ಪ್ರಜ್ಞಾನ್‌ಗೆ ವಹಿಸಿದ ಜವಾಬ್ದಾರಿಯನ್ನು ಅವುಗಳಲ್ಲಿ ಅಳವಡಿಸಿದ ಕೆಲವು ಉಪಕರಣಗಳ ಮೂಲಕ ಹೇಗೆ ನಿರ್ವಹಿಸಲಿದೆ? ಎಂಬುದರ ಕುರಿತು ಬೆಳಕು ಚೆಲ್ಲುವುದರ ಮೂಲಕ ಕುತೂಹಲ ತಣಿಸುವ ಇನ್ನು ಕೆಲವು ಮಾಹಿತಿಗಳು :
ವಿಕ್ರಂ (ಲ್ಯಾಂಡರ್):
• I L S A: ವಿಕ್ರಂ ಲ್ಯಾಂಡರ್ನನಲ್ಲಿ ಅಳವಡಿಸಿರುವ ಚಂದ್ರನ ಭೂಕಂಪನ ಚಟುವಟಿಕೆಯ ಉಪಕರಣವು ಲ್ಯಾಂಡಿಂಗ್ ಜಾಗದ ಸುತ್ತಲೂ ಭೂಕಂಪನವನ್ನು ಅಳೆಯಲು ಮತ್ತು ಚಂದ್ರನ ಹೊರಪದರ ಮತ್ತು ಮೇಲ್ಮೈನ ರಚನೆಯನ್ನು ತಿಳಿಸಿಕೊಡುತ್ತದೆ.

ChaSTE : ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಮೇಲ್ಮೈಯ ಉಷ್ಣಾಂಶದ ಗುಣಲಕ್ಷಣಗಳನ್ನು ಮಾಪನ ಮಾಡಲು Chandra’s Surface Thermo physical Experiment ಎಂಬ ಉಷ್ಣ ಸಂವೇದಕಗಳುಳ್ಳ ಉಪಕರಣವನ್ನು ಅಳವಡಿಸಲಾಗಿದೆ.
? • RAMBHA : ಚಂದ್ರನ ಮೇಲ್ಮೈ ಸಮೀಪದ ಪ್ಲಾಸ್ಮಾದ (ಅಯಾನುಗಳು ಮತ್ತು ಎಲೆಕ್ಟ್ರಾನ್‌ಗಳು) ಸಾಂದ್ರತೆ ಮತ್ತು ಸಮಯದೊಂದಿಗೆ ಅದರ ಬದಲಾವಣೆಗಳನ್ನು ಅಳೆಯಲು Radio Anatomy of Moon Bound Hypersensitive ionosphere and Atmosphere ಎಂಬ ಉಪಕರಣವನ್ನು ವಿಕ್ರಂನಲ್ಲಿ ಅಳವಡಿಸಲಾಗಿದೆ.
?• L R A : ವಿಕ್ರಂ ಲ್ಯಾಂಡರ್‌ನಲ್ಲಿ ಅಳವಡಿಸಿರುವ Laser Retroreflector Array ಎಂಬ ಉಪಕರಣವನ್ನು ಚಂದ್ರನ ಮತ್ತು ನಮ್ಮ ಲ್ಯಾಂಡರ್ ಉಪಕರಣದ ಚಲನವಲನಗಳ ಬಗ್ಗೆ ಮಾಹಿತಿ ನೀಡುತ್ತದೆ.

ಪ್ರಜ್ಞಾನ್ (ರೋವರ್) :

  1. ಪ್ರಜ್ಞಾನ್‌ನ ಹೆಜ್ಜೆ ಗುರುತುಗಳು : ಇದಕ್ಕೆ ಅಳವಡಿಸಿರುವ ಎರಡು ಚಕ್ರಗಳನ್ನು ತಯಾರಿಸುವಾಗ ಚಕ್ರದ ಮೇಲೆ ರಾಷ್ಟ್ರ ಸಂಕೇತವಾದ ಅಶೋಕಸ್ಥಂಬ ಹಾಗೂ ಇಸ್ರೋ ಸಂಸ್ಥೆಯ ಲೋಗೋ ಅನ್ನು ಮುದ್ರಿಸಲಾಗಿದೆ. ರೋವರ್ ಚಂದ್ರನ ಮೇಲೆ ಚಲಿಸಿದ ಕಡೆಗಳೆಲೆಲ್ಲಾ ಚಂದ್ರನ ಮೇಲ್ಮೈನಲ್ಲಿ ಅದರ ಮುದ್ರೆಗಳು ಅಚ್ಚೊತ್ತಲಿವೆ ಹಾಗೂ ಈ ಅಚ್ಚುಗಳು ಶಾಶ್ವತಾಗಿ ಉಳಿಯಲಿವೆ. ಕಾರಣ ಅಲ್ಲಿನ ವಾತಾವರಣದಲ್ಲಿ ಗಾಳಿ ಇಲ್ಲ. ಹಾಗಾಗಿ ಯಾವುದೇ ಧೂಳು ಅದನ್ನು ಮುಚ್ಚುವುದಿಲ್ಲ. ಉದಾಹರಣೆಗೆ ಮನುಷ್ಯ / ಪ್ರಾಣಿಗಳು ತೇವಾಂಶಯುಕ್ತ ನೆಲದ ಮೇಲೆ ಪಾದ ಊರಿದಾಗ ತನ್ನ ಪಾದದ ಗುರುತು ಮೂಡಿಸಿದಂತೆ ಅಚ್ಚೊತ್ತಲಿದೆ. ೨. ಸೌರಕೋಶ : ರೋವರ್ ವಿಕ್ರಂನಿಂದ ಆಚೆ ಬಂದ ತಕ್ಷಣ ಅದರ ಮೇಲ್ಮೈ ಮೇಲೆ ಅಳವಡಿಸಿರುವ ಸೌರಕೋಶದ ಫಲಕಗಳು ಸೂರ್ಯನ ಬೆಳಕಿಗೆ ತೆರೆದುಕೊಳ್ಳಲಿದೆ. ಮನುಷ್ಯನಿಗೆ ಆಹಾರದ ಅವಶ್ಯವಿದ್ದಂತೆ ರೋವರ್‌ನ ಚಟುವಟಿಕೆಗೆ ಬೇಕಾಗಿರುವ ಶಕ್ತಿಯನ್ನು ಆ ಫಲಕಗಳು ಒದಗಿಸಲಿವೆ. ಸೂರ್ಯನ ಬೆಳಕನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿ, ರೋವರ್‌ನ ವಿದ್ಯುತ್ ಮಂಡಲಕ್ಕೆ (electric circuit) ಬೇಕಾದ ವಿದ್ಯುತ್ ಪ್ರವಾಹ (current) ಅನ್ನು ಒದಗಿಸಿಕೊಡಲಿದೆ. ೩. ರೋವರ್‌ನ ಜೀವಿತಾವಧಿ 14 ದಿನ : ಯಾವುದೇ ಆಕಾಶಕಾಯದಲ್ಲಿ ಹಗಲು ಮತ್ತು ರಾತ್ರಿ ಸಂಭವಿಸಲು ಕಾರಣ ಆ ಕಾಯವು ತನ್ನ ಅಕ್ಷದ ಮೇಲೆ ತಾನೇ ಗಿರಿಕಿ ಹೊಡೆಯುವುದರ ಜೊತೆಗೆ ಸೂರ್ಯನ ಸುತ್ತಲೂ ತಿರುಗುವುದು. ಭೂಮಿಯ ತನ್ನ ಅಕ್ಷದ ಮೇಲೆ ಒಂದು ಸುತ್ತು ತಿರುಗಲು ಒಂದು ದಿನ ಸಮಯ ತೆಗೆದುಕೊಳ್ಳುವುದರಿಂದ ನಮಗೆ ಸರಿಸುಮಾರು ೧೨ ಗಂಟೆ ಹಗಲು ಮತ್ತು 12 ಗಂಟೆ ಕತ್ತಲು ಇರುತ್ತದೆ. ಆದರೆ ಚಂದ್ರ ತನ್ನ ಅಕ್ಷದ ಮೇಲೆ ಸುತ್ತಲೂ 29 ದಿನ ಸಮಯ ತೆಗೆದುಕೊಳ್ಳುವುದರಿಂದ ಸತತವಾಗಿ 14.5 ದಿನ ಹಗಲು ಮತ್ತು ಸತತವಾಗಿ 14.5 ದಿನ ಕತ್ತಲು ಆವರಿಸಿರುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಹಗಲು ಮತ್ತು ರಾತ್ರಿಯ ಮಾದರಿಯಲ್ಲಿ ಭೂಮಿಗೂ ಮತ್ತು ಚಂದ್ರನಿಗೂ ಇರುವ ವ್ಯತ್ಯಾಸವೆಂದರೆ ಚಂದಿರನ ಒಂದು ಹಗಲು = ಭೂಮಿಯ 24 ಗಂಟೆ ಘಿ 14.5 ದಿನಕ್ಕೆ ಸಮ. ಆದರೆ ಭೂಮಿಗಿಂತಲೂ ಅತ್ಯಂತ ಹೆಚ್ಚಿನ ಉಷ್ಣಾಂಶ ಹೊಂದಿರುತ್ತದೆ.ಮತ್ತು ಚಂದಿರನ ಒಂದು ರಾತ್ರಿ = ಭೂಮಿಯ 24 ಗಂಟೆ ಘಿ 14.5 ದಿನಕ್ಕೆ ಸಮ. ಆದರೆ ಭೂಮಿಗಿಂತಲೂ ಅತ್ಯಂತ ಕಡಿಮೆ ಉಷ್ಣಾಂಶ ಅಂದರೆ ಮೈನಸ್ 250 ರಿಂದ 240 ಡಿಗ್ರಿ ಎಂಬ ಅಂದಾಜಿದೆ. 14 ದಿನದ ನಂತರ ರೋವರ್‌ಗೆ ಹಗಲು ಇಲ್ಲದೆ ಇರುವ ಕಾರಣ ಸೂರ್ಯನ ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಿಕೊಳ್ಳುವ ಅವಕಾಶ ತಪ್ಪುವುದರಿಂದ ತನ್ನ ಕಾರ್ಯವನ್ನು ಸ್ಥಗಿತಗೊಳಿಸಲಿದೆ ಎಂಬುದೇ ಬೇಸರ. ೪. ಕ್ಯಾಮರಾ ಕಣ್ಗಾವಲು :ರೋವರ್‌ಗೆ ಅಳವಡಿಸಲಾಗಿರುವ ಕ್ಯಾಮೆರಾಗಳುಮನುಷ್ಯನ ಕಣ್ಣುಗಳಂತೆ ರೋವರ್ ಚಲಿಸಲು ದಿಕ್ಕುಸೂಚಕಗಳಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಚಂದ್ರನ ಮೇಲ್ಮೈಯನ್ನು ಚಿತ್ರೀಕರಿಸುವುದಕ್ಕೆ ಸಹಕಾರಿಯಾಗಲಿದೆ.
    1. L I B S : ಮನುಷ್ಯಆಹಾರವನ್ನು ಸೇವಿಸಿದಾಗ ನಾಲಿಗೆಯು ರುಚಿಯನ್ನು ಗ್ರಹಿಸಿ ಅದರಲ್ಲಿ ಬಳಸಲಾದ ಪದಾರ್ಥಗಳನ್ನು ಕಂಡು ಹಿಡಿಯುವಂತೆ ರೋವರ್‌ನಲ್ಲಿ ಅಳವಡಿಸಿರುವ ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ಎಂಬ ಉಪಕರಣವು ಚಂದ್ರನ ನೆಲದಲ್ಲಿರುವ ಮಣ್ಣನ್ನು ಹೆಕ್ಕಿ ತೆಗೆದು ಪರೀಕ್ಷಿಸಿ ಆ ಮಣ್ಣಿನಲ್ಲಿ ಇರುವ ರಾಸಾಯನಿಕ ಧಾತುಗಳ ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಶ್ಲೇಷಣೆ ಮಾಡಿ ಮತ್ತು ಖನಿಜ ಸಂಯೋಜನೆಯ್ನನು ಊಹಿಸಿ ಚಂದ್ರನ ಮೇಲ್ಮೈನ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.
  2. A P X S :ರೋವರ್‌ನಲ್ಲಿ ಅಳವಡಿಸಲಾದ ಆಲ್ಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಮೀಟರ್ ಎಂಬ ಮತ್ತೊಂದು ಉಪಕರಣವು ಚಂದ್ರನ ಲ್ಯಾಂಡಿಂಗ್ ಜಾಗದ ಸುತ್ತಲೂ ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು (Mg, Al, Si, K, Ca, Ti, Fe) ನಿರ್ಧರಿಸುತ್ತದೆ. ಮತ್ತು ಅದರ ಬಗ್ಗೆ ಮಾಹಿತಿ ನೀಡುತ್ತದೆ.

ವೈಜ್ಞಾನಿಕವಾಗಿ ಅಸಾಮಾನ್ಯ ಸಾಧನೆ ಮಾಡಿರುವ ದೈತ್ಯ ರಾಷ್ಟ್ರಗಳು ಬೆಚ್ಚಿ ಬೀಳುವಂತೆ ಹಾಗೂ ಇಡೀ ವಿಶ್ವವೇ ಬೆರಗಾಗುವಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿತವಾಗಿರುವ ಚಂದ್ರಯಾನದಲ್ಲಿರುವ ರೋವರ್ ಪ್ರಸ್ತುತ ಸೌರಶಕ್ತಿ ಬಳಸಿಕೊಂಡು ತನ್ನ ಕಾರ್ಯ ನಿರ್ವಹಿಸುತ್ತಿದೆ. ಆದರೆ 14 ದಿನಗಳ ನಂತರದಲ್ಲಿ ಮೈನಸ್ 280 ಡಿಗ್ರಿಯಲ್ಲಿ ಅದು ಕಾರ್ಯಾಚರಣೆ ಮಾಡಲಿದೆಯೇ ಎಂಬುದೇ ಸವಾಲು? ಒಂದೊಮ್ಮೆ ಈ ಸವಾಲನ್ನು ರೋವರ್ ಮೆಟ್ಟಿ ನಿಂತರೆ… ಅದು ವೈಜ್ಞಾನಿಕ ಸೂಜಿಗ !!!
ಸೆಪ್ಟೆಂಬರ್ 2 ರಂದು ಉಡ್ಡಾವಣೆಗೆ ಸಿದ್ಧವಾಗಿರುವ ಸೂರ್ಯಯಾನ (Adithya-1) , ಇನ್ನಷ್ಟು ನೀರಿಕ್ಷೆಗಳನ್ನು ISRO ಬಗ್ಗೆ ಹುಟ್ಟಿಸಲಿ ಎಂದು ಆಶಿಸುತ್ತೇನೆ.
(ದತ್ತಾಂಶ ಹಾಗೂ ಉಪಕರಣಗಳ ಮಾಹಿತಿ ಕೃಪೆ : ಇಸ್ರೋ)

ಶ್ರೀಧರ್ ಬೆಳವಳ್ಳಿ
ಹಿರಿಯ ಉಪನ್ಯಾಸಕರು, ಭೌತಶಾಸ್ತ್ರ ವಿಭಾಗ,
ಡಿವಿಎಸ್ ಪದವಿ ಪೂರ್ವ (ಸ್ವತಂತ್ರ) ಕಾಲೇಜು, ಶಿವಮೊಗ್ಗ
ಮೊಬೈಲ್ : 70902 70901
ಇಮೇಲ್ ಐಡಿ :: inform2shree@gmail.com

By admin

ನಿಮ್ಮದೊಂದು ಉತ್ತರ

You missed

error: Content is protected !!