ಶಿವಮೊಗ್ಗ: ಕರೋನಾ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕಾರ್ಮಿಕರಾಗಿ ದುಡಿಯುವ ಸಾಧ್ಯತೆಯಿದ್ದು, ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು.
ಬಾಲಕಾರ್ಮಿಕರ ಬಗ್ಗೆ ದೂರು ಬಂದರೆ ಮಾತ್ರ ಕ್ರಮ ಕೈಗೊಂಡರೆ ಸಾಲದು. ಸ್ವಯಂಪ್ರೇರಿತರಾಗಿ ನಿರಂತರ ಪರಿಶೀಲನೆ ನಡೆಸುವ ಅಗತ್ಯವಿದೆ. ಇದಕ್ಕಾಗಿ ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸ್ಥಳೀಯಾಡಳಿತ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಕ್ಕಳ ಸಹಾಯವಾಣಿಗೆ ಬರುವ ದೂರುಗಳನ್ನು ತಕ್ಷಣ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚಿಸಿದರು.
ಕಟ್ಟಡ ನಿರ್ಮಾಣ ಕಾರ್ಯ ನಡೆಯುವ ಸ್ಥಳಗಳಲ್ಲಿ ಕಾರ್ಮಿಕರ ಮಕ್ಕಳು ಕೆಲಸ ಮಾಡುವ ಸಾಧ್ಯತೆಯಿದ್ದು, ಅಂತಹ ಸ್ಥಳಗಳ ಮೇಲೆ ನಿಗಾ ಇಡಬೇಕು. ಕಟ್ಟಡ ನಿರ್ಮಾಣದಾರರಿಗೆ ಈ ಕುರಿತು ಸ್ಪಷ್ಟ ಎಚ್ಚರಿಕೆ ನೀಡಬೇಕು. ಅಪಾಯಕಾರಿ ಕೆಲಸಗಳಲ್ಲಿ 18ವರ್ಷದ ಒಳಗಿನ ಮಕ್ಕಳನ್ನು ಕೆಲಸಕ್ಕೆ ತೊಡಗಿಸುವಂತಿಲ್ಲ. ಈ ಕುರಿತು ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಬಾಲಕಾರ್ಮಿಕರ ತಪಾಸಣೆ:
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು 622ತಪಾಸಣೆಗಳನ್ನು ನಡೆಸಲಾಗಿದ್ದು 4ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಮೊಕದ್ದಮೆ ದಾಖಲಿಸಲಾಗಿದೆ. ಈ ವರ್ಷದ ಪ್ರಥಮ ಆರು ತಿಂಗಳ ಅವಧಿಯಲ್ಲಿ 106ಕಡೆ ತಪಾಸಣಾ ಕಾರ್ಯ ಕೈಗೊಳ್ಳಲಾಗಿದ್ದು, ಒಬ್ಬ ಬಾಲಕಾರ್ಮಿಕ ಪತ್ತೆಯಾಗಿದ್ದಾನೆ. 2016-17ನೇ ಸಾಲಿನಲ್ಲಿ 11, 17-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಪಿ.ವಿಶ್ವನಾಥ ಅವರು ಮಾಹಿತಿ ನೀಡಿದರು.
ಆಶಾದೀಪ ಯೋಜನೆ ಲಾಭ ಪಡೆಯಿರಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳನ್ನು ಖಾಸಗಿ ವಲಯದ ಉದ್ಯೋಗಗಳಲ್ಲಿ ನೇಮಕಾತಿ ಮಾಡುವುದನ್ನು ಉತ್ತೇಜಿಸಲು ಸರ್ಕಾರ ಆಶಾದೀಪ ಯೋಜನೆ ಜಾರಿಗೊಳಿಸಿದೆ. ಪ.ಜಾತಿ, ಪಂಗಡದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡ ಸಂಸ್ಥೆಗಳು ಪಾವತಿಸುವ ನೌಕರರ ಇ.ಎಸ್.ಐ ಹಾಗೂ ಪಿ.ಎಫ್ ವಂತಿಕೆಯನ್ನು ಯೋಜನೆಯಡಿ ಮರು ಪಾವತಿಸಲಾಗುವುದು. ಅಪ್ರೆಂಟಿಸ್‍ಗಳ ಶಿಷ್ಯವೇತನವನ್ನು ಸಹ ಉದ್ಯೋಗದಾತರಿಗೆ ಮರು ಪಾವತಿಸಲಾಗುವುದು. ಉದ್ದಿಮೆಗಳು ಇದರ ಪ್ರಯೋಜನ ಪಡೆದುಕೊಳ್ಳುವ ಕುರಿತು ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಆಶಾದೀಪ ಯೋಜನೆಯಡಿ ಜಿಲ್ಲೆಯಲ್ಲಿ 50ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 24ಫಲಾನುಭವಿಗಳನ್ನು ನೇಮಕ ಮಾಡಿರುವ ಒಟ್ಟು 3ಸಂಸ್ಥೆಗಳಿಗೆ 1.58ಲಕ್ಷ ರೂ. ಮರು ಪಾವತಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ರಘುನಾಥ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.