ಶಿವಮೊಗ್ಗ: ಹಸಿವು ಬಡತನ ಶೋಷಣೆಗಳಿಗೆ ಉತ್ತರವೇ ಶಿಕ್ಷಣ ಎಂದು ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಹೇಳಿದರು.


ಅವರು ಇಂದು ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾವಿಂದು ಹಲವು ಸಮಸ್ಯೆಗಳನ್ನು, ಅವಮಾನಗಳನ್ನು, ಶೋಷಣೆ ಬಡತನ ಕಾಣುತ್ತಿದ್ದೇವೆ. ಇದಕ್ಕೆಲ್ಲಾ ಉತ್ತರವೇ ಶಿಕ್ಷಣವಾಗಿದೆ. ಈ ಶಿಕ್ಷಣ ಕೂಡ ಒಳ್ಳೆಯ ಮಾರ್ಗದಲ್ಲಿ ಸಾಗಬೇಕಾಗಿದೆ. ಜ್ಞಾನ ಸಂಪಾದಿಸುವುದರ ಜೊತೆಗೆ ಮಾನವೀಯತೆ ಬೆಳೆಸಿಕೊಳ್ಳಬೇಕಾಗಿದೆ ಎಂದರು.


ನಮ್ಮ ವಿವಿಧ ಕಾಲಘಟ್ಟಗಳ ನಡುವೆ ವಿದ್ಯಾರ್ಥಿ ಜೀವನವೇ ಮುಖ್ಯವಾಗಿದ್ದು, ಇದು ಬಂಗಾರದ ಸಮಯವಾಗಿದೆ. ಸಹ್ಯಾದ್ರಿ ಕಾಲೇಜ್ ಎಂಬುದು ಸಾಂಸ್ಕೃತಿಕ ತವರೂರಾಗಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಜಗತ್ತಿನ ಗಮನಸೆಳೆದಿದ್ದಾರೆ. ನೀವೂ ಕೂಡ ಹೆಸರು, ಜ್ಞಾನಾರ್ಜನೆ, ಮೌಲ್ಯಗಳನ್ನು ಸಂಪಾದಿಸಿ ಈ ನಾಡು ಕಟ್ಟಲು ಕಂಕಣ ತೊಡಿ. ಜಾಣರಾಗುವುದರ ಜೊತೆಗೆ ಹೃದಯವಂತರಾಗಿ ಎಂದು ಕರೆ ನೀಡಿದರು.


ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಚಂದ್ರಪ್ಪ ಕೆ. ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾಗುತ್ತವೆ. ಅದು ಕ್ರಿಯಾಶೀಲತೆ ಮತ್ತು ಬದುಕುವ ದಾರಿ ತೋರಿಸುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಜಾನಪದ ಕಾರ್ಯಕ್ರಮ ನಡೆಸಿಕೊಟ್ಟ ಖ್ಯಾತ ಜಾನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ತಂದೆ ತಾಯಿಗಳಿಗೆ ಗೌರವ ಕೊಡಿ. ಮೊಬೈಲ್ ಮಿತವಾಗಿ ಬಳಸಿ. ಜಾನಪದ ಕ್ಷೇತ್ರವನ್ನು ಉಳಿಸಿ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಕೆ.ಬಿ. ಧನಂಜಯ, ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಇರಬೇಕು. ತಾವು ಕಲಿತರೆ ಮಾತ್ರ ಸಾಲದು, ಬೇರೆಯವರನ್ನೂ ಕಲಿಯುವಂತೆ ಪ್ರೋತ್ಸಾಹಿಸಬೇಕು. ಮಳವಳ್ಳಿ ಮಹದೇವಸ್ವಾಮಿ ಶ್ರೇಷ್ಟ ಜಾನಪದ ಕಲಾವಿದ. ಜನಪದವೇ ಕಣ್ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಅವರೊಂದು ಜನಪದ ಕಣಜವಾಗಿದ್ದಾರೆ. ನೀವು ಕೂಡ ಜನಪದ ಉಳಿಸಿ ಎಂದರು.


ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಎನ್. ರಾಜೇಶ್ವರಿ, ಡಾ.ಎಂ.ಕೆ. ವೀಣಾ, ಐಕ್ಯೂಎಂಸಿ ಸಂಚಾಲಕ ಪ್ರೊ. ಪೂರ್ವಾಚಾರಿ, ಅಧ್ಯಾಪಕರಾದ ಜಿ.ಆರ್. ಲವ. ಡಾ.ಕೆ.ಎನ್. ಮಂಜುನಾಥ್, ಅವಿನಾಶ್, ಮಹದೇವಸ್ವಾಮಿ, ಹಾಲಮ್ಮ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಜನಪದ ಕಲಾವಿದ ಮಳವಳ್ಳಿ ಮಹದೇವಸ್ವಾಮಿ ಅವರಿಂದ ಜಾನಪದ ಗಾಯನ ನಡೆಯಿತು.

By admin

ನಿಮ್ಮದೊಂದು ಉತ್ತರ

error: Content is protected !!