ಶಿವಮೊಗ್ಗ: ಹೊಸ ಗ್ಯಾರಂಟಿಗಳ ನಡುವೆ ಹಳೆಯ ಮತ್ತು ಅಗತ್ಯ ಗ್ಯಾರಂಟಿಗಳನ್ನು ಮರೆಯಬಾರದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೊಸ ಸರ್ಕಾರ ಬಂದಿದೆ. ಬಜೆಟ್ ಕೂಡ ಮಂಡನೆಯಾಗಿದೆ. ಗ್ಯಾರಂಟಿಗಳಿಗೆ ಅನುಕೂಲವಾಗುವಂತಹ ಬಜೆಟ್ ಮಂಡನೆಯಾಗಿದೆ. ಬಜೆಟ್‌ಗೆ ಸಂಬಂಧಿಸಿದಂತೆ ಸದನದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಆಶಾದಾಯಕ ನಿರಾಶಾದಾಯಕ ಎರಡೂ ಇವೆ ಎಂದರು.
ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುವಾಗ ಒಂದು ಹೊಸ ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಅದೇನೆಂದರೆ ಹಳೆಯ ಸರ್ಕಾರವನ್ನು ಟೀಕಿಸುವುದೂ ಆಗಿದೆ. ಈ ಟೀಕೆಗೆ ಬಿಜೆಪಿ ಉತ್ತರ ಕೊಡಬೇಕಾದ ಅವಶ್ಯತೆ ಇದೆ. ಆದರೆ ಅವರಿನ್ನೂ ನಾಯಕನನ್ನೇ ಆಯ್ಕೆ ಮಾಡಿಲ್ಲ. ನಮ್ಮ ಪಕ್ಷದ ನಾಯಕ ಕುಮಾರಸ್ವಾಮಿಯವರು ನಿಭಾಯಿಸುತ್ತಿದ್ದಾರೆ. ಬಿಜೆಪಿಯವರು ಕೊನೇಪಕ್ಷ ನಾಯಕನನ್ನು ಆಯ್ಕೆ ಮಾಡುವ ತನಕವಾದರೂ ಕುಮಾರಸ್ವಾಮಿಯವರೇ ನಮ್ಮ ಪಕ್ಷದ ಪರವಾಗಿ ನಾಯಕರಾಗಲಿ ಎನ್ನಬೇಕು ಎಂದು ವ್ಯಂಗ್ಯವಾಡಿದರು.
ಇನ್ನು ಬಜೆಟ್‌ನಲ್ಲಿ ಕಾರ್ಮಿಕ ಕ್ಷೇತ್ರಕ್ಕೆ ಒತ್ತುಕೊಟ್ಟಿಲ್ಲ. ಪೌರ ಕಾರ್ಮಿಕರ ಖಾಯಂ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಯುವಕರಿಗಾಗಿ ಯಾವ ಆಶ್ವಾಸನೆಗಳು ಇಲ್ಲ. ಕ್ರೀಡೆಗೆ ಆದ್ಯತೆ ಇಲ್ಲ. ಆಟೋ ಹಾಗೂ ಟ್ಯಾಕ್ಷಿ ಡ್ರೈವರುಗಳ ಪರವಾಗಿ ಕಲ್ಯಾಣ ಮಂಡಳಿ ರಚನೆ ಮಾಡುತ್ತೇವೆ. ವಿಮೆ ನೀಡುತ್ತೇವೆ ಎಂದಿದ್ದರು. ಅದಕ್ಕೂ ಬಜೆಟ್‌ನಲ್ಲಿ ಜಾಗವಿಲ್ಲ. ಸರ್ಕಾರಿ ಹಳೆ ಪಿಂಚಣಿ ಜಾರಿಗೆ ಸಮಿತಿ ರಚಿಸುತ್ತೇವೆ ಎಂದಷ್ಟೇಹೇಳಿದ್ದಾರೆ. ಆ ಬಗ್ಗೆಯೂ ಪ್ರಸ್ತಾಪವಿಲ್ಲ. ನೌಕರರ ಏಳನೇ ವೇತನ ಜಾರಿಗೆ ಕ್ರಮ ಕೈಗೊಂಡಿಲ್ಲ. ಹೀಗೆ ಹಲವು ಹೊಣೆಗಾರಿಕೆಗಳು ಸರ್ಕಾರ ಮೇಲಿವೆ. ಸರ್ಕಾರ ಏನೋ ಟೇಕಾಫ್ ಆಗಿದೆ. ಅದರೆ ಅದರ ಹಾರಟ ಮಾತ್ರ ನಿಲ್ಲಬಾರದು ಎಂದರು.
ವಿಧಾನ ಪರಿಷತ್ ಚುನಾವಣೆ ಸ್ಪರ್ಧೆಗೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರಿ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸುವುದು ಖಚಿತ. ಹಾಗೆಯೇ ಶಿಕ್ಷಕರ ಕ್ಷೇತ್ರದಿಂದ ಭೋಜೇಗೌಡರು ಸ್ಪರ್ಧೆ ಮಾಡುತ್ತಾರೆ. ಕಾಂಗ್ರೆಸ್‌ನವರ ಹಾಗೆ ನಾವೇನೂ ಚುನಾವಣೆ ಇನ್ನು ಒಂದು ವರ್ಷವಿದ್ದರೂ ಎರಡು ಲಕ್ಷ ರೂ. ಕೊಟ್ಟು ಅರ್ಜಿ ಹಾಕಬೇಕಾಗಿಲ್ಲ. ನಮ್ಮ ಪಕ್ಷದ ಸಿದ್ಧಾಂತಗಳೇ ಬೇರೆ ಇವೆ. ನಾವೇನೂ ಬಿಜೆಪಿಯವರ ಹತ್ತಿರ ಹೋಗುತ್ತಿಲ್ಲ. ಬಿಜೆಪಿಯವರೇ ನಮ್ಮ ಬಳಿ ಬರುತ್ತಾರೆ. ಬಿಜೆಪಿ ಈಗಾಗಲೇ ಸ್ಥಳೀಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಆಸಕ್ತವಾಗಿದೆ ಎಂದರು.
ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಶಿವಮೊಗ್ಗ ನಗರಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಹಾಗೆಯೇ ಉಳಿದಿವೆ. ನೂತನ ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು. ಮುಖ್ಯವಾಗಿ ಜೆನ್‌ನರ್ಮ್ ಯೋಜನೆಯಡಿ ನಗರಕ್ಕೆ ೪೫ ಹೊಸ ಬಸ್‌ಗಳನ್ನು ಬಿಡುಗಡೆ ಮಾಡಬೇಕು. ವಿಳಂಬವಾಗುತ್ತಿರುವ ರೈಲ್ವೆ, ಮೇಲ್ಸೇತುವೆ ಕಾಮಗಾರಿಗಳನ್ನು ಬೇಗನೆ ಮುಗಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಮಾತನಾಡಿ, ಮುಂಬರುವ ಸ್ಥಳೀಯ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆ ಮತ್ತು ಪಕ್ಷದ ಅವಲೋಕನದ ಬಗ್ಗೆ ಬರುವ ಜು.೧೬ನೇ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಜೆಡಿಎಸ್ ಸಮಾಲೋಚನಾ ಸಭೆ ಇದೆ. ಶಾಸಕಿ ಶಾರದಾ ಪೂರ‍್ಯಾ ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಸಭೆಯಲ್ಲಿ ಪಕ್ಷದ ಹಲವು ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಾಮಕೃಷ್ಣ, ಕಡಿದಾಳ್ ಗೋಪಾಲ್, ಸಿದ್ದಪ್ಪ, ದೀಪಕ್ ಸಿಂಗ್, ನಾಗರಾಜ್ ಕಂಕಾರಿ, ವಿನಯ್, ಧೀರರಾಜ್ ಹೊನ್ನವಿಲೆ ಸೇರಿದಂತೆ ಹಲವರಿದ್ದರು.