ಮಳೆಯಿಂದ ನಷ್ಟ ಅನುಭವಿಸಿದವರಿಗೆ ಕೂಡಲೇ ಪರಿಹಾರ ವಿತರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಲ್ಲಿನ ನೆಹರೂ ನಗರ ಬಡಾವಣೆಯಲ್ಲಿರುವ ಸರ್ಕಾರಿ ಉರ್ದು ಶಾಲೆಯ ಕಟ್ಟಡಕ್ಕೆ ಹಾನಿ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಗರ ವ್ಯಾಪ್ತಿಯಲ್ಲಿ ನಾಲ್ಕು ಮನೆಗಳ ಗೋಡೆ ಕುಸಿದಿವೆ. ಗ್ರಾಮೀಣ ಭಾಗದಲ್ಲೂ ಮನೆ, ಕೊಟ್ಟಿಗೆಗಳಿಗೆ ಹಾನಿ ಉಂಟಾಗಿರುವ ವರದಿಗಳಿವೆ. ನಷ್ಟ ಅನುಭವಿಸಿದವರಿಗೆ ತಕ್ಷಣ ?೧೦,೦೦೦ ಪರಿಹಾರ ನೀಡಲು ಸೂಚಿಸಲಾಗಿದೆ. ನಂತರ ನಷ್ಟದ ಪ್ರಮಾಣ ಆಧರಿಸಿ ಪರಿಹಾರ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ನೆಹರೂ ನಗರದ ಉರ್ದು ಶಾಲೆಯ ಒಂದು ಕೊಠಡಿಯ ಛಾವಣಿಗೆ ಹಾನಿ ಉಂಟಾಗಿದೆ. ಶಾಲೆಯ ಕಾಂಪೌಂಡ್ ಕುಸಿದಿದೆ. ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಮಳೆಗಾಲದ ನಂತರ ಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.
ಮೀನು ಮಾರುಕಟ್ಟೆ ಪರಿಶೀಲನೆ ನಡೆಸಿದ ಅವರು ನಿರ್ಮಾಣ ಹಂತದಲ್ಲಿರುವ ಮಾರುಕಟ್ಟೆ ಕಟ್ಟಡವನ್ನು ಮೂರು ತಿಂಗಳೊಳಗೆ ಉದ್ಘಾಟಿಸುವಂತೆ ಸೂಚಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳುವುದು ಮುಖ್ಯ. ಮೀನು ಮಾರಾಟಗಾರರಲ್ಲಿ ಹೆಚ್ಚಿನವರು ಮುಸ್ಲಿಮರು ಎನ್ನುವ ಕಾರಣಕ್ಕೆ ಕ್ಷೇತ್ರದ ಹಿಂದಿನ ಶಾಸಕರು ಮಾರುಕಟ್ಟೆ ಉದ್ಘಾಟನೆಗೆ ಆಸಕ್ತಿ ತೋರಿಲ್ಲ ಎಂದು ಬೇಳೂರು ದೂರಿದರು.
ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ನಾದಿರಾ ಪರ್ವಿನ್, ಮಾಜಿ ಸದಸ್ಯರಾದ ಐ.ಎನ್. ಸುರೇಶ್ ಬಾಬು, ಮಂಜೂರ್ ಆಲಿಖಾನ್, ತಾರಾಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ಅಕ್ಬರ್ ಖಾನ್, ಅಬ್ದುಲ್ ಹಮೀದ್, ಕಬೀರ್ ಚಿಪ್ಪಳಿ, ಶಿಕ್ಷಣ ಇಲಾಖೆಯ ಗುರುರಾಜ್, ವಿ.ಟಿ.ಸ್ವಾಮಿ ಇದ್ದರು.