ಶಿವಮೊಗ್ಗ: ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಉಕ್ಕಿ ಹರಿಯುತ್ತಿದ್ದು, ಇನ್ನೊಂದೆಡೆ ತಮ್ಮ ಹುಚ್ಚಾಟದಿಂದ ಈಗಾಗಲೇ ಹಲವರು ಪ್ರಾಣತೆತ್ತಿದ್ದಾರೆ. ಆದರೂ, ಈ ಯುವಕರಿಗೆ ಬುದ್ದಿ ಬಂದಂತೆ ತೋರುತ್ತಿಲ್ಲ.
ಹೌದು… ಶಿವಮೊಗ್ಗದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಹೊಳೆ ಬಸ್ ನಿಲ್ದಾಣದ ಬಳಿಯ ಸೇತುವೆ ಮೇಲಿನಿಂದ ನದಿಗೆ ಹಾರಿದ ಯುವಕನೊಬ್ಬ ಈಜಾಡಿರುವ ಘಟನೆ ನಡೆದಿದೆ.
ಹೊಳೆ ಬಸ್ ನಿಲ್ದಾಣದ ಬಳಿಯ ಹೊಸ ಸೇತುವೆ ಮೇಲೆ ನಡೆದು ಸಾಗುತ್ತಿದ್ದ ಯುವಕರ ತಂಡದಿಂದ ಓರ್ವ ಏಕಾಏಕಿ ಸೇತುವೆ ತಡೆಗೋಡೆ ಮೇಲೆ ಹತ್ತಿ ನದಿಗೆ ಹಾರಿದ್ದಾನೆ.
ತುಂಬಿ ಉಕ್ಕಿ ಹರಿಯುತ್ತಿದ್ದ ನದಿಗೆ ಹಾರಿದ ಯುವಕ ಸುಮಾರು ದೂರು ಈಜಿಕೊಂಡು ಸಾಗಿದ್ದಾನೆ. ಯುವಕ ನದಿಗೆ ಹಾರಿದ ದೃಶ್ಯವನ್ನು ಆತನ ಸ್ನೇಹಿತರ ರೆಕಾರ್ಡ್ ಮಾಡಿದ್ದಾರೆ.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಈ ಬಾರಿ ಅತಿಯಾದ ಮಳೆಯಿಂದಾಗಿ ನದಿ, ಜಲಪಾತ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಇಂತಹ ಸಂದರ್ಭದಲ್ಲಿ ನೀರಿನ ಬಳಿ ಹುಚ್ಚಾಟವಾಡಲು ತೆರಳಿ ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿವೆ.
ಮೊನ್ನೆಯಷ್ಟೇ ಭದ್ರಾವತಿಯ ಯುವಕನೊಬ್ಬ ಕೊಲ್ಲೂರು ಬಳಿಯ ಅರಿಶಿನಗುಂಡಿ ಜಲಪಾತದ ಮೇಲೆ ರೀಲ್ಸ್ ಮಾಡುವ ವೇಳೆ ಜಾರಿಬಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಇಂದು ಮಧ್ಯಾಹ್ನದವರೆಗೂ ಹುಡುಕಾಟ ನಡೆಸಿದರೂ ಆತ ಪತ್ತೆಯಾಗಿಲ್ಲ.
ಇಂತಹ ಘಟನೆಗಳ ಬೆನ್ನಲ್ಲೇ, ಯುವಕರ ಇಂತಹ ಹುಚ್ಚಾಟಗಳು ಜೀವಕ್ಕೇ ಆಪತ್ತು ತರುವ ಸಾಧ್ಯತೆಗಳು ಇರುತ್ತವೆ.
ಪೊಲೀಸರು ಇಂತಹ ಹುಚ್ಚಾಟ ಆಡುವ ಯುವಕರನ್ನು ಕಡಿವಾಣ ಹಾಕುವ ಅವಶ್ಯಕತೆಯಿದೆ.