ಶಿವಮೊಗ್ಗ, ಜುಲೈ 11
       ಮೀನು ಒಂದು ಉತ್ತಮ ಪೌಷ್ಠಿಕ ಮತ್ತು ಆರೋಗ್ಯಕರ ಆಹಾರವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಆರ್.ಸಿ ಜಗದೀಶ್ ಹೇಳಿದರು.  


       ಶಿವಮೊಗ್ಗ ಮೀನುಗಾರಿಕೆ ಇಲಾಖೆ ಮತ್ತು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಸಹಯೋಗದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನ ಕೇಂದ್ರ ಹೊನ್ನವಿಲೆಯಲ್ಲಿ ಜು.10 ರಂದು ಏರ್ಪಡಿಸಲಾಗಿದ್ದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆಯನ್ನು ಮೀನು ಪಾಲನಾ ಕೊಳಗಳಿಗೆ ಮೀನು ಮರಿ ಬಿತ್ತನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.


       ಪ್ರಸ್ತುತ ಮೀನುಗಾರಿಕೆಯು ಅತ್ಯಂತ ಲಾಭದಾಯಕ ಉದ್ದಿಮೆಯಾಗಿದೆ. ಇದರಿಂದಾಗಿ ದೇಶಕ್ಕೆ ಪೌಷ್ಠಿಕ ಆಹಾರ ನೀಡುವುದರಲ್ಲಿ ಹಾಗೂ ಲಕ್ಷಾಂತರ ಜನರಿಗೆ ಉದ್ಯೋಗ ನೀಡುವುದರಲ್ಲಿ ಮೀನುಗಾರಿಕೆ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.


      ಬಿದರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ ಮಾತನಾಡಿ, ನೆರೆದಿದ್ದ ಎಲ್ಲಾ ಮೀನು ಕೃಷಿಕರಿಗೆ ಮೀನು ಕೃಷಿಯ ಬಗ್ಗೆ ಇನ್ನೂ ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ವಿಶ್ವವಿದ್ಯಾಲಯ ಹಾಗೂ ಮೀನುಗಾರಿಕೆ ಇಲಾಖೆಯಿಂದ ಪಡೆದು ಹೆಚ್ಚಿನ ಮೀನು ಉತ್ಪಾದನೆಯೊಂದಿಗೆ ಲಾಭಗಳಿಸಬೇಕೆಂದು ಕರೆ ಕೊಟ್ಟರು.
      ಕಾರ್ಯಕ್ರಮದಲ್ಲಿ ಮೀನುಗಾರಿಕೆ ಜಂಟಿ ನಿರ್ದೇಶಕರಾದ ಓ.ಗಿರೀಶ್, ವಿಶ್ವವಿದ್ಯಾಲಯ ಸಂಶೋಧನಾ ನಿರ್ದೇಶಕರಾದ ಡಾ. ಬಿ.ಹೇಮ್ಲಾನಾಯಕ, ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಸ್.ಪ್ರದೀಪ್, ಮೈಸೂರಿನ ಕರ್ನಾಟಕ ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಪಿ.ರಾಮಯ್ಯ, ಜಿಲ್ಲೆಯ ಮೀನುಗಾರಿಕೆ ಉಪನಿರ್ದೇಶಕ ಜಿ.ಎಂ.ಶಿವಕುಮಾರ್, ಸಹಾಯಕ ಪ್ರಾಧ್ಯಾಪಕ ಡಾ. ಶಾಂತನಗೌಡ ಎ.ಹೆಚ್, ಮೀನುಗಾರಿಕೆ ಸಹಾಯಕ ನಿರ್ದೇಶಕ ರಾಘವೇಂದ್ರ ಕೆ.ಎಸ್, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೀನುಗಾರಿಕೆ ಸಹಾಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು, ವಿಜ್ಞಾನಿಗಳು, ಲೀಡ್ ಬ್ಯಾಂಕಿನ ಅಧಿಕಾರಿಗಳು, ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಮೀನು ಕೃಷಿಕರು, ಇಲಾಖಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!