ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿ ಜಾರಿದ್ದು, ರೈತರ ಸಮಸ್ಯೆಗೆ ಸ್ಪಂದಿಸುವ ಕಾರ್ಯ ಮಾಡುತ್ತಿಲ್ಲ’ ಎಂದು ಶಾಸಕ ಬಿ.ವೈ.ವಿಜ ಯೇಂದ್ರ ಟೀಕಿಸಿದರು.


ಶಿಕಾರಿಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.


’ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಮೆಕ್ಕೆಜೋಳ ಬೆಳೆ ಸಂಪೂರ್ಣ ಹಾಳಾಗಿದೆ. ಶೇ ೪೦ರಷ್ಟು ರೈತರು ಮಾತ್ರ ರೈತರು ಭತ್ತ ನಾಟಿ ಮಾಡಿದ್ದಾರೆ. ಆದರೆ ಶೇ ೬೦ರಷ್ಟು ರೈತರು ಭತ್ತ ನಾಟಿ ಕಾರ್ಯ ಮಾಡಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಶಿಕಾರಿಪುರ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು.

ಮೆಕ್ಕೆಜೋಳ ಬೆಳೆದ ರೈತರಿಗೆ ಮಧ್ಯಂತರ ಬೆಳೆ ವಿಮೆ ನೀಡಬೇಕು. ರೈತರ ಪಂಪ್‌ಸೆಟ್‌ಗಳಿಗೆ ೮ ಗಂಟೆ ವಿದ್ಯುತ್ ನೀಡಬೇಕು. ಏತ ನೀರಾವರಿ ಯೋಜನೆ ಮೂಲಕ ತಾಲ್ಲೂಕಿನ ಕೆರೆಗಳನ್ನು ತುಂಬಿಸಲು ವಿದ್ಯುತ್ ನೀಡಬೇಕು’ ಎಂದು ಒತ್ತಾಯಿಸಿದರು.


’ರಾಜ್ಯದ ಹಲವು ತಾಲ್ಲೂಕುಗಳಲ್ಲಿ ಮಳೆ ಬಾರದೇ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ರಾಜ್ಯ ಸರ್ಕಾರ ಬರಗಾಲಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಧಿಕಾರಕ್ಕೆ ಬಂದು ೩ ತಿಂಗಳಾದರೂ ರೈತರ ಪರವಾದ ಯೋಜನೆ ನೀಡಿಲ್ಲ. ರೈತರ ಬಗ್ಗೆ ಕಾಳಜಿ ಹೊಂದಿಲ್ಲ. ಕೇಂದ್ರ ಸರ್ಕಾರವನ್ನು ರೈತ ವಿರೋಧಿ ಎಂದು ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್ ನಾಯಕರಿಗೆ ಇಲ್ಲ’ ಎಂದು ದೂರಿದರು.


’ರಾಜ್ಯ ಸರ್ಕಾರ ರೈತರ ಪರ ಆಡಳಿತ ನಡೆಸದೇ ಆಪರೇಷನ್ ಹಸ್ತ ಮಾಡಲು ಹೋರಾಟಿದೆ. ಸರ್ಕಾರ ನೀಡಿರುವ ೫ ಗ್ಯಾರಂಟಿ ಯೋಜನೆ ಬಗ್ಗೆ ನಮ್ಮ ವಿರೋ ಧವಿಲ್ಲ. ಆದರೆ, ವೈಜ್ಞಾನಿಕ ತಳಹದಿ ಇಲ್ಲದೇ ಆರ್ಥಿಕ ದಿವಾಳಿತದ ದಿಕ್ಕಿನಲ್ಲಿ ರಾಜ್ಯವನ್ನು ಕೊಂಡೊಯ್ಯುತ್ತಿದೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಗುಂಪು, ಡಿ.ಕೆ. ಶಿವಕುಮಾರ್ ಗುಂಪು ಹಾಗೂ ಪರಮೇಶ್ವರ ಗುಂಪು ಎಂದು ಗುಂಪು ರಾಜಕಾರಣದಲ್ಲಿ ತೊಡಗಿದ್ದಾರೆ’ ಎಂದು ರಾಜ್ಯ ಉಗ್ರಾಣ ನಿಗಮ ಮಾಜಿ ಅಧ್ಯಕ್ಷ ಎಚ್.ಟಿ. ಬಳಿಗಾರ್ ಟೀಕಿಸಿದರು.
ತಾಲ್ಲೂಕು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಪ್ರೇಮ್ ಕುಮಾರ್ ಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಕೆ.ಎಸ್. ಗುರುಮೂರ್ತಿ, ಕೊಳಗಿ ರೇವಣಪ್ಪ, ಭದ್ರಾಪುರ ಹಾಲಪ್ಪ, ವೀರೇಂದ್ರಪಾಟೀಲ್, ತೊಗರ್ಸಿ ಸಣ್ಣಹನುಮಂತಪ್ಪ, ಅಗಡಿ ಅಶೋಕ್, ಚುರ್ಚಿಗುಂಡಿ ಶಶಿಧರ್, ಟಿ.ಎಸ್. ಮೋಹನ್ ಇತರರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!