ಕಾರ್ತಿಕ ಮಾಸದಲ್ಲಿ ಆಚರಿಸುವಂತಹ ವಿಶೇಷ ಆಚರಣೆಗಳಲ್ಲಿ ತುಳಸಿ ಪೂಜೆಯೂ ಒಂದು. ಇದನ್ನು ಆಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ, ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ತಾನ ದ್ವಾದಶಿ ಎಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಹಿಂದೂಗಳು ಮನೆ ಮುಂದಿರುವ ತುಳಸಿ ಕಟ್ಟೆಯನ್ನು ಅಲಂಕರಿಸಿ, ಪ್ರತಿದಿನ ಮುಂಜಾನೆ ತುಳಸಿಯ ಮುಂದೆ ರಂಗೋಲಿ ಇಡುವುದು, ತುಳಿಸಿ ದೇವಿಗೆ ಮೊದಲು ನೀರೆರೆದು ದಿನವನ್ನು ಪ್ರಾರಂಭಿಸುವುದು ಎಂದರೆ ಮಹಿಳೆಯರಿಗೆ ಏನೋ ಒಂದು ಬಗೆಯ ಸಂಭ್ರಮ, ಸಡಗರ, ಈ ದಿನದ ವಿಶೇಷ ಬಾಳೆದಿಂಡಿಟ್ಟು, ಹಸಿರಿನ ಮಾವಿನ ಎಲೆ, ಚಂಡು ಹೂಗಳಿಂದ ಅಲಂಕೃತವಾದ ತುಳಸಿ ನೈಜ ವಧು ವಂತೇ ಕಂಗೊಳಿಸುತ್ತಾಳೆ.
ಸಾಮಾನ್ಯವಾಗಿ ಮುತ್ತೈದೆಯರು ಅಥವಾ ಯುವತಿಯರು ತುಳಸಿಯನ್ನು ಪೂಜಿಸುತ್ತಾರೆ. ನಿತ್ಯವೂ ಮನೆಯ ಹೊರಗಿನಿಂದಲೇ ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ ಮನೆ ಮಂದಿಗೆ ನೆಮ್ಮದಿಯನ್ನು ನೀಡುವ ತಾಯಿ ತುಳಸಿ ದೇವಿ. ಶಕ್ತಿಯನ್ನು ಮತ್ತು ಪಾವಿತ್ರತೆಯನ್ನು ಸಂಕೇತಿಸುವ ತುಳಿಸಿ ದೇವಿ ಮನೆಗೆ ಸಮೃದ್ಧಿಯನ್ನು ತರುವ ತಾಯಿ. ಈ ತಾಯಿ ಭಗವಾನ್ ವಿಷ್ಣುವನ್ನು ವಿವಾಹವಾದ ದಿನವನ್ನು ತುಳಿಸಿ ಆಯನ ಎಂದು ಆಚರಿಸಲಾಗುವುದು.ಆ ಸುದಿನದ ಸಂಕೇತವಾಗಿ ಭಕ್ತರು ಪ್ರತಿವರ್ಷವೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ತುಳಸಿ ವಿವಾಹದ ಹಬ್ಬವನ್ನು ಆಚರಿಸುತ್ತಾರೆ.
“ತುಳಸಿಯ ಮಹತ್ವ” ತುಳಸಿ ಎನ್ನುವುದು ಒಂದು ಪುಟ್ಟ ಔಷಧೀಯ ಗುಣವನ್ನು ಹೊಂದಿರುವ ಸಸ್ಯ. ಇದಕ್ಕೆ ಧಾರ್ಮಿಕವಾಗಿಯೂ ಅತ್ಯಂತ ಪವಿತ್ರ ಸ್ಥಾನವನ್ನು ನೀಡಲಾಗಿದೆ. ವಿಷ್ಣುವಿನ ಪತ್ನಿಯಾದ ತುಳಸಿ ಅತ್ಯಂತ ಶ್ರೇಷ್ಠ ಹಾಗೂ ಶಕ್ತಿಯನ್ನು ಹೊಂದಿರುವ ದೇವಿ ಎಂದು ಹೇಳಲಾಗುವುದು. ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯಿಂದ ಕೂಡಿರುವ ತುಳಸಿ ದಳವನ್ನು ಬಳಸದೆ ದೇವತಾ ಪೂಜಾ ಕಾರ್ಯಗಳು ಸಂಪನ್ನವಾಗುವುದಿಲ್ಲ, ವಿಷ್ಣು ದೇವರ ಪತ್ನಿಯಾದ ತುಳುಸಿಯೂ ಲಕ್ಷ್ಮಿ ದೇವಿಯ ಸಂಕೇತ ಎನ್ನುವ ನಂಬಿಕೆಯಿದೆ.ತುಳಿಸಿ ನೀರಿನ ಪ್ರೋಕ್ಷಣೆ ಅಥವಾ ಸಿಂಪಡಿಸುವುದರ ಮೂಲಕ ಮನೆಯನ್ನು ಹಾಗೂ ತುಳಸಿ ಕಟ್ಟೆಯನ್ನು ಶುದ್ಧ ಗೊಳಿಸಲಾಗುವುದು, ಒಂದು ಹನಿ ತುಳಿಸಿಯ ನೀರು ಅತ್ಯಂತ ಪವಿತ್ರ ಶಕ್ತಿಯನ್ನು ಒಳಗೊಂಡಿರುತ್ತದೆ. ವಿವಿಧ ಅನಾರೋಗ್ಯಗಳನ್ನು ಬಹು ಬೇಗ ನಿವಾರಿಸುವ ಶಕ್ತಿಯನ್ನು ತುಳಸಿ ಎಲೆಗಳು ಒಳಗೊಂಡಿವೆ.
“ತುಳಸಿ ಪೂಜಾ ವಿಧಾನ” ತುಳಸಿ ವಿವಾಹದ ಆಚರಣೆಯನ್ನು ಮನೆಯಲ್ಲಿರುವ ತುಳಸಿಕಟ್ಟೆಗೆ ಅಥವಾ ದೇವಾಲಯಗಳಲ್ಲೂ ಆಚರಿಸಬಹುದು, ಸಾಮಾನ್ಯವಾಗಿ ತುಳಸಿ ಹಬ್ಬದ ಪ್ರಯುಕ್ತ ಉಪವಾಸ ವ್ರತವನ್ನು ಕೈಗೊಳ್ಳಲಾಗುವುದು, ಈ ಉಪವಾಸ ಮುಂಜಾನೆಯಿಂದ ರಾತ್ರಿ ತುಳಸಿಯ ಪೂಜೆ ಸಂಪೂರ್ಣವಾಗುವ ತನಕ ಮುಂದುವರೆಯಬೇಕು.ತುಳಸಿ ಗಿಡಕ್ಕೆ ಮತ್ತು ವಿಷ್ಣು ದೇವರ ವಿಗ್ರಹಕ್ಕೆ ನೀರನ್ನು ಅರ್ಪಿಸಿ ಸ್ನಾನ ಮಾಡಿಸುವುದು, ಹೂವಿನ ಅಲಂಕಾರ, ವಿಶೇಷ ನೈವೇಧ್ಯ ಮತ್ತು ಹಣ್ಣು – ಹಂಪಲುಗಳನ್ನು ಇಟ್ತು ಪೂಜೆ ಮಾಡಲಾಗುವುದು. ತುಳಸಿ ಗಿಡಕ್ಕೆ ವಧುವಿನ ರೂಪದಂತೆ ಕೆಂಪು ಸೀರೆ, ಆಭರಣ, ಕೆಂಪು ಕುಂಕುಮ ದೊಂದಿಗೆ ಅಲಂಕರಿಸಲಾಗುತ್ತದೆ. ವಿಷ್ಣುವಿನ ವಿಗ್ರಹಕ್ಕೆ ಬಿಳಿಯ ಧೋತಿ ಅಥವಾ ಮಡಿ ಬಟ್ಟೆಯಿಂದ ಅಲಂಕರಿಸುವರು. ನಂತರ ದಾರಗಳಿಂದ ವಿಗ್ರಹ ಹಾಗೂ ತುಳಿಸಿಯ ಸುತ್ತಲೂ ಸುತ್ತುವರು. ಬಳಿಕ ವಿಶೇಷ ಮಂತ್ರ ಪ್ರಾರ್ಥನೆ ಮತ್ತು ಹಾಡು ಹೇಳುವುದರ ಮೂಲಕ ಪೂಜೆಯನ್ನು ಮಾಡಲಾಗುವುದು, ಮನೆಯ ಸದಸ್ಯರೆಲ್ಲರೂ ತುಳಿಸಿ ಮತ್ತು ವಿಷ್ಣುವಿಗೆ ಅಕ್ಷತೆ, ಕುಂಕುಮ ಮತ್ತು ಹೂವನ್ನು ಅರ್ಪಿಸಿ ನಮಸ್ಕರಿಸಬೇಕು. ಆಗ ಪೂಜೆಯು ಸಂಪೂರ್ಣವಾಗುವುದು.
” ಪೌರಾಣಿಕ ಹಿನ್ನೆಲೆ” ವೃಂದ ಎನ್ನುವವಳು ಮಹಾವಿಷ್ಣುವಿನ ಪರಮ ಭಕ್ತೆ ಯಾಗಿರುತ್ತಾಳೆ. ಈಕೆಯ ತಪೋ ಶಕ್ತಿಯಿಂದ ಮಹಾನ್ ಶಕ್ತಿಶಾಲಿಯಾದ ಪತಿ ರಾಕ್ಷಸ ಜಲಂದರ ಎಲ್ಲರಿಗೂ ಕಿರುಕುಳ ನೀಡುತ್ತಿರುತ್ತಾನೆ. ದಿನದಿಂದ ದಿನಕ್ಕೆ ಈತನ ಕಾಟ ಹೆಚ್ಚಾಗುತ್ತದೆ. ಇದನ್ನು ತಾಳಲಾರದ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ಜಲಂಧರನ ವೇಷಧರಿಸಿದ ವಿಷ್ಣು ವೃಂದಳ ಪಾವಿತ್ರತೆ ಶಕ್ತಿಯನ್ನು ಭಂಗ ಮಾಡಿದನಂತೆ, ಜಲಂಧರನು ರಣಭೂಮಿಯಲ್ಲಿ ಮಡಿದನಂತೆ , ವಿಷ್ಣುವಿಗೆ ಶಾಪ ನೀಡಿ ವೃಂದ ತನ್ನ ಪತಿಯ ಶವದೊಂದಿಗೆ ಭೂದಿಯಾದಳಂತೆ, ಮುಂದೆ ಆ ವೃಂದಳೆ ತುಳಿಸಿಯಾಗಿ ಪಾರ್ವತಿ ತಯಾರಿಸಿದ ಬೃಂದಾವನದಲ್ಲಿ ಹುಟ್ಟಿದಳಂತೆ.
ಇವಳು ರುಕ್ಮಿಣಿಯಾಗಿ ಜನ್ಮ ತಾಳಿ, ಕಾರ್ತಿಕ ಶುದ್ಧ ದ್ವಾದಶಿಯಂದು ಕೃಷ್ಣನನ್ನು ವರಿಸಿದಳೆಂಬ ಪ್ರತೀತಿಯೂ ಇದೆ. ಹಾಗಾಗಿ ತುಳಸಿಯೊಂದಿಗೆ ಕೃಷ್ಣನ ವಿಗ್ರಹವಿಟ್ಟು ಮದುವೆಯಂದೇ ಪೂಜಿಸಲಾಗುತ್ತದೆ. ಇಷ್ಟೆಲ್ಲಾ ಪೌರಾಣಿಕ ಹಿನ್ನೆಲೆ ಇರುವ ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳು ಇವೆ. ಕ್ರಿಮಿಕೀಟಗಳು ಮನೆಯೊಳಗೆ ಹೋಗದಂತೆ ತಡೆಯುವ ಶಕ್ತಿ ಈ ಪುಟ್ಟ ಗಿಡಕ್ಕೆ ಇದೆ. ಆ ಕಾರಣಕ್ಕೆ ಪ್ರತಿಯೊಬ್ಬ ಹಿಂದೂವಿನ ಮನೆಯಲ್ಲಿಯೂ ತುಳಸಿಕಟ್ಟೆ ಅಥವಾ ಗಿಡವಿದ್ದು ಜನರು ಭಯ ಭಕ್ತಿಯಿಂದ ಪೂಜಿಸುತ್ತಾರೆ.ತುಳಿಸಿ ಗಾಳಿಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಇದೆ. ಎಂದರೆ ಅದರಲ್ಲಿ ಎಷ್ಟು ಔಷಧೀಯ ಗುಣಗಳಿವೆ ಎಂಬುದನ್ನು ಅರಿತುಕೊಳ್ಳಬಹುದು. ಇಂಥ ಪೌರಾಣಿಕ ಆಯುರ್ವೇದದಲ್ಲಿ ಮಹತ್ವ ಪಡೆದುಕೊಂಡಿರುವ ತುಳಸಿ ಪೂಜೆ.
ಇಂದು ಉತ್ತಾನ ದ್ವಾದಶಿ, ಅಂದ್ರೆ ತುಳಸಿ ಹಬ್ಬ. ಕಾರ್ತಿಕ ಮಾಸದಲ್ಲಿ ಉತ್ಥಾನ ದ್ವಾದಶಿ ಅತ್ತ್ಯಂತ ಪವಿತ್ರವಾದ ದಿನ. ಉತ್ತಾನ ಅಂದರೆ ಏಳು ಎಂದರ್ಥ. ಪುರಾಣಗಳ ಪ್ರಕಾರ ಶ್ರೀಮನ್ನಾರಾಯಣ ಆಷಾಢ ಶುದ್ಧ ಶಯನ ಏಕಾದಶಿ ಯಂದು ಮಲಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಏಳುತ್ತಾನೆ. ವಿಷ್ಣು ತನ್ನ ಯೋಗ ನಿದ್ರೆಯಿಂದ ಎಚ್ಚರವಾಗುವ ದಿನವೇ ಉತ್ತಾನ ದ್ವಾದಶಿ. ವೃಕಾಂತದೊಡೆಯ ಶ್ರೀಮನ್ನಾರಾಯಣ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತರಿಗೆ ಈ ದಿನ ದರ್ಶನ ಕೊಡುತ್ತಾನೆ ಅನ್ನೋ ಪ್ರತೀತಿ ಇದೆ. ಹಾಲ್ಗಡಲಲ್ಲಿ ಮಲಗಿರೋ ಭಗವಂತನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸಲಾಗುತ್ತೆ ಇದನ್ನು ಕ್ಷೀರಾಬ್ಧಿ ವ್ರತವೆಂದೂ ಕರೆಯಲಾಗುತ್ತೆ, ಈ ದಿನವನ್ನು ತುಳಿಸಿ ಹಬ್ಬವೆಂದು ಹೆಂಗಳೆಯರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ರಾ. ಹ ತಿಮ್ಮೇನಹಳ್ಳಿ ಶಿವಮೊಗ್ಗ