ಶಿವಮೊಗ್ಗ, ಆ28
ರಾಜಕಾರಣದಲ್ಲಿ ಬದಲಾವಣೆಗಳು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿ ಇಂದು ಸದಸ್ಯತ್ವ ಪಡೆದಿದ್ದೇನೆ. ಪಕ್ಷವನ್ನು ಗಟ್ಟಿಗೊಳಿಸುವುದು ನನ್ನ ಮುಖ್ಯ ಉದ್ದೇಶ ಎಂದು ಕಾಂಗ್ರೆಸ್ ಪಕ್ಷ ಸೇರಿದ ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದುಕೊಂಡು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಮುಖರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ದೇನೆ. ಇದು ನನಗೆ ಹಳೆಯ ದಾರಿ. ಹೊಸ ಪಯಣ ಅಷ್ಟೆ. ನನ್ನ ಬರುವಿಕೆ ಕೇವಲ ಸುದ್ದಿಯಾಗಬಾರದು. ಅದು ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು. ಮುಂಬರುವ ಎಲ್ಲಾ ಚುನಾವಣೆಗಳಲ್ಲೂ ಪಕ್ಷಕ್ಕೆ ಗೆಲುವು ತರುವ ನಿಟ್ಟಿನಲ್ಲಿ ನಾನು ಮತ್ತು ನನ್ನೊಂದಿಗೆ ಪಕ್ಷ ಸೇರಿದ ಗೆಳೆಯರು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಢುತ್ತೇವೆ ಎಂದರು.
ಕಾಂಗ್ರೆಸ್ ಈಗಾಗಲೇ ಬಡವರಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಕಾರ್ಮಿ ಕರು, ಶೋಷಿತರ ಪರವಾಗಿ ಕೆಲಸ ಮಾಡುತ್ತಿದೆ. ಈ ಎಲ್ಲಾ ಯೋಜನೆಗಳು ಪರಿಪೂರ್ಣವಾಗಿ ಜಾರಿಯಾ ಗಲು ಮತ್ತು ಶಿವಮೊಗ್ಗದಲ್ಲಿ ಶಾಂತಿ ಕಾಪಾಡಲು ಹೋರಾಟ ನಡೆಸುತ್ತೇವೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದ ರೇಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಗಳನ್ನು ಮೆಚ್ಚಿ ಶರತ್ತುಗಳಿಲ್ಲದೆ ಬರುವವರಿಗೆ ನಾವು ಸ್ವಾಗತಿಸುತ್ತೇವೆ. ಆಯನೂರು ಮಂಜುನಾಥ್ ವಿಧಾನಸಭೆ, ವಿಧಾನ ಪರಿಷತ್, ಲೋಕಸಭೆ, ರಾಜ್ಯಸಭೆಗಳಲ್ಲಿ ಪ್ರತಿನಿಧಿಸಿದ್ದವರು. ಸಾಕಷ್ಟು ರಾಜಕೀಯ ಅನುಭವ ಅವರಿಗಿದೆ. ಅವರನ್ನು ನಾವು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತೇವೆ. ಅವರು ಕಾಂಗ್ರೆಸ್ಸಿಗೆ ಶಕ್ತಿಯಾಗಲಿ ಎಂದರು.
ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಬಿಜೆಪಿಯ ಕೆಲವರು ಆಪರೇಷನ್ ಹಸ್ತ ಎನ್ನತ್ತಾರೆ. ಆದರೆ ಇದು ಸುಳ್ಳು. ನಮ್ಮ ಪಕ್ಷಕ್ಕೆ ಬಹುಮತವಿದೆ. ಯಾರನ್ನೂ ಕರೆದುಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ಬಿಜೆಪಿಯವರು ಮಾಡಿದ್ದೇ ಬೇರೆ. ಬಹುಮತವಿಲ್ಲ ಎಂದು ಶಾಸಕರಾಗಿದ್ದವರನ್ನು ರಾಜೀನಾಮೆ ಕೊಡಿಸಿ ಆಮಿಷ ತೋರಿಸಿ ಪಕ್ಷಕ್ಕೆ ಸೇರಿಸಿಕೊಂಡರು. ಅದು ಆಪರೇಷನ್ ಕಮಲ. ಆದರೆ ಕಾಂಗ್ರೆಸ್ಗೆ ಆ ಅವಶ್ಯಕತೆ ಇಲ್ಲ ಎಂದ ಅವರು, ಆಯನೂರು ತಮ್ಮ ಅನುಭವ ಹಾಗೂ ರಾಜಕೀಯ ಶಕ್ತಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಧಾರೆ ಎರೆಯಲಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಎಸ್.ಕೆ.ಮರಿಯಪ್ಪ, ಎಸ್.ಪಿ. ಶೇಷಾದ್ರಿ, ಕಲಗೋಡು ರತ್ನಾಕರ್, ಕಲೀಂ ಪಾಶಾ, ವೈ.ಹೆಚ್. ನಾಗರಾಜ್. ಎಸ್.ಪಿ.ಶೇಷಾದ್ರಿ, ಇಕ್ಕೇರಿ ರಮೇಶ್, ಶಿ.ಜು. ಪಾಶಾ, ಜಿ. ಪದ್ಮನಾಭ್ (ಪದ್ದಣ್ಣ) ಹಿರಣ್ಣಯ್ಯ, ಪ್ರಮೋದ್, ರಿಯಾಜ್ ಅಹ್ಮದ್, ಸಯ್ಯದ್ ವಾಹೀದ್ ಅಡ್ಡು, ಚಂದ್ರಶೇಖರ್, ಐಡಿಯಲ್ ಗೋಪಿ ಇತರರಿದ್ದರು.