ಶಿವಮೊಗ್ಗ,ನ.22: ಸಾರ್ವಜನಿಕರಿಂದ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ವಿವಿಧ ವಿಭಾಗಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆ ನೀಡಬೇಕಾಗಿರುವುದು ಆಸ್ಪತ್ರೆ ಕರ್ತವ್ಯವಾಗಿದೆ. ಆದರೆ ಹಣ ಪಡೆಯುತ್ತಿರುವ ಸಂಗತಿ ಗಮನಕ್ಕೆ ಬಂದಿದೆ, ಈ ಕುರಿತು ಹಣ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಬಿಪಿಎಲ್ ಕಾರ್ಡುದಾರರಿಗೆ ಚಿಕಿತ್ಸೆ ನೀಡುವಲ್ಲಿ ಆಗುತ್ತಿರುವ ವಿಳಂಬ ಮತ್ತು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಎಚ್ಚರಿಸಿದ ಅವರು ಆಸ್ಪತ್ರೆಯ ಕೌಂಟರ್ನಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ನಿರ್ದೇಶನ ನೀಡಿದರು.

ಆಸ್ಪತ್ರೆಯ ಸ್ಕ್ಯಾನಿಂಗ್ ವಿಭಾಗದಲ್ಲಿ ಆಗುತ್ತಿರುವ ವಿಳಂಬದ ಕುರಿತು ನನ್ನ ಗಮನಕ್ಕೆ ಬಂದಿದ್ದು, ಇದನ್ನು ಕೂಡಲೇ ಸರಿಪಡಿಸಬೇಕು. ಆಸ್ಪತ್ರೆಯ ಮೆಡಿಕಲ್ ಸ್ಟೋರ್ ನಲ್ಲಿ ಹಲವಾರು ಔಷಧಿಗಳ ಅಲಭ್ಯತೆ ಬಗ್ಗೆ ದೂರುಗಳು ಬಂದಿವೆ ಎಂದರು.

ಆಸ್ಪತ್ರೆಯ ಔಷಧಿ ಉಗ್ರಾಣಕ್ಕೂ ಭೇಟಿ ನೀಡಿ, ಹಲವಾರು ಸಮಸ್ಯೆಗಳನ್ನು ಕಣ್ಣಾರೆ ಕಂಡ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಸರ್ಕಾರ ಬಡವರನ್ನೇ ಬಗ್ಗುಬಡಿಯುವ ಕಾರ್ಯ ಮಾಡುತ್ತಿದೆ. ಗ್ಯಾರಂಟಿಯ ಯೋಜನೆಗೆ ಹಣ ಜೋಡಿಸಲು ಬಡವರಿಂದಲೇ ಹಣ ಕಿತ್ತುಕೊಳ್ಳುತ್ತಿದೆ. ಈ ಸರ್ಕಾರ ಬಂದ ಮೇಲೆ ಸರ್ಕಾರಿ ಆಸ್ಪತ್ರೆಯ ಎಲ್ಲಾ ಚಿಕಿತ್ಸಾ ವೆಚ್ಚ ದ್ವಿಗುಣಗೊಂಡಿದೆ. ಜೀವ ಉಳಿಸುವ ಪ್ರಮುಖ ಔಷಧಿಗಳನ್ನು ಕೂಡ ವೈದ್ಯರು ಹೊರಗಡೆ ಬರೆದುಕೊಳ್ಳುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಬಳಸಲು ಪ್ರತಿನಿತ್ಯ 10 ಸಾವಿರ ರೂ.ಗಳ ನಿಧಿಯಿದ್ದರೂ ಅದನ್ನು ದುರ್ಬಳಕೆ ಮಾಡುತ್ತಿದ್ದಾರೆ. ವಾಂತಿ ಬೇದಿಗೂ ಕೂಡ ಮೆಗ್ಗಾನ್ ಆಸ್ಪತ್ರೆಯಲ್ಲಿ ಔಷಧಿ ಲಭ್ಯವಿಲ್ಲ. ವೈದ್ಯರನ್ನು ವಿಚಾರಿಸಿದರೆ ಮೂರು ತಿಂಗಳು ಆಗಿದೆ. ಇನ್ನೂ ಔಷಧಿಗಳು ಬಂದಿಲ್ಲ. ನಾವು ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಟೆಂಡರ್ ಪ್ರಕ್ರಿಯೆ ಮುಗಿದಿದೆ ಎನ್ನುತ್ತಾರೆ. ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ. ಜೀವನಾವಶ್ಯಕ ಔಷಧಿಗಳೇ ಸರ್ಕಾರಿ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದರೆ ಬಡ ರೋಗಿಗಳ ಕಥೆ ಏನಾಗಬಹುದು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾ ಅಧೀಕ್ಷಕ ಮತ್ತು ಸಿಮ್ಸ್ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.

ಇನ್ನೂ ಮುಂದೆ ಈ ರೀತಿಯ ಅವ್ಯವಸ್ಥೆಯಾಗಬಾರದು. ರಕ್ತ ಪರೀಕ್ಷೆ ಸೇರಿದಂತೆ ತುರ್ತು ಅವಶ್ಯಕ ಮೆಡಿಸಿನ್‍ಗಳು ಹಾಗೂ ಎಲ್ಲಾ ಸೌಲಭ್ಯಗಳು ರೋಗಿಗಳಿಗೆ ಸಿಗುವಂತೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ ಮೊದಲಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!