ಸಾಗರ : ಪುನರ್ ಬಳಕೆ ಇಂಧನ ಆವಿಷ್ಕಾರದ ಬಗ್ಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಸೋಲಾರ್ ಮೂಲಕ ಪರ್ಯಾಯ ಇಂಧನ ಅತ್ಯಂತ ಪ್ರೇರಣಾದಾಯಕ ಕ್ರಮವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಇಲ್ಲಿನ ಸಂಜಯ ವಿದ್ಯಾಕೇಂದ್ರದಲ್ಲಿ ಮಂಗಳವಾರ ಭಾರತ ಸರ್ಕಾರದ ಇಂಧನ ಮಂತ್ರಾಲಯ ಬ್ಯೂರೋ ಆಫ್ ಎನರ್ಜಿ ಎಫಿಸಿಯನ್ಸಿ ಮತ್ತು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ ವಿಷಯ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಬದಲಾದ ದಿನಮಾನಗಳಲ್ಲಿ ಇಂಧನಕ್ಕೆ ಹೆಚ್ಚಿನ ಹಣವನ್ನು ವ್ಯಯಿಸಲಾಗುತ್ತಿದೆ. ಸದಾ ಸಿಗುವ ಸೋಲಾರ್ ಬಳಕೆ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ. ವಿದ್ಯಾರ್ಥಿ ಯುವಜನರು ಸೌರಶಕ್ತಿ ಮೂಲಕ ಪರ್ಯಾಯ ಇಂಧನ ಉಪಯೋಗಿಸುವ ನಿಟ್ಟಿನಲ್ಲಿ ಹೊಸಹೊಸ ಆವಿಷ್ಕಾರಕ್ಕೆ ಮುಂದಾಗಬೇಕು. ಕೇಂದ್ರ ಸರ್ಕಾರದ ಇಂಧನ ಮಂತ್ರಾಲಯ ಮತ್ತು ಕೆಆರ್ಇಡಿಎಲ್ ಇಂತಹ ಪ್ರಯೋಗಕ್ಕೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಹೇಳಿದರು.

ರೋಟರಿ ಸಂಸ್ಥೆ ಅಧ್ಯಕ್ಷೆ ಡಾ. ರಾಜನಂದಿನಿ ಕಾಗೋಡು ಮಾತನಾಡಿ, ತಾಂತ್ರಿಕ ಶಿಕ್ಷಣ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳುವತ್ತ ಆಸಕ್ತಿ ಬೆಳೆಸಿಕೊಳ್ಳಬೇಕು. ಪರ್ಯಾಯ ಇಂಧನ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳುವ ವಿಷಯಗಳತ್ತ ದೇಶ ಹೆಚ್ಚಿನ ಗಮನ ಹರಿಸಿದೆ. ಪ್ರಮುಖವಾಗಿ ಸೌರಶಕ್ತಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದು, ಸೌರಶಕ್ತಿಯನ್ನು ಮನೆಯಲ್ಲಿ ಉತ್ಪಾದಿಸಿ ಮನೆ ಬಳಕೆ ಜೊತೆಗೆ ಅದನ್ನು ಸರ್ಕಾರಕ್ಕೆ ಮಾರಾಟ ಮಾಡಲು ಸಹ ಅವಕಾಶ ಕಲ್ಪಿಸಲಾಗಿದೆ. ಸೌರಶಕ್ತಿ ಬಳಕೆ ಬಗ್ಗೆ ಜಾಗೃತಿ ಮೂಡಿಸುವತ್ತ ಸಹ ವಿದ್ಯಾರ್ಥಿ ಯುವಜನತೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಸೌರಶಕ್ತಿ ಯೋಜನೆಯ ಮುಖ್ಯಸ್ಥ ಮೋಹನ್ ಎಚ್.ಎಸ್. ಮಾತನಾಡಿ, ದೇಶದಲ್ಲಿ ಶೇ. ೨೩ರಷ್ಟು ಸೌರಶಕ್ತಿಯನ್ನು ಬಳಸಲಾಗುತ್ತಿದೆ. ಜಲವಿದ್ಯುತ್ ಸೇರಿದಂತೆ ವಿವಿಧ ವಿದ್ಯುತ್ ಉತ್ಪಾದನೆ ದೀರ್ಘಕಾಲಿಕವಾಗಿ ನಮ್ಮ ನೆರವಿಗೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೋಲಾರ್ ಬಳಕೆ ಮುಂದಿನ ದಿನಗಳಲ್ಲಿ ಅನಿವಾರ್ಯವಾಗುವ ಸಾಧ್ಯತೆ ಹೆಚ್ಚಿದೆ.

ಸೌರಶಕ್ತಿ ಮಹತ್ವ ಮತ್ತು ಬಳಕೆ ಕುರಿತು ಇಂತಹ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರಾಚಾರ್ಯ ಪ್ರಕಾಶ್ ಎಚ್. ಮಾತನಾಡಿದರು. ವೇದಿಕೆಯಲ್ಲಿ ಸೋಲಾರ್ ತಂತ್ರಜ್ಞ ದಯಾನಂದ್ ಸಾಗರ್, ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ರಾಜೀವ್ ಪಿ. ನಾಡಿಗ್ ಉಪಸ್ಥಿತರಿದ್ದರು. ಪ್ರತಾಪ್ ಸಿಂಗ್ ಸ್ವಾಗತಿಸಿದರು. ಮಹಾಬಲೇಶ್ವರ್ ವಂದಿಸಿದರು. ಮಂಜುನಾಥ್ ನಿರೂಪಿಸಿದರು.